| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಮಂಗಳೂರು ನಗರಾಭಿವೃದ್ಧಿಗೆ 100 ಕೋಟಿ ರೂ.: ಯಡಿಯೂರಪ್ಪ ಭರವಸೆ |
ಪ್ರಕಟಿಸಿದ ದಿನಾಂಕ : 2010-03-22
ಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ೧ ಸಾವಿರ ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ಆದ್ಯತೆ ನೀಡಲಾಗುತ್ತಿದ್ದು, ಮುಂದಿನ ಎರಡು ವರ್ಷಗಳಲ್ಲಿ ೫ ಸಾವಿರ ಮೆಗಾವ್ಯಾಟ್ ವಿದ್ಯುತ್ ಖರೀದಿ ಮಾಡಲಾಗುವುದು
ಮಂಗಳೂರು, ಮಾ.೨೧: ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ. ಮಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಸರಕಾರ ಕಟಿಬದ್ಧವಾಗಿದ್ದು, ಹೆಚ್ಚುವರಿಯಾಗಿ ೧೦೦ ಕೋಟಿ ರೂ. ಬಿಡುಗಡೆ ಮಾಡಲಾ ಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಇಂದು ಬೆಳಗ್ಗೆ ನಗರದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡಿಕೆ ಖರೀದಿಸಲು ಕ್ಯಾಂಪ್ಕೋ ಸಂಸ್ಥೆಗೆ ೫ ಕೋಟಿ ರೂ. ನೀಡಲಾಗಿದೆ. ಮತ್ತೆ ೩ ಕೋಟಿ ನೀಡಲಾಗುತ್ತದೆ. ಹೆಚ್ಚುವರಿ ಬೇಕಾದರೆ ಮತ್ತಷ್ಟು ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ ಯಡಿಯೂರಪ್ಪ, ಕ್ಯಾಂಪ್ಕೋ ಬೆಂಗಳೂರಿನಲ್ಲಿ ತನ್ನ ಕೇಂದ್ರ ತೆರೆಯಲು ೧೦ ಎಕರೆ ಜಾಗ ನೀಡಲು ಸರಕಾರ ಬದ್ಧವಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ತಾನು ಸರಕಾರ ರಚಿಸುವಾಗ ನೀಡಿದ ಘೋಷಣೆಗಳ ಪೈಕಿ ಬಹುತೇಕ ಅಂಶಗಳನ್ನು ಈಡೇರಿಸಲಾಗಿವೆ. ಆರಂಭದಲ್ಲಿ ಆರ್ಥಿಕ ಕುಸಿತದಿಂದ ಕೆಲವೊಂದು ಸಮಸ್ಯೆಗಳಾಗಿತ್ತು. ಇದೀಗ ಹಣಕಾಸು ಪರಿ ಸ್ಥಿತಿ ಉತ್ತಮವಾಗಿದೆ. ನಾನಾ ಕಡೆಯಿಂದ ಅಭಿನಂದನೆ ವ್ಯಕ್ತವಾಗುತ್ತಿವೆ. ತೆರಿಗೆ ಸಂಗ್ರಹ ದಲ್ಲೂ ಹಿನ್ನಡೆಯಾಗಿತ್ತು. ಈಗ ತೆರಿಗೆ ಸಂಗ್ರಹ ಉತ್ತಮವಾಗಿದ್ದು, ದೇಶದಲ್ಲೇ ರಾಜ್ಯಕ್ಕೆ ಪ್ರಥಮ ಸ್ಥಾನ ಲಭಿಸಿದೆ ಎಂದು ನುಡಿದರು.
ಜೈಲು ಸ್ಥಳಾಂತರ
ನಗರದ ಜೈಲು ಕಾಮಗಾರಿಯನ್ನು ತಕ್ಷಣ ನಿಲ್ಲಿಸಿ, ಹೊರವಲಯಕ್ಕೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಜೈಲು ಕಾಮಗಾರಿ ಭಾಗಶ: ಪೂರ್ಣಗೊಂಡಿದೆಯಲ್ಲಾ... ಈ ಹಂತದಲ್ಲಿ ಸ್ಥಳಾಂತರಿಸುವುದು ಎಷ್ಟು ಸರಿ? ಎಂದು ಪತ್ರಕರ್ತರು ಪ್ರಶ್ನಿಸಿದಾಗ ನಗರ ಪ್ರದೇಶದಲ್ಲಿ ಜೈಲು ಇರುವುದು ಸೂಕ್ತವಲ್ಲ. ಅದನ್ನು ಗ್ರಾಮಾಂತರ ಪ್ರದೇಶಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ.ಪಾಲೆಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಶೆಟ್ಟಿ, ಶಾಸಕ ಯೋUಶ್ ಭಟ್, ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ರಾಜ್ಯ ಸರಕಾರದ ದೆಹಲಿಯ ವಿಶೇಷ ಪ್ರತಿನಿಧಿ ಧನಂಜಯಕುಮಾರ್ ಉಪಸ್ಥಿತರಿದ್ದರು.
ಗೋ ಹತ್ಯೆ ನಿಷೇಧ ಕಾಯ್ದೆಯ ಸಮರ್ಥನೆ
ಗೋ ಹತ್ಯೆ ನಿಷೇಧ ಕಾಯ್ದೆಯು ಐತಿಹಾಸಿಕ ಹೆಜ್ಜೆಯಾಗಿದೆ. ಅದರ ನಿಷೇದಕ್ಕೆ ಸಂವಿಧಾನದಲ್ಲೂ ಅವಕಾಶ ಕಲ್ಪಿಸಲಾಗಿದೆ.
ಗುಜರಾತ್, ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್‌ಗಡ, ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಹಿಂದು ಮತ್ತು ಮುಸ್ಲಿಮ್ ಸಮುದಾಯದ ಮಧ್ಯೆ ಅಶಾಂತಿ ಸೃಷ್ಟಿಸುವ ನಿಟ್ಟಿನಲ್ಲಿ ರಾಬರ್ಟ್ ಕ್ಲೆವ್ ಕಲ್ಕತ್ತಾದಲ್ಲಿ ಕಸಾಯಿ ಖಾನೆ ಆರಂಭಿಸಿದ. ಬ್ರಿಟಿಷರ ಕಾಲದಲ್ಲಿ ೩೦೦ ಕಸಾಯಿ ಖಾನೆಗಳಿದ್ದಿದ್ದರೆ, ಇದೀಗ ೩೫ ಸಾವಿರ ಕಸಾಯಿ ಖಾನೆಗಳಿವೆ. ಇದು ರಾಷ್ಟ್ರಕ್ಕೆ ಶೋಭೆ ತರುವಂತದ್ದಲ್ಲ. ಭಾರತ ಕೃಷಿ ಪ್ರಧಾನ ರಾಷ್ಟ್ರ. ಹಾಗಾಗಿ ಗೋ ಸಂರಕ್ಷಣೆಯ ಅಗತ್ಯವಿದೆ. ಗೋ ಸಂತತಿಯೂ ನಾಶವಾಗುತ್ತಿದ್ದು, ಅದನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನವನ್ನು ರಾಜ್ಯ ಸರಕಾರ ಮಾಡಿದೆ. ಅದರಲ್ಲಿ ರಾಜಕೀಯವೇನೂ ಇಲ್ಲ. ಆದರೆ ಕಾಂಗ್ರೆಸ್ ಮುಸ್ಲಿಮರನ್ನು ಹಿಂದೂಗಳ ವಿರುದ್ಧ ಎತ್ತಿ ಕಟ್ಟುವ ಸಲುವಾಗಿ ಗೋ ಹತ್ಯೆ ನಿಷೇಧದ ಕುರಿತು ರಾಜಕೀಯ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಆರೋಪಿಸಿದರು.
ನೆಹರೂ ಪ್ರಧಾನಿಯಾಗಿದ್ದಾಗ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದರು. ಇಂದಿರಾ ಗಾಂಧಿ ಕೂಡ ಗೋ ಹತ್ಯೆ ನಿಷೇಧ ಕುರಿತು ಎಲ್ಲ ರಾಜ್ಯಗಳಿಗೆ ಪತ್ರ ಬರೆದಿದ್ದರು. ವಿನೋಭಾ ಬಾವೆ, ಡಾ.ಬಿ. ಆರ್.ಅಂಬೇಡ್ಕರ್ ಕೂಡ ಗೋ ಹತ್ಯೆಗೆ ವಿರೋಧವಾಗಿದ್ದರು. ಅಕ್ಬರ್‌ನ ಕಾಲದಲ್ಲಿ ಗೋ ಹತ್ಯೆ ನಿಷೇಧಿಸಲಾಗಿತ್ತು. ಹೈದರ್ ಅಲಿ ಕೂಡ ಗೋ ಹತ್ಯೆ ಮಾಡುವವರ ಕೈ ಕಡಿಯುವಂತೆ ಆದೇಶಿಸಿದ್ದ.
ಟಿಪ್ಪು ಸುಲ್ತಾನ್ ಗೋ ಹತ್ಯೆನಿಷೇಧದ ಪರವಾಗಿದ್ದ. ಆದರೆ, ಕಾಂಗ್ರೆಸ್ ಮಾತ್ರ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿವೆ. ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಇದು ಆರೆಸ್ಸೆಸ್ ಅಜೆಂಡಾ ಎನ್ನುತ್ತಾರೆ. ಹಾಗಿದ್ದರೆ ನೆಹರೂ, ಇಂದಿರಾ ಆರೆಸ್ಸೆಸ್ ಅಜೆಂಡಾದಂತೆ ನಡೆದಿದ್ದಾರೆಯೇ ಎಂದು ಪ್ರಶ್ನಿಸುವ ಮೂಲಕ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಬಲವಾಗಿ ಸಮರ್ಥಿಸಿದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-22 00:00:00
|
|
|
|
|