ಕಾಸರಗೋಡು, ಮಾ.೨೧: ನಗರದಿಂದ ಪ್ರಕಟಗೊಳ್ಳುತ್ತಿರುವ ‘ಕಾರವಲ್’ ಸಂಜೆ ದೈನಿಕದ ಕಚೇರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ನಿನ್ನೆ ರಾತ್ರಿ ನಡೆದಿದೆ.
ಕಾಸರಗೋಡಿನಲ್ಲಿರುವ ‘ಕಾರವಲ್’ ಕಚೇರಿಗೆ ದುಷ್ಕರ್ಮಿಗಳು ಶನಿವಾರ ರಾತ್ರಿ ಬೆಂಕಿ ಹಚ್ಚಿದ್ದು, ಘಟನೆಯಿಂದಾಗಿ ಕಚೇರಿಯಲ್ಲಿದ್ದ ಕಂಪ್ಯೂಟರ್, ಡೆಸ್ಕ್‌ಟಾಪ್ ಪ್ರಿಂಟರ್, ಫಾಕ್ಸ್, ಪೀಠೋಪಕರಣಗಳು ಹಾಗೂ ದಾಖಲೆಗಳು ಸಂಪೂರ್ಣ ಸುಟ್ಟು ಹೋಗಿವೆ. ಕಚೇರಿಯ ಮುಂಭಾಗದ ಕಿಟಕಿಯ ಗಾಜು ಒಡೆದಿರುವ ದುಷ್ಕರ್ಮಿಗಳು, ಕಚೇರಿಯೊಳಗಡೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಮಧ್ಯರಾತ್ರಿ ೧೨ಗಂಟೆಯ ಸುಮಾರಿಗೆ ಕಚೇರಿಯಿಂದ ಬೆಂಕಿಯೇಳುವುದನ್ನು ಕಂಡ ಕಚೇರಿ ಬಳಿಯ ಪೀಠೋಪಕರಣ ತಯಾರಿ ಘಟಕದ ನೌಕರರು ಅಗ್ನಿ ಶಾಮಕದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಪತ್ರಿಕೆಯಲ್ಲಿ ಬಂದ ವಿವಾದಾಸ್ಪದ ವರದಿಯ ಹಿನ್ನೆಲೆಯಲ್ಲಿ ಸಂಘಟನೆಯೊಂದು ಪತ್ರಿಕಾ ಕಚೇರಿಗೆ ದೂರವಾಣಿ ಮೂಲಕ ಬೆದರಿಕೆ ಯೊಡ್ಡಿದ್ದು, ಈ ಸಂಘಟನೆಯೇ ಈ ಕೃತ್ಯವೆಸಗಿರಬೇಕೆಂದು ಕಾರವಲ್‌ನ ಸಂಪಾದಕ ಎಸ್.ರಾಜು ನಗರ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆ: ಪತ್ರಿಕಾ ಕಚೇರಿ ಮೇಲಿನ ದಾಳಿಯನ್ನು ಖಂಡಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದಲ್ಲಿ ಇಂದು ಪ್ರತಿಭಟನೆ ನಡೆಯಿತು.
ಬಳಿಕ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಶಿಬಿ ಜೋನ್, ಪತ್ರಕರ್ತರಾದ ಕೆ.ಎಂ.ಅಹ್ಮದ್, ರಹ್ಮಾನ್ ತಾಳಂಗಾಡಿ, ವಿನೋದ್ ಥಾಯಮ್ ಮಾತನಾಡಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು.