ನವದೆಹಲಿ: ಹೆಡ್ಲಿಯ ವಿಚಾರಣೆಗೆ ಭಾರತಕ್ಕೆ ಅವಕಾಶ: ಚಿದಂಬರಂ |
ಪ್ರಕಟಿಸಿದ ದಿನಾಂಕ : 2010-03-21
ಹೊಸದಿಲ್ಲಿ, ಮಾ.೨೦: ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಉಗ್ರ ಡೇವಿಡ್ ಹೆಡ್ಲಿಯ ಪಾತ್ರದ ಕುರಿತು ವಿಚಾರಣೆ ನಡೆಸುವ ಅವಕಾಶ ಭಾರತಕ್ಕೆ ಶೀಘ್ರವೇ ದೊರೆಯಲಿದೆಯೆಂದು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಇಂದು ಹೇಳಿದ್ದು, ಈ ಬಗ್ಗೆ ತನಗೆ ಅಮೆರಿಕದ ಉನ್ನತ ನ್ಯಾಯಾಂಗ ಅಧಿಕಾರಿಯೊಬ್ಬರು ಭರವಸೆ ನೀಡಿದ್ದಾರೆಂಬುದನ್ನು ಬಹಿರಂಗಪಡಿಸಿದ್ದಾರೆ.
ಭಾರತಕ್ಕೆ ಗಡಿಪಾರನ್ನು ತಪ್ಪಿಸಿಕೊಳ್ಳುವ ಸಲುವಾಗಿ ಹೆಡ್ಲಿ ನಿನ್ನೆ ಶಿಕಾಗೊದ ನ್ಯಾಯಾಲಯ ವೊಂದರಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ ಕೆಲವೇ ತಾಸುಗಳಲ್ಲಿ ಚಿದಂಬರಂಗೆ ಕರೆ ಮಾಡಿದ ಅಮೆರಿಕದ ಅಟಾರ್ನಿ ಜನರಲ್ ಹಾಗೂ ನ್ಯಾಯ ಇಲಾಖೆಯ ಮುಖ್ಯಸ್ಥ ಎರಿಕ್ ಹೋಲ್ಡರ್ ಈ ವಿಷಯ ತಿಳಿಸಿದ್ದಾರೆನ್ನಲಾಗಿದೆ.
ಹೆಡ್ಲಿಯ ತಪ್ಪೊಪ್ಪಿಗೆ ನೀಡಲು ವಿಧಿಸಿದ್ದ ಅನೇಕ ಶರ್ತಗಳ ಬಗ್ಗೆ ಅಮೆರಿಕದಿಂದ ಸ್ಪಷ್ಟೀಕರಣ ದೊರಕಿದ್ದು, ಸಂಭಾಷಣೆ ತೃಪ್ತಿಕರವಾಗಿತ್ತೆಂದು ಚಿದಂಬರಂ ಹೇಳಿದ್ದಾರೆ.
ಹೆಡ್ಲಿಯೊಂದಿಗೆ ಅಮೆರಿಕ ಮಾಡಿಕೊಂಡ ಒಪ್ಪಂದದ ಪ್ರಕಾರ ಆತನನ್ನು ಭಾರತಕ್ಕೆ ಗಡಿಪಾರು ಮಾಡುವಂತಿಲ್ಲ ಹಾಗೂ ಮರಣದಂಡನೆ ವಿಧಿಸುವಂತಿಲ್ಲ.
ಸೂಕ್ತವಾಗಿ ರಚಿಸಲಾಗುವ ನ್ಯಾಯಾಂಗ ಪ್ರಕ್ರಿಯೆಯೊಂದರಲ್ಲಿ ಹೇಡ್ಲಿಯ ವಿಚಾರಣೆಗೆ ಭಾರತಕ್ಕೆ ಅವಕಾಶ ದೊರೆಯಬಹುದು. ಅದು ಆತನ ವಿಚಾರಣೆಗೆ ಮೊದಲೇ ಅಥವಾ ಆ ಸಮಯದಲ್ಲೇ ಲಭಿಸಬಹುದು. ಅಂತಹ ವಿಚಾರಣೆಯಲ್ಲಿ ಸಂಪೂರ್ಣ ಸಹಕರಿಸಲು ಹಾಗೂ ಸತ್ಯ ಹೇಳಲು ಆತ ಒಪ್ಪಿದ್ದಾನೆಂಬುದು ತನ್ನ ತಿಳುವಳಿಕೆಯಾಗಿದೆಯೆಂದು ಚಿದಂಬರಂ ನುಡಿದಿದ್ದಾರೆ.
ಹೆಡ್ಲಿಯನ್ನು ಪ್ರಶ್ನಿಸಲು ಭಾರತೀಯ ಅಧಿಕಾರಿಗಲಿಗೆ ಅನುಕೂಲವಾಗುವಂತಹ ನ್ಯಾಯಾಂಗ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಲು ರಾಷ್ಟ್ರೀಯ ತನಿಖೆ ಸಂಸ್ಥೆಗೆ ಸೂಚಿಸಲಾಗಿದೆ. ಎನ್‌ಐ ಎಯು ಹೆಡ್ಲಿ ಹಾಗೂ ಆತನ ಸಹವರ್ತಿ ತನಾವುರ್ ರಾಣಾನ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ಚಿದಂಬರಂ ಹೇಳಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ವಾಭಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-21 00:00:00
|
|
|