ಮಂಜೇಶ್ವರ, ಮಾ.೨೧: ಸಿಮ್ ಕಾರ್ಡ್ ಕ್ಲೋನಿಂಗ್ ತಂತ್ರಜ್ಞಾನದ ಮೂಲಕ ನಕಲಿ ಪೋಸ್ಟ್‌ಪೇಯ್ಡ್ ಮೊಬೈಲ್ ಸಿಮ್ ಕಾರ್ಡ್‌ಗಳನ್ನು ತಯಾರಿಸಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕರೆಗಳನ್ನು ಮಾಡುವ ಜಾಲವೊಂದು ಕೇರಳದಲ್ಲಿ ಸಕ್ರಿಯವಾಗಿರುವ ಅಂಶ ಬೆಳಕಿಗೆ ಬಂದಿದೆ.
ಈ ತಂತ್ರಜ್ಞಾನದ ಮೂಲಕ ಒಬ್ಬ ವ್ಯಕ್ತಿಯ ಅಸಲಿ ಪೋಸ್ಟ್‌ಪೇಯ್ಡ್ ಮೊಬೈಲ್ ಸಿಮ್ ಕಾರ್ಡ್‌ನ ನಂಬರನ್ನು ಬಳಸಿ ನಕಲಿ ಸಿಮ್ ಕಾರ್ಡ್ ತಯಾರಿಸಲಾಗುತ್ತದೆ ಹಾಗೂ ಇದರ ಮೂಲಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕರೆಗಳನ್ನು ಮಾಡಲಾಗುತ್ತದೆ. ನಕಲಿ ಸಿಮ್ ಕಾರ್ಡ್‌ನ ಮೂಲಕ ಕರೆ ಮಾಡಿದಾಗ ಅದರ ಬಿಲ್ ಬರುವುದು ಮಾತ್ರ ಅಸಲಿ ಸಿಮ್ ಕಾರ್ಡ್ ಹೊಂದಿರುವ ಗ್ರಾಹಕನಿಗೆ. ಕಾಸರಗೋಡು, ಮಂಜೇಶ್ವರ ಸೇರಿದಂತೆ ರಾಜ್ಯದ ವಿವಿಧ ಕಡೆ ೫೦ಕ್ಕೂ ಹೆಚ್ಚು ಇಂತಹ ನಕಲಿ ಸಿಮ್ ಕಾರ್ಡ್‌ಗಳು ಕಾರ್ಯಾಚರಿಸುತ್ತಿವೆ ಎಂಬ ಅಂಶ ಬೆಳಕಿಗೆ ಬಂದಿದ್ದು, ಮಾರುಕಟ್ಟೆಯಲ್ಲಿರುವ ಸಕ್ರಿಯಗೊಳ್ಳದ ಅಸಲಿ ಸಿಮ್‌ಗಳ ನಂಬರನ್ನೇ ಈ ತಂತ್ರಕ್ಕೆ ಉಪಯೋಗಿ ಸಲಾಗುತ್ತಿದೆ ಎನ್ನಲಾಗುತ್ತಿದೆ.
ಚೀನಾ ದೇಶ ತಯಾರಿಸಿದ ಯಂತ್ರವೊಂದರಿಂದ ಈ ಸಿಮ್‌ಗಳನ್ನು ತಯಾರಿಸಲಾಗುತ್ತಿದ್ದು, ಈ ಯಂತ್ರದಿಂದ ೫ ನಿಮಿಷದಲ್ಲಿ ೨ ಸಿಮ್‌ಕಾರ್ಡ್‌ಗಳನ್ನು ತಯಾರಿಸ ಬಹುದು ಎನ್ನಲಾಗುತ್ತಿದೆ. ಉಗ್ರಗಾಮಿ, ಭಯೋತ್ಪಾದನೆ ಮೊದಲಾದ ಕಾನೂನು ಬಾಹಿರ ಚಟುವಟಿಕೆಗಳಿಗೆ ಇಂತಹ ನಕಲಿ ಸಿಮ್ ಕಾರ್ಡ್‌ಗಳನ್ನು ಬಳಸಿಕೊಳ್ಳಲಾ ಗುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಯುತ್ತಿದೆ.