ಮತ್ತೆ ಮಾಯಾ ರಾಜಕೀಯ; 100 ಬ್ರಾಹ್ಮಣ ವಕೀಲರ ವಜಾ! |
ಪ್ರಕಟಿಸಿದ ದಿನಾಂಕ : 2010-03-22
ನವದೆಹಲಿ, ಶನಿವಾರ, 20 ಮಾರ್ಚ್ 2010
ಬಹುಜನ ಸಮಾಜವಾದಿ ಪಕ್ಷದ ಬ್ರಾಹ್ಮಣ ಮುಖ ಹಾಗೂ ಈ ಹಿಂದಿನ ಚುನಾವಣೆಯಲ್ಲಿ ಬ್ರಾಹ್ಮಹರನ್ನು ಸೆಳೆಯುವಲ್ಲಿ ಮಹತ್ವದ ಪಾತ್ರವಹಿಸಿದ್ದ ಸತೀಶ್ ಚಂದ್ರ ಮಿಶ್ರಾ ಸೇರಿದಂತೆ 100ಕ್ಕೂ ಹೆಚ್ಚು ಬ್ರಾಹ್ಮಣ ಸರಕಾರಿ ವಕೀಲರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ವಜಾಗೊಳಿಸಿದ್ದಾರೆ.
ಒಟ್ಟು 145 ಮಂದಿ ಸರಕಾರಿ ಪ್ರಾಸಿಕ್ಯೂಟರುಗಳನ್ನು ವಜಾಗೊಳಿಸಿರುವ ಸರಕಾರ, ಅವರ ನಿರ್ವಹಣೆಯಲ್ಲಿನ ಲೋಪವನ್ನು ಕಾರಣವೆಂದು ಎತ್ತಿ ತೋರಿಸಿದೆ.
ಅತೃಪ್ತಕರ ನಿರ್ವಹಣೆಯ ಕಾರಣದಿಂದಾಗಿ ಈ ಸರಕಾರಿ ವಕೀಲರುಗಳನ್ನು ಕೈ ಬಿಡಲಾಗಿದೆ ಎಂದು ಸರಕಾರದ ಆದೇಶವನ್ನು ಕಾನೂನು ವಿಭಾಗವು ಬಿಡುಗಡೆ ಮಾಡಿದೆ.
ಉತ್ತರ ಪ್ರದೇಶದಲ್ಲಿ ಒಟ್ಟು 639 ಸರಕಾರಿ ವಕೀಲರಿದ್ದಾರೆ. ಇವರ ಸೇವೆಯನ್ನು ಕಾಲದಿಂದ ಕಾಲಕ್ಕೆ ಪರಿಶೀಲನೆ ನಡೆಸಿಕೊಂಡು ಬರಲಾಗಿದೆ. ಕಾರ್ಯನಿರ್ವಹಣೆ ಅತ್ಯುತ್ತಮವಾಗಿದ್ದವರನ್ನು ಮಾತ್ರ ಉಳಿಸಿಕೊಳ್ಳಲಾಗುತ್ತದೆ ಎಂದು ಸರಕಾರ ಹೇಳಿದೆ.
ಮತ್ತೆ ದಲಿತ ಓಟ್ ಬ್ಯಾಂಕ್ ರಾಜಕೀಯ...
ಕಳೆದ ಚುನಾವಣೆಯಲ್ಲಿ ಮಹತ್ವದ ಪಾತ್ರವಹಿಸಿದ್ದ ಸತೀಶ್ ಚಂದ್ರ ಮಿಶ್ರಾ ಅವರು ಮಾಯಾವತಿಯವರ ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸುತ್ತಿದ್ದರು. ಇತರ ಬ್ರಾಹ್ಮಣ ವಕೀಲರೊಂದಿಗೆ ಅವರನ್ನೂ ಇದೀಗ ವಜಾಗೊಳಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಇತ್ತೀಚೆಗಷ್ಟೇ ಲಕ್ನೋದಲ್ಲಿ ನಡೆದಿದ್ದ ಬಿಎಸ್‌ಪಿ ಬೆಳ್ಳಿ ಹಬ್ಬದ ಕಾರ್ಯಕ್ರಮದಲ್ಲೂ ಮಿಶ್ರಾ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಕೆಲವೇ ದಿನಗಳ ಹಿಂದಷ್ಟೇ ಉತ್ತರ ಪ್ರದೇಶದ ಅಖಿಲ ಭಾರತ ಕಾನೂನು ವಿಭಾಗದ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಮಿಶ್ರಾ ಅವರನ್ನು ಕಡೆಗಣಿಸಲು ಕಾರಣಗಳೇನು ಎಂದು ಹಲವರ ಪ್ರಶ್ನೆಯಾಗಿತ್ತು.
ಇದೀಗ ವಜಾಗೊಂಡಿರುವ ಬ್ರಾಹ್ಮಣ ವಕೀಲರು ಬಹುತೇಕ ಮಿಶ್ರಾ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದವರು ಎಂದು ಹೇಳಲಾಗಿದೆ. ಕೆಲವೇ ದಿನಗಳ ಹಿಂದಷ್ಟೇ ಮುಖ್ಯಮಂತ್ರಿಯವರ ಕಚೇರಿಯಲ್ಲಿದ್ದ ಇಬ್ಬರು ಬ್ರಾಹ್ಮಣ ಅಧಿಕಾರಿಗಳಾದ ವಿಜಯ ಶಂಕರ್ ಪಾಂಡೆ ಮತ್ತು ಅಜಯ್ ಶಂಕರ್ ಪಾಂಡೆ ಎಂಬವರನ್ನೂ ವಜಾಗೊಳಿಸಲಾಗಿತ್ತು.
ಸೋಮವಾರ ನಡೆದ ಬೆಳ್ಳಿ ಹಬ್ಬದಲ್ಲಿ ಐದು ಕೋಟಿ ರೂಪಾಯಿ ಮೊತ್ತದ ನೋಟಿನ ಮಾಲೆಯನ್ನು ಹಾಕಿಸಿಕೊಂಡು ವಿವಾದಕ್ಕೆ ಒಳಗಾಗಿದ್ದ ಮಾಯಾವತಿ ಮತ್ತೆ ದಲಿತರನ್ನು ಒಲಿಸಿಕೊಳ್ಳುವ ತಂತ್ರಕ್ಕೆ ಮೊರೆ ಹೋಗಿರುವ ಸುಳಿವು ಸಿಕ್ಕಿರುವುದು ಇದೀಗ ಭಾರೀ ಪ್ರಮಾಣದ ಬ್ರಾಹ್ಮಣ ವಕೀಲರನ್ನು ವಜಾಗೊಳಿಸುವುದರೊಂದಿಗೆ ಸ್ಪಷ್ಟವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-22
|
|
|