ಮಂಗಳೂರು : ಮಾರ್ಚ್ 23 ರಿಂದ ನಗರದ ನೆಹರೂ ಮೈದಾನಿನಲ್ಲಿ ’ಶ್ರೀ ರಾಮೋತ್ಸವ’ |
ಪ್ರಕಟಿಸಿದ ದಿನಾಂಕ : 2010-03-21
ಮಂಗಳೂರು,ಮಾ.20 : ವಿಶ್ವ ಹಿಂದೂ ಪರಿಷತ್, ಬಜರಂಗದಳ, ಶ್ರೀ ರಾಮೋತ್ಸವ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ವೇದಮೂರ್ತಿ ಗಿರಿಧರ ಭಟ್ ನೇತೃತ್ವದಲ್ಲಿ ಮಂಗಳೂರು ನೆಹರೂ ಮೈದಾನಿನಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀ ರಾಮ ದೇವರ ಜನ್ಮ ದಿನದ ಅಂಗವಾಗಿ "ಶ್ರೀ ರಾಮೋತ್ಸವ" ಮೂರು ದಿನಗಳ ಕಾಲ ನಡೆಯಲಿದೆ ಎಂದು ಶ್ರೀ ರಾಮೋತ್ಸವ ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಬಿ. ರವೀಂದ್ರ ರೈ ಇಂದು ನೆಹರೂಮೈದಾನಿನಲ್ಲಿ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.
ಶ್ರೀ ರಾಮನ ಕಲ್ಪನೆಯ ಭವ್ಯ ದೇಗುಲದಲ್ಲಿ ಶ್ರೀ ರಾಮ ದೇವರ ಪೂಜಾ ಕೈಂಕರ್ಯಗಳು, ಶ್ರೀ ರಾಮ ತಾರಕ ಹೋಮ, ಶ್ರೀ ಸೀತಾರಾಮ ಕಲ್ಯಾಣೋತ್ಸವ, ಪ್ರತಿ ದಿನ ಸಂಜೆ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾಗೂ ಕೊನೆದಿನದಂದು ವಿಶಿಷ್ಟ ಸುಡುಮದ್ದು ಪ್ರದರ್ಶನ ಮತ್ತು ರಾಮ ದಹನ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಮಾರ್ಚ್ 23 ರಂದು ಬೆಳಗ್ಗೆ ಶ್ರೀ ರಾಮ ದೇವರ ಪ್ರತಿಷ್ಟೆ, ದ್ವಜಾರೋಹಣ ಹಾಗೂ ತಾರಕ ಹೋಮ ನಡೆಯಲಿದೆ. ಸಂಜೆ 6 ರಿಂದ ಪರಮಪೂಜ್ಯ ಶ್ರೀಶ್ರೀಶ್ರೀ ಗುರದೇವಾನಂದ ಸ್ವಾಮೀಜಿಯವರ ಆಶೀರ್ವಚನ ದೊಂದಿಗೆ ಧಾರ್ಮಿಕ ಸಭೆ ನಡೆಯಲಿದೆ. ಧಾರ್ಮಿಕ ಸಭೆಯಲ್ಲಿ ರಾಜಕೀಯ ಮುಖಂಡರು ಹಾಗೂ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ.
ಮಾರ್ಚ್24 ರಂದು ವಿದ್ವಾನ್ ಗಣೇಶ್ ರಾಜ್ ಎಂ.ವಿ. ನೇತೃತ್ವದಲ್ಲಿ ಸೀತಾರಾಮ ಕಲ್ಯಾಣೋತ್ಸವ ನಡೆಯಲಿದೆ. ಸಂಜೆ 6 ಗಂಟೆಗೆ ಪರಮಪೂಜ್ಯ ಶ್ರೀಶ್ರೀಶ್ರೀ ರಮಾನಂದ ಸ್ವಾಮೀಜಿಯವರ ಆಶೀರ್ವಚನದೊಂದಿಗೆ ಧಾರ್ಮಿಕ ಸಭೆನಡೆಯಲಿದೆ. ಧಾರ್ಮಿಕ ಸಭೆಯಲ್ಲಿ ರಾಜಕೀಯ ಮುಖಂಡರು ಹಾಗೂ ಗಣ್ಯ ವ್ಯಕ್ತಿಗಳು ಪಾಲ್ಗೊಳ್ಳಲಿರುವರು.
ಮಾರ್ಚ್ 25 ರಂದು ಬೆಳಿಗ್ಗೆ 9ರಿಂದ ಭಜರಂಗದಳದ ಕಾರ್ಯಕರ್ತರಿಗೆ ಕಬ್ಬಡ್ಡಿ ಪಂದ್ಯಾಟ ನಡೆಯಲಿದೆ. ಸಂಜೆ 6 ರಿಂದ ಪೂಜ್ಯ ರಾಜಶೇಖರಾನಂದ ಸ್ವಾಮೀಜಿಯವರ ಆಶೀರ್ವಚನದೊಂದಿಗೆ ಧಾರ್ಮಿಕ ಸಭೆ ನಡೆಯಲಿದೆ, ಸಭೆಯಲ್ಲಿ ಧಾರ್ಮಿಕ ಮುಖಂಡರು ಹಾಗೂ ಉದ್ಯಮಿಗಳು ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ರಾಮೋತ್ಸವ ಸಮಿತಿ ಉಪಾಧ್ಯಕ್ಷರಾದ ಶಂಭು ಶರ್ಮ, ಕೋಶಾಧೀಕಾರಿ ಕೃಷ್ಣಪ್ಪ ದೇರೆಬೈಲು, ಅಲಂಕಾರ ಸಮಿತಿಯ ಶಿವಾನಂದ ಮೆಂಡನ್, ಹರೀಶ್ ಅಮ್ಟಾಡಿ, ವಿಶ್ವ ಹಿಂದೂ ಪರಿಷತ್ತಿನ ಪ್ರಧಾನ ಕಾರದರ್ಶಿ ಕೃಷ್ಣ ಮೂರ್ತಿ, ರಾವಣ ದಹನ ಸಮಿತಿಯ ಗೋಪಾಲ ಕುತ್ತಾರು ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-03-21 00:00:00
|
|
|