ಐಪಿಎಲ್ ನೂತನ ತಂಡಗಳಿಗೆ ಪುಣೆ, ಕೊಚ್ಚಿ ಸೇರ್ಪಡೆ |
ಪ್ರಕಟಿಸಿದ ದಿನಾಂಕ : 2010-03-21
ನವದೆಹಲಿ, ಭಾನುವಾರ, 21 ಮಾರ್ಚ್ 2010
ಕೊನೆಗೂ ಇಂಡಿಯನ್ ಪ್ರೀಮಿಯರ್ ಲೀಗ್‌ನ ನೂತನ ತಂಡಗಳ ಹರಾಜು ಪ್ರಕ್ರಿಯೆಯು ಅಂತ್ಯಗೊಂಡಿದ್ದು, ಸಹಾರಾ ಅಡ್ವೆನ್ಚರ್ ಸ್ಫೋರ್ಟ್ಸ್ ಲಿಮಿಟೆಡ್ ಪುಣೆ ತಂಡವನ್ನು ಹಾಗೂ ರೆಂಡೆಝವೊಸ್ ಸ್ಪೋರ್ಟ್ಸ್ ಲಿಮಿಟೆಡ್ ಕೊಚ್ಚಿ ತಂಡವನ್ನು ಖರೀದಿಸಿದೆ.
ಇದರೊಂದಿಗೆ 2011ರಲ್ಲಿ ನಡೆಯಲಿರುವ ಐಪಿಎಲ್ ನಾಲ್ಕನೇ ಆವೃತ್ತಿಯಲ್ಲಿ ನೂತನ ಕೊಚ್ಚಿ ಹಾಗೂ ಪುಣೆ ತಂಡಗಳು ಕಾಣಿಸಿಕೊಳ್ಳಲಿದೆ. ಈ ಮೂಲಕ ಕೇರಳದ ನೂತನ ತಂಡವೊಂದು ಐಪಿಎಲ್‌ಗೆ ಸೇರ್ಪಡೆಯಾಗಿದೆ.
ಅಹಮದಾಬಾದ್, ನಾಗ್ಪುರ ಹಾಗೂ ಪುಣೆ ತಂಡಗಳಿಗಾಗಿ ಅತ್ಯಧಿಕ ಬಿಡ್ ಸಲ್ಲಿಕೆಯಾಗಿತ್ತು. ಆದರೆ ಸಹಾರಾ ಅಡ್ವೆನ್ಚರ್ ಸ್ಪೋರ್ಟ್ಸ್ ಲಿಮಿಟೆಡ್ ಪುಣೆ ತಂಡವನ್ನು 1702 ಕೋಟಿ ರೂಪಾಯಿಗಳಿಗೆ ಖರೀದಿಸಿತ್ತು. ಅದೇ ರೀತಿ ರೆಂಡೆಝವೊಸ್ ಸ್ಪೋರ್ಟ್ಸ್ ಲಿಮಿಟೆಡ್ 333.33 ಮಿಲಿಯನ್ ಡಾಲರ್‌ಗೆ (1533,32 ಕೋಟಿ ರೂ.) ಕೊಚ್ಚಿ ತಂಡವನ್ನು ಖರೀದಿಸಿದೆ.
ಈ ಹಿಂದೆ ಹರಾಜಿಗೆ ಮಾರ್ಚ್ ಏಳರಂದು ದಿನಾಂಕ ನಿಗದಿಯಾಗಿತ್ತು. ಆದರೆ ಕೆಲವು ಆಸಕ್ತ ಬಿಡ್ಡರುಗಳು ಐಪಿಎಲ್ ನಿಯಮಗಳಿಗೆ ಸಂಬಂಧಿಸಿದಂತೆ ಬಿಸಿಸಿಐಗೆ ದೂರು ನೀಡಿದ್ದರ ಹಿನ್ನೆಲೆಯಲ್ಲಿ ಹರಾಜು ಎರಡು ವಾರಗಳಷ್ಟು ತಡವಾಗಿ ನಡೆದಿದೆ.
ಇದೀಗ ತಂಡ ಖರೀದಿಸಿರುವ ಬಿಡ್ಡರುಗಳು 48 ಗಂಟೆಗಳೊಳಗೆ ಶೇಕಡಾ ಹತ್ತರಷ್ಟು ಮೊತ್ತವನ್ನು ಪಾವತಿಸಬೇಕಾಗಿದೆ. ಒಟ್ಟಾರೆಯಾಗಿ ಐಪಿಎಲ್ ತಂಡದ ಕನಸು ಕಾಣುತ್ತಿದ್ದ ಅಹಮದಾಬಾದ್‌ಗೆ ಮತ್ತೊಮ್ಮೆ ನಿರಾಸೆಯಾಗಿದೆ.
ಐಪಿಎಲ್ ನಾಲ್ಕನೇ ಆವೃತ್ತಿಯಿಂದ ತಂಡಗಳ ಸಂಖ್ಯೆ ಎಂಟರಿಂದ ಹತ್ತಕ್ಕೆ ಏರಿಕೆಯಾಗಲಿದ್ದು, ಪಂದ್ಯಗಳ ಸಂಖ್ಯೆ ಕೂಡಾ 94ಕ್ಕೆ ಏರಿಕೆಯಾಗಲಿದೆ.
ಸೈಫ್-ಕರೀನಾ ವಿಫಲ...
ಅದೇ ವೇಳೆ ವಿಡಿಯೋಕಾನ್ ಪ್ರಾಯೋಜಕತ್ವ ನೀಡಿರುವ ಹೊರತಾಗಿಯೂ ತಂಡವೊಂದನ್ನು ಖರೀದಿಸುವಲ್ಲಿ ಬಾಲಿವುಡ್ ನಟ ಸೈಫ್ ಆಲಿ ಖಾನ್ ಮತ್ತು ಕರೀನಾ ಕಪೂರ್ ವಿಫಲರಾಗಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-21 00:00:00
|
|
|