ಮಾನವನ ನಕರಾತ್ಮಕ ಚಿಂತನೆಯೇ ಆರೋಗ್ಯವನ್ನು ಕೆಡಿಸುತ್ತದೆ: ಪ್ರೊ| ಬಿ.ಎಂ.ಹೆಗ್ಡೆ |
ಪ್ರಕಟಿಸಿದ ದಿನಾಂಕ : 2010-03-22
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಪ್ರತೀಯೋರ್ವ ಮಾನುಷ್ಯನಿಗೂ ಜೀವನಕ್ಕಾಗಿ ವೈದ್ಯರ ಅಗತ್ಯವಿದೆ ಆದರೆ ಔಷಧಿಯ ಅವಶ್ಯವಿಲ್ಲ. ಬದಲಾಗಿ ಮಂದಿಗೊಂದು ಮನೆಮಂದಿಯಂತಹ ಹೃದಯವಂತ ವೈದ್ಯರ ಅಗತ್ಯವಿದೆ. ಪ್ರಸಕ್ತ ಸ್ವಂತಿಕೆಯ ಔಷಧಿ ಸೇವನಾ ಪದ್ಧತಿಯೇ ಜೀವನೋಪಾಯಕ್ಕೆ ಮಾರಕವಾಗಿದೆ ಆದುದರಿಂದ ಸುಖಮಯ ಸಮೃದ್ಧಿಯ ಬದುಕಿಗೆ ಎಲ್ಲರ ಪ್ರೀತಿಯನ್ನು ಅಸ್ತ್ರವಾಗಿಸಿರಿ ಎಂದು ಮಣಿಪಾಲ ವಿಶ್ವವಿದ್ಯಾಲಯ ನಿವೃತ್ತ ಉಪಕುಲಪತಿ, ಭಾರತ ರಾಷ್ಟ್ರದ ಸರ್ವೋನ್ನತ ಪ್ರತಿಷ್ಠಿತ ಗೌರವ ಪದ್ಮಭೂಷಣ ಪುರಸ್ಕಾರಕ್ಕೆ ಆಯ್ಕೆಯಾದ ಪ್ರೊ| ಬಿ.ಎಂ.ಹೆಗ್ಡೆ ಕರೆಯಿತ್ತರು.
ಮುಲುಂಡ್ ಬಂಟ್ಸ್ ಮುಂಬಯಿ ಸಂಸ್ಥೆಯು ಇಂದಿಲ್ಲಿ (೨೧.೦೩.೨೦೧೦) ರವಿವಾರ ಪೂರ್ವಾಹ್ನ ಕುರ್ಲಾ ಪೂರ್ವದ ಬಂಟರ ಭವನದ ಶೀಮತಿ ರಾಧಾಬಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಆಯೋಜಿಸಿದ್ದ ರಕ್ತದೊತ್ತಡ ನಿರ್ವಾಹಣೆ (ಬ್ಲಡ್ ಪ್ರೆಶರ್ ಮ್ಯಾನೇಜ್‌ಮೆಂಟ್) ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಿ ಪ್ರೊ| ಬಿ.ಎಂ.ಹೆಗ್ಡೆ ತಿಳಿಸಿದರು.
ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಜರುಗಿಸಲಾಗಿದ್ದ ಸರಳ ಸಮಾರಂಭ ಮತ್ತು ಉಪನ್ಯಾಸ ಕಾರ್ಯಕ್ರಮಕ್ಕೆ ಪ್ರೊ| ಬಿ.ಎಂ.ಹೆಗ್ಡೆ ಇವರು ದೀಪ ಬೆಳಗಿಸಿ ಚಾಲನೆಯನ್ನೀಡಿದರು.
ರಕ್ತದೊತ್ತಡವನ್ನು ಹಿಡಿತದಲ್ಲಿರಿಸಿಕೊಳ್ಳುವ ವಿಧಾನಗಳು, ಮುಂಜಾಗೃತೆಯ ಕ್ರಮಗಳು, ಔಷಧೋಪಚಾರಗಳು, ರಕ್ತದೊತ್ತಡ ಏರಿಳಿತದ ಕಾರಣಗಳು ಮತ್ತು ಅದಕ್ಕೆ ಪರಿಹಾರ ಇತ್ಯಾದಿಗಳನ್ನು ಪ್ರಾತ್ಯಕ್ಷಿಕೆಗಳೊಂದಿಗೆ ನಿದರ್ಶನವಾಗಿರಿಸಿ ಸ್ವತಃ ಯೋಗ ವನ್ನು ತಿಳಿಯ ಪಡಿಸಿ ಉಪನ್ಯಾಸ ನೀಡಿದ ಪ್ರೊ| ಬಿ.ಎಂ.ಹೆಗ್ಡೆ ಜೀವನ ನಡೆಸುವುದು ಬಲು ಸುಲಭ ಆದರೆ ಜೀವಿಸುವುದು ಮಾತ್ರ ಕಷ್ಟದ ವಿಷಯವಾಗಿದೆ. ಜೀವಕ್ಕೆ ಬುದ್ಧಿ ಇಲ್ಲ ಎನ್ನುವುದು ಸರಿಯಲ್ಲ. ಕಾರಣ ಜೀವದ ಬುದ್ಧಿ ಪ್ರಾಕೃತಿಯ ಕ್ರಮಾನುಸಾರ ಭಗವಂತ ಕಲ್ಪಿಸಿದ ಶ್ರೇಷ್ಠ ಬುದ್ಧಿಯಾಗಿದೆ. ಮಾನವನ ನಕರಾತ್ಮಕ ಚಿಂತನೆ ಮಾತ್ರ ಆರೋಗ್ಯವನ್ನು ಕೆಡಿಸುತ್ತದೆ. ಆದುದರಿಂದ ಆರೋಗ್ಯದಾಯಕ ಬದುಕಿಗೆ ವಾತ್ಸಲ್ಯ ಶ್ವಾಸವನ್ನು ಒಳ ಸೇರಿಸಿ ದ್ವೇಶವನ್ನು ಹೊರ ದಬ್ಬಿರಿ. ಹಿತ ಮಿತದ ಆಹಾರ ಸೇವನೆ ಕ್ಕಿಂತ ಆಯಾಸವಿಲ್ಲದ ವ್ಯಾಯಮ ಆರೋಗ್ಯಕ್ಕೆ ನೆಮ್ಮದಿ ನೀಡ ಬಲ್ಲದು. ರಕ್ತದೊತ್ತಡ ನಿರ್ವಾಹಣೆಗಾಗಿ ಪ್ರಪ್ರಥಮವಾಗಿ ಮನಸ್ಸನ್ನು ಸಮಾನತೆಯಲ್ಲಿರಿಸಿರಿ. ಮನಸ್ಸೇ ಮಾನವನಾಗಿದ್ದಾನೆ. ಆದುದರಿಂದ ಮನಸ್ಸು ಒಂದೇ ಎಲ್ಲಾ ರೋಗಗಳಿಗೆ ಮೂಲ ಕಾರಣ. ದೈನಂದಿನ ಜೀವನದಲ್ಲಿ ಏರಿಳಿತದ ವ್ಯವಸ್ಥೆಯೇ ಪರಿಶುದ್ಧ ಆರೋಗ್ಯವನ್ನು ರೂಪಿಸಲು ಸಾಧ್ಯ. ಪ್ರೀತಿಯಿಲ್ಲದ ಬದುಕು ಶೂನ್ಯವಾಗಿದೆ ಎಂದರು.
ಇದೇ ಶುಭಾವಸರದಲ್ಲಿ ಸರಳ ಸಮಾರಂಭವನ್ನು ಆಯೋಜಿಸಿ ರಾಷ್ಟ್ರದ ಪ್ರತಿಷ್ಠಿತ ಪದ್ಮಭೂಷಣ ಪುರಸ್ಕಾರಕ್ಕೆ ಆಯ್ಕೆಯಾದ ಪ್ರೊ| ಬಿ.ಎಂ.ಹೆಗ್ಡೆ ಇವರನ್ನು ಮುಲುಂಡ್ ಬಂಟ್ಸ್‌ನ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಮತ್ತು ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಭಿನಂದನಾ ಗೌರವ ಸಲ್ಲಿಸಿ ಸನ್ಮಾನಿಸಿದರು.
"ನಮ್ಮದು ಮುಲುಂಡ್ ಗುತ್ತು ಆಗಿದ್ದು ಬಿ.ಎಂ ಹೆಗ್ಡೆ ಇವರು ಈ ಗುತ್ತಿನ ಪಟ್ಲೇರ್ ಆಗಿದ್ದಾರೆ. ಸಮಸ್ತ ಜನತೆಯ ನೆಮ್ಮದಿಯ ಬಾಳಿಗೆ ನಮ್ಮ ಸಂಸ್ಥೆ ಪ್ರಯತ್ನಿಸುತ್ತಿದೆ. ನಮ್ಮ ಸಂಸ್ಥೆಯಲ್ಲಿ ಆರ್ಥಿಕ ಬಲಕ್ಕಿಂತಲೂ ಸಾಂಘಿಕ ಶಕ್ತಿ ಅಧಿಕವಾಗಿ ಶ್ರಮಿಸುತ್ತಿದೆ"ಎಂದು ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ತಿಳಿಸಿದರು.
"ಮುಂಬಯಿಯಲ್ಲಿ ಹಲವು ಬಂಟರ ಸಂಘಟನೆಗಳಿವೆ ಆದರೆ ಎಲ್ಲಾ ಸಂಸ್ಥಗಳಿಗೆ ಬಂಟ್ಸ್ ಸಂಘ ಮುಂಬಯಿ ಒಂದೇ ಮಾತೃಸಂಸ್ಥೆಯಾಗಿದೆ. ಹಲವು ಬಂಟರ ಸಂಘಗಳಿಂದ ಏಕಾತೆ ಕಾಣುತ್ತಿದ್ದು ನಾವೆಲ್ಲರೂ ಸಹಬಾಳ್ವೆಯ ಜೀವನವನ್ನು ಮೈಗೂಡಿಸಿ ಕೊಂಡಿದ್ದೇವೆ. ಏಕತೆ ಇದ್ದಲ್ಲಿ ಸಾರ್ಥಕತೆ ಸಾಧ್ಯವಾಗಿದ್ದು ಇದಕ್ಕೆ ಬಂಟ ಸಮೂದಾಯದ ಸಾಂಘಿಕ ಬದುಕೇ ಸಾಕ್ಷಿಯಾಗಿದೆ."ಎಂದು ಐಕಳ ಹರೀಶ್ ಶೆಟ್ಟಿ ತನ್ನ ಅಧ್ಯಕ್ಷೀಯ ಭಾಷಣದಲ್ಲಿ ನುಡಿದರು.
ವೇದಿಕೆಯಲ್ಲಿ ಮುಲುಂಡ್ ಬಂಟ್ಸ್‌ನ ಸಂಚಾಲಕ ಸುರೇಶ್ ಬಿ. ಶೆಟ್ಟಿ, ಉಪಾಧ್ಯಕ್ಷ ಡಾ| ಸತ್ಯಪ್ರಕಾಶ್ ಶೆಟ್ಟಿ, ಗೌ| ಕಾರ್ಯದರ್ಶಿ ಪಲಿಮಾರು ವಸಂತ್ ಎನ್.ಶೆಟ್ಟಿ, ಗೌ| ಕೋಶಾಧಿಕಾರಿ ಕೆ. ಜಯ ಸೂಡ, ಜೊತೆ ಕಾರ್ಯದರ್ಶಿಗಳಾದ ಅನಂತ ಕೆ.ಅಡ್ಯಂತಾಯ ಹಾಗೂ ಪ್ರಭಾಕರ್ ಎನ್.ಶೆಟ್ಟಿ ಮತ್ತು ಜೊತೆ ಕೋಶಾಧಿಕಾರಿ ಹೇಮಂತ್ ವಿ.ಶೆಟ್ಟಿ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸುಜತಾ ಕೆ.ಶೆಟ್ಟಿ ಮತ್ತಿತರರು ವೇದಿಕೆಯಲ್ಲಿ ಆಸೀನರಾಗಿದ್ದರು.
ಕಿಕ್ಕಿರಿರು ತುಂಬಿದ ಸಭಾಗೃಹವನ್ನುದ್ದೇಶಿಸಿ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಸ್ವಾಗತಿಸಿ ಅತಿಥಿಗಳಿಗೆ ಪುಷ್ಫ ಗೌರವ ಸಲ್ಲಿಸಿದದರು. ಸಂಚಾಲಕ ಸುರೇಶ್ ಬಿ. ಶೆಟ್ಟಿ ಇವರು ಆರೋಗ್ಯ ಶಿಬಿರದ ಮಹತ್ವವನ್ನು ವಿವರಿಸಿ ಕಾರ್ಯಕ್ರಮ ನಿರೂಪಿಸಿದರು.
ಕೆ. ಜಯ ಸೂಡ ಉಪನ್ಯಾಸಕರನ್ನು ಪರಿಚಯಿಸಿದರು. ಶ್ರೀಮತಿ ಸುಜತಾ ಕೆ.ಶೆಟ್ಟಿ ಪ್ರಾರ್ಥನೆಯನ್ನಾಡಿದರು.
ಉಪನ್ಯಾಸ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ್ದ ಐಎನ್‌ಜಿ ವೈಶ್ಯ ಬ್ಯಾಂಕ್‌ನ ಉನ್ನತಾಧಿಕಾರಿ ಸಂತಾನು ಭಗತ್ ಬ್ಯಾಂಕ್‌ನ ಕಾರ್ಯವೈಖರಿಯನ್ನು ವಿವರಿಸಿದರು.
ಡಾ| ಸತ್ಯಪ್ರಕಾಶ್ ಶೆಟ್ಟಿ ವಂದನಾರ್ಪಣೆಗೈದರು.
ವರದಿಯ ವಿವರಗಳು |
 |
ಕೃಪೆ : ಚಿತ್ರ / ವರದಿ : ರೋನ್ಸ್ ಬಂಟ್ವಾಳ್ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-22 00:00:00
|
|
|