ರಂಗೇರಿದ ಬಿಬಿಎಂಪಿ ಚುನಾವಣಾ ಕಣ: ನೀತಿ ಸಂಹಿತೆ ಧೂಳೀಪಟ, ರಾಷ್ಟ್ರೀಯ ಪಕ್ಷಗಳಿಗೆ ಬಂಡಾಯದ ಬಿಸಿ |
ಪ್ರಕಟಿಸಿದ ದಿನಾಂಕ : 2010-03-21
ಬೆಂಗಳೂರು, ಮಾ.೨೦: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣಾ ಕಣ ರಂಗೇ ರಿದ್ದು, ಅಭ್ಯರ್ಥಿಗಳು ಪ್ರಚಾರ ಕಣಕ್ಕಿಳಿದು ಮತದಾರರ ಮನವೋಲಿಕೆಯನ್ನು ಆರಂಭಿಸಿದ್ದಾರೆ.
ನಿನ್ನೆ ನಾಮಪತ್ರ ವಾಪಾಸ್ ಪಡೆಯಲು ಕೊನೆಯ ದಿನವಾಗಿತ್ತು. ನಂತರ ರಾಜ್ಯ ಚುನಾವಣಾ ಆಯೋಗ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಸ್ವತಂತ್ರವಾಗಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಚಿನ್ನೆಯನ್ನು ಆಯೋಗ ನೀಡಿದೆ. ತಕ್ಷಣದಿಂದಲೇ ಕಾರ್ಯಪ್ರವೃತ್ತವಾಗಿರುವ ಅಭ್ಯರ್ಥಿಗಳು ತಮ್ಮ ಚಿನ್ನೆ, ಮತಪತ್ರದಲ್ಲಿನ ಕ್ರಮ ಸಂಖ್ಯೆಯನ್ನು ಒಳಗೊಂಡ ಕರಪತ್ರಗಳನ್ನು ಮುದ್ರಿಸಿ ಪ್ರಚಾರಕ್ಕೆ ತೆರಳಿದ್ದಾರೆ.
ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಆಡಳಿತಾರೂಢ ಪಕ್ಷದ ಅಭ್ಯರ್ಥಿಗಳ ಅಬ್ಬರ ಹೆಚ್ಚಾಗಿದೆ. ಮೂರು ಪ್ರಮುಖ ಪಕ್ಷಗಳಿಗೂ ಬಂಡಾಯ ಅಭ್ಯರ್ಥಿಗಳು ಪ್ರತಿಸ್ಪರ್ಧಿಗಳಾಗಿದ್ದಾರೆ. ಸ್ಪಧೆರ್ಯಲ್ಲಿ ರುವವರ ಪೈಕಿ ಬಹುತೇಕರು ಆರ್ಥಿಕವಾಗಿ ಸಬಲವಾಗಿರುವುದರಿಂದ ನೀತಿ ಸಂಹಿತೆ ಉಲ್ಲಂ ಘನೆ ಪ್ರಕರಣಗಳು ದಾರಾಳವಾಗಿ ನಡೆಯುತ್ತಿವೆ. ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿ ಗೊಳಿಸಲಾಗುತ್ತಿದೆ ಎಂದು ಹೇಳಲಾಗಿದ್ದರೂ ಅದು ಕ್ಷೇತ್ರಗಳಲ್ಲಿ ಕಾರ್ಯಗತವಾಗಿಲ್ಲ.
ಬಿಎಸ್‌ಪಿ, ಸಿಪಿಐ, ಸಿಪಿಎಂ ಸೇರಿದಂತೆ ವಿವಿಧ ೮ ಪ್ರಗತಿ ಪರ ಪಕ್ಷಗಳು ನಾಗರಿಕ ರಂಗ ರಚನೆ ಮಾಡಿಕೊಂಡು ರಾಷ್ಟ್ರೀಯ ಪಕ್ಷಗಳೆದುರು ಸೆಡ್ಡುಹೊಡೆದಿವೆ. ಕರ್ನಾಟಕ ರಕ್ಷಣಾ ವೇದಿಕೆ ನಾರಾ ಯಣಗೌಡ ಬಣ, ವಾಟಾಳ್ ನಾಗರಾಜ್‌ರ ಪಕ್ಷದ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಆಯೋಗದ ಮಾಹಿತಿಯಂತೆ ಕಾಂಗ್ರೆಸ್‌ನಿಂದ ೧೯೬, ಬಿಜೆಪಿಯಿಂದ ೧೯೭, ಸಿಪಿಐನಿಂದ ೦೩, ಸಿಪಿಎಂನಿಂದ ೧೬, ಎನ್‌ಸಿಪಿಯಿಂದ ೧೧, ಜೆಡಿಎಸ್‌ನಿಂದ ೧೯೨, ಜೆಡಿಯುನಿಂದ ೨೨, ಪಕ್ಷೇತರರು ೭೦೬ ಮಂದಿ ಸೇರಿದಂತೆ ಒಟ್ಟು ೧೩೪೩ ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.
ನಾಯಕರ ಮನವೋಲಿಕೆ ಯತ್ನ ವಿಫಲವಾಗಿ ಮೂರು ಪಕ್ಷಗಳಿಂದಲೂ ಸುಮಾರು ೧೫೦ಕ್ಕೂ ವಾರ್ಡ್‌ಗಳಲ್ಲಿ ಬಂಡಾಯದ ಬಿಸಿಯಿದೆ. ಬಿಜೆಪಿಯ ೮೩, ಕಾಂಗ್ರೆಸ್ ೫೦, ಜೆಡಿಎಸ್ ೨೦ ವಾರ್ಡ್ ಗಳಲ್ಲಿ ಬಂಡಾಯವನ್ನು ಹೆದುರಿಸಬೇಕಿದೆ. ನಿಷ್ಠಾವಂತ ಕಾರ್ಯಕರ್ತರನ್ನು ನಿರ್ಲಕ್ಷಿಸಲಾಗಿದೆ. ವಂಶಪಾರಂಪರ್ಯ ರಾಜಕಾರಣಕ್ಕೆ ಮಣೆ ಹಾಕಿರುವುದರಿಂದ ಅಧಿಕೃತ ಅಭ್ಯರ್ಥಿಯ ವಿರುದ್ಧ ಸ್ಪರ್ಧಿಸ ಬೇಕಾಗಿದೆ ಎಂದು ಬಂಡಾಯಗಾರರು ಹೇಳಿದ್ದಾರೆ.
ಅಭ್ಯರ್ಥಿಗಳು ಮನೆ ಮನೆಗೆ ತೆರಲಿ ಮತಯಾಚನೆ ಮಾಡುತ್ತಿದ್ದಾರೆ. ಪ್ರಚಾರಕ್ಕೆ ಧ್ವನಿವರ್ಧಕ ಬಳಕೆಗೆ ಆಯೋಗ ಕಡಿವಾಣ ಹಾಕಿದ್ದರೂ ಅಭ್ಯರ್ಥಿಗಳು ನಿರಾತಂಕವಾಗಿ ಧ್ವನಿವರ್ಧಕ ಬಳಕೆ ಯಲ್ಲಿ ತೊಡಗಿದ್ದಾರೆ. ಇದರಿಂದ ಮಹಾನಗರಿಯಲ್ಲಿ ಶಬ್ಧ ಮಾಲೀನ್ಯ ಹೆಚ್ಚಾಗಿ ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ.
ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಗೋವಿಂದರಾಜನಗರ ಕ್ಷೇತ್ರದಿಂದ, ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಮೂಲಕ ಹಾಗೂ ಬಿಜೆಪಿಯ ಸಚಿವರು ಬಹಿರಂಗ ಪ್ರಚಾರದ ಮೂಲಕ ಪ್ರಚಾರ ಕಣಕ್ಕೀಳಿದಿದ್ದಾರೆ.
ಪ್ರಚಾರಕ್ಕೆ ತೆರಳುವ ಕಾರ್ಯಕರ್ತರಿಗೆ ಮದ್ಯ ಸಮಾರಾಧನೆ ಅದ್ಧೂರಿಯಾಗಿಯೇ ನಡೆಯುತ್ತಿದೆ. ಬೆಳಗ್ಗೆ ತಿಂಡಿಯ ಜೊತೆಗೆ ಮದ್ಯ ನೀಡಲಾಗುತ್ತಿದ್ದು, ಕಾರ್ಯಕರ್ತರು ನಿಶೆಯಲ್ಲಿ ರಸ್ತೆಯಲ್ಲಿ ತೂರಾಡುವುದು ಸಾಮಾನ್ಯವಾಗಿದೆ. ಬೆಂಗಳೂರಿನ ಕೆ.ಆರ್.ಪುರಂನಲ್ಲಿ ಅಬಕಾರಿ ಪೊಲೀಸರು ದಾಳಿ ನಡೆಸಿ ಭಾರೀ ಮೊತ್ತದ ನಕಲಿ ಮದ್ಯ ವಶಪಡಿಸಿಕೊಂಡಿದ್ದಾರೆ. ಸ್ಥಳೀಯ ಮಟ್ಟದ ಚುನಾವಣೆಯಾದ್ದರಿಂದ ಅಲ್ಲಲ್ಲಿ ಸಣ್ಣಪುಟ್ಟ ಗಲಭೆಗಳು ಸಾಮಾನ್ಯವಾಗಿದೆ. ಪೊಲೀಸರು ವ್ಯಾಪಕ ಬಿಗಿಬಂದೋಬಸ್ತ್ ಒದಗಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ವಾಭಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-21
|
|
|