ಮಂಗಳೂರು: ಹರೀಶ್ ಆದೂರು ಅವರಿಗೆ 2009 ರ ಪ.ಗೋ.ಪ್ರಶಸ್ತಿ ಪ್ರದಾನ. |
ಪ್ರಕಟಿಸಿದ ದಿನಾಂಕ : 2010-03-21
(ಖ್ಯಾತ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣರ ಸಂಸ್ಮರಣಾರ್ಥ ಗ್ರಾಮೀಣ ಪತ್ರಿಕೋದ್ಯಮದ ಪ್ರಶಸ್ತಿ ಯನ್ನು ಪತ್ರಕರ್ತ ಹರೀಶ್ ಆದೂರಿಗೆ ಜಯರಾಮ ರಾಜೇ ಅರಸ್ ವಿತರಿಸಿದರು).
ಮಂಗಳೂರು, ಮಾ.೨೧: 2009 ರ ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಯನ್ನು ಪತ್ರಕರ್ತ, ಪತ್ರಿಕೋದ್ಯಮ ಉಪನ್ಯಾಸಕ ಹರೀಶ್ ಕೆ.ಆದೂರು ಅವರಿಗೆ ರವಿವಾರ ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪ್ರದಾನಿಸಿ ಗೌರವಿಸಲಾಯಿತು.
ಮೇ 26, 2009ರ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ 'ಮಳೆ ಬಿದ್ದ ಮೇಲೆ ಹೊರಜಗತ್ತಿಗಿವರು ಅಜ್ಞಾತ' ವರದಿಗೆ ಪ್ರಶಸ್ತಿ ಲಭಿಸಿತ್ತು. ಕನ್ನಡ ಸಂಸ್ಕೃತಿ ಮತ್ತು ವಾರ್ತಾ ಇಲಾಖೆಯ ಕಾರ್ಯದರ್ಶಿ ಜಯರಾಮರಾಜೆ ಅರಸ್(ಭಾ.ಆ.ಸೇ) ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಿದರು.

ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾದುದು. ವ್ಯಕ್ತಿನಿಷ್ಠೆ, ಪಕ್ಷನಿಷ್ಠೆಗಳಿಂದ ಹೊರತಾಗಿ ವೃತ್ತಿನಿಷ್ಠೆಯನ್ನು ಮಾಧ್ಯಮ ಪ್ರತಿನಿಧಿಗಳು ಪಾಲಿಸಬೇಕು. ಗ್ರಾಮೀಣ ಪ್ರದೇಶದ ವರದಿಗಾರರೂ ಅತ್ಯುತ್ತಮ ಕಾರ್ಯಗಳನ್ನು ಮಾಡುತ್ತಾರೆ. ಅಲ್ಲಿ ಗ್ರಾಮೀಣ ವರದಿಗಾರರು, ಜಿಲ್ಲಾ ವರದಿಗಾರರು, ರಾಜ್ಯ ಮಟ್ಟದ ವರದಿಗಾರರು ಎಂಬ ತಾರತಮ್ಯ ಬೇಧ ಭಾವಗಳು ಬೇಡ. ಜನತೆಯೆಡೆಗೆ ಮಾಧ್ಯಮ ಪ್ರತಿನಿಧಿಗಳು ಸಾಗಿ, ಪ್ರತ್ಯಕ್ಷ ವಿಚಾರಗಳನ್ನು ಪರಾಂಬರಿಸಿ ಸತ್ಯಾಸತ್ಯತೆಗಳನ್ನು ಜನತೆಗೆ, ಸರಕಾರಕ್ಕೆ ತಿಳಿಸುವ ಮಹತ್ತರ ಜವಾಬ್ದಾರಿಯನ್ನು ನಿರ್ವಹಿಸ ಬೇಕೆಂದು ಜಯರಾಮರಾಜೆ ಅರಸ್ ಅಭಿಪ್ರಾಯ ಪಟ್ಟರು.


ರಾಜ್ಯ ಸರಕಾರದಿಂದ ಪ್ರಶಸ್ತಿ: ಇಂದು ರಾಜ್ಯ ಸರಕಾರ ಮಾಡಬೇಕಾದ ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಪತ್ರಕರ್ತರ ಸಂಘ ಮಾಡುತ್ತಿದೆ. ಗ್ರಾಮೀಣ ಪ್ರದೇಶದ ವರದಿಗಾರರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡುವ ಕಾರ್ಯವನ್ನು ಸಂಘ ನಡೆಸುತ್ತಿದೆ. ಇದೊಂದು ಮಾದರಿ ಕಾರ್ಯಕ್ರಮ. ಮುಂದಿನ ದಿನಗಳಲ್ಲಿ ಸರಕಾರದ ವತಿಯಿಂದ ಇಂತಹ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟದಲ್ಲಿ ನಡೆಸಬೇಕಾಗಿದೆ. ಈ ಬಗ್ಗೆ ಸೂಕ್ತ ಮನವರಿಕೆಯನ್ನು ಸರಕಾರಕ್ಕೆ ಮಾಡಲಾಗುವುದು ಎಂದು ಅರಸ್ ಅಭಿಪ್ರಾಯಿಸಿದರು.

ಪಠ್ಯಪುಸ್ತಕಗಳಲ್ಲಿ ಬದಲಾವಣೆ ಬರಲಿ: ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ಹರೀಶ್ ಕೆ.ಆದೂರು ಅವರು ಇಂದು ಪತ್ರಿಕೋದ್ಯಮ ವಿಭಾಗದ ಪಠ್ಯಕ್ರಮಗಳಲ್ಲಿ ಸೂಕ್ತ ಬದಲಾವಣೆ ಆಗಬೇಕಾಗಿದೆ. ವಿ.ವಿ.ಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ. ಮಾಧ್ಯಮ ಜಗತ್ತು ಕ್ಷಿಪ್ರ ಪ್ರಗತಿಯನ್ನು ಕಾಣುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಪತ್ರಿಕೋದ್ಯಮ ಪಠ್ಯಕ್ರಮದಲ್ಲೂ ಅಂತಹುದೇ ಬದಲಾವಣೆ ಬರಬೇಕಾಗಿದೆ ಎಂದು ಅಭಿಪ್ರಾಯಿಸಿದರು.

ಹೆತ್ತವರಿಗೆ ಸಮರ್ಪಣೆ: ಪ್ರತಿಷ್ಠಿತ ಪ.ಗೋ.ಪ್ರಶಸ್ತಿಗೆ ಭಾಜನರಾದ ಹರೀಶ್ ಕೆ.ಆದೂರು ಪ್ರಶಸ್ತಿಯನ್ನು ತನ್ನ ಹೆತ್ತವರಿಗೆ ಸಮರ್ಪಿಸಿದರು. ತನ್ನ ಇಂದಿನ ಈ ಸಾಧನೆಗೆ ಹೆತ್ತವರೇಕಾರಣ. ಆ ಕಾರಣಕ್ಕಾಗಿ ಪ್ರಶಸ್ತಿಯನ್ನು ಅವರಿಗೆ ಸಮರ್ಪಿಸುವುದಾಗಿ ಈ ಸಂದರ್ಭದಲ್ಲಿ ಘೋಷಿಸಿದರು.
ಪ್ರಶಸ್ತಿ ಮೊತ್ತ ರೂ.5001/- , ಪ್ರಶಸ್ತಿ ಪತ್ರ, ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿತ್ತು.
ಸಮಾಜಮುಖಿ ಚಿಂತನೆಗೆ ಒತ್ತು ನೀಡಿ: ಪ.ಗೋ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಯರಾಮರಾಜೇ ಅರಸ್

ಮಾಧ್ಯಮಗಳು ಸಮಾಜಮುಖಿ ಚಿಂತನೆಗೆ ಒತ್ತು ನೀಡುವ ವರದಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದು ಕನ್ನಡ, ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಇಲಾಖೆಯ ಕಾರ್ಯದರ್ಶಿ ಜಯರಾಮರಾಜೇ ಅರಸ್ ತಿಳಿಸಿದ್ದಾರೆ.
ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪ.ಗೋ. ಟ್ರಸ್ಟ್ ವತಿಯಿಂದ ಪ್ರೆಸ್‌ಕ್ಲಬ್‌ನಲ್ಲಿ ಇಂದು ನಡೆದ ಗ್ರಾಮೀಣ ಪತ್ರಿಕೋದ್ಯಮ ಪ್ರಶಸ್ತಿ ವಿತರಣಾ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಗ್ರಾಮೀಣ ಪ್ರದೇಶದ ರೈತರ ಸಮಸ್ಯೆಗಳ ಬಗ್ಗೆ, ಮೂಲಭೂತ ಸೌಕರ್ಯಗಳು ಜನರನ್ನು ತಲುಪುವ ಬಗ್ಗೆ ಹಾಗೂ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ವಸ್ತು ನಿಷ್ಠ ವರದಿಗಳು ಪ್ರಾಮಾಣಿಕ ಕಾಳಜಿಯಿಂದ ಮಾಧ್ಯಮಗಳಲ್ಲಿ ಪ್ರಕಟ ಗೊಂಡರೆ ಸಮಾಜಕ್ಕೆ ಉಪಕಾರವಾ ಗುತ್ತದೆ ಎಂದು ಅರಸ್ ತಿಳಿಸಿದರು.
ಜಿಲ್ಲಾ ಮಟ್ಟದಲ್ಲೂ ಉತ್ತಮ ವರದಿಗಾರರನ್ನು ಗುರುತಿಸಿ ಪ್ರಶಸ್ತಿಯನ್ನು ವಿತರಿಸಲು ಸರಕಾರ ಚಿಂತನೆ ನಡೆಸಿದ್ದು, ರಾಜ್ಯಮಟ್ಟದಲ್ಲಿ ಟಿಎಸ್ಸಾರ್ ಪ್ರಶಸ್ತಿಯ ಮಾದರಿಯಲ್ಲಿ ಈ ಬಾರಿ ಮೊಹರೆ ಹನುಮಂತರಾವ್ ಪ್ರಶಸ್ತಿಯನ್ನು ವಿತರಿಸಲು ನಿರ್ಧರಿಸಲಾಗಿದೆ ಎಂದು ಅರಸ್ ಹೇಳಿದರು.


ಸಂಘದ ಅಧ್ಯಕ್ಷ ಹರ್ಷ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕಿ ರೋಹಿಣಿ, ಪ.ಗೋ. ಟ್ರಸ್ಟ್‌ನ ಸಾವಿತ್ರಿ, ನರಸಿಂಹರಾವ್ ಉಪಸ್ಥಿತರಿದ್ದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗುರುವಪ್ಪ ಎನ್.ಟಿ.ಬಾಳೇಪುಣಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
ಸಂಘದ ಸದಸ್ಯ ಪುಷ್ಪರಾಜ್ ವಂದಿಸಿದರು.
ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-03-21 00:00:00
|
|
| ಪ.ರಾಮಚಂದ್ರ, ರಾಸ್ ಲಫ್ಫಾನ್, ಕತಾರ್ | 2010-03-23 | | ಮಂಗಳೂರಿನ - ಗಲ್ಫ್ ಕನ್ನಡಿಗ ಶ್ರೀ. ಸತೀಶ್ ಕಾಪಿಕಾಡ್ ಅವರ ಪ.ಗೋ.ಪ್ರಶಸ್ತಿ ಪ್ರದಾನ ಸಮಾರಂಭದ ಸವಿಸ್ತಾರ ಚಿತ್ರ ವರದಿಯನ್ನು ವಿದೇಶದ ಕನ್ನಡಿಗರಿಗೆ ತಲುಪಿಸಿದ \"ಗಲ್ಫ್ ಕನ್ನಡಿಗ\" ವೃಂದಕ್ಕೆ ಹೃತ್ಪೂರ್ವಕ ವಂದನೆಗಳು. |
| Girish N.G, Mangalore | 2010-03-22 | | ಪ ಗೋ ರವರ ಕುಟುಂಬದವರ ಚಿತ್ರವನ್ನೂ, ಶ್ರೀ ನರಸಿಂಹ ರಾಯರ ಚಿತ್ರವನ್ನೂ, ಪ್ರಶಸ್ತಿ ಪತ್ರದ ಚಿತ್ರವನ್ನೂ ಪ್ರಕಟಿಸಿದುದಕ್ಕೆ ಧನ್ಯವಾದಗಳು.
|
|