ಮ೦ಗಳೂರು: ಜೈಲಿನಿಂದ ಪರಾರಿಯಾಗಿದ್ದ ಹಲವು ಪ್ರಕರಣಗಳ ಆರೋಪಿ ಬಂಧನ; ಚಿನ್ನಾಭರಣ ಪತ್ತೆ |
ಪ್ರಕಟಿಸಿದ ದಿನಾಂಕ : 2010-03-20
ಮಂಗಳೂರು, ಮಾ. ೧೯: ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಹಾಗೂ ಕಾರ್ಕಳ ಸಬ್ ಜೈಲಿನಿಂದ ತಪ್ಪಿಸಿಕೊಂಡಿದ್ದ ಬೆಳ್ತಂಗಡಿ ತಾಲೂಕು ಆರಂಬೋಡಿ ಗ್ರಾಮದ ಕಾಂತ ಬೆಟ್ಟು ನಿವಾಸಿ ಪ್ರಸಾದ್ ಪೂಜಾರಿ ಯಾನೆ ಪಚ್ಚು (೨೧) ಮಂಗಳೂರಿನ ಡಿ.ಸಿ.ಐ.ಬಿ ಪೊಲೀಸರ ಬಲೆಗೆ ಬಿದ್ದಿದ್ದು, ಆತನಲ್ಲಿ ಚಿನ್ನದ ನಕ್ಲೆಸ್ ಪತ್ತೆಯಾಗುವುದರೊಂದಿಗೆ ನಗರದಲ್ಲಿ ೨ ವರ್ಷಗಳ ಹಿಂದೆ ನಡೆದ ಕಳ್ಳತನ ಪ್ರಕರಣವೊಂದನ್ನು ಪೊಲೀಸರು ಭೇದಿಸಿದ್ದಾರೆ.
ನಗರದ ಸ್ಟೇಟ್ ಬ್ಯಾಂಕ್ ಬಳಿಯ ಸರ್ವೀಸ್ ಬಸ್ ನಿಲ್ದಾಣ ದಲ್ಲಿ ಗುರುವಾರ ಅನುಮಾನಾಸ್ಪದ ವಾಗಿ ತಿರುಗಾಡುತ್ತಿದ್ದ ಆರೋಪಿಯನ್ನು ಡಿ.ಸಿ.ಐ.ಬಿ ಪೊಲೀಸರು ದಸ್ತಗಿರಿ ಮಾಡಿದ್ದು, ಆಗ ಆತನ ಬಳಿ ಒಂದು ಚಿನ್ನದ ನಕ್ಲೆಸ್ ಪತ್ತೆಯಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದಾಗ ಅದನ್ನು ಆತ ನಗರ ದ ನ್ಯೂ ಚಿತ್ರಾ ಜಂಕ್ಷನ್ ಬಳಿಯ ಬಸವನಗುಡಿ ಚಿಲಿಂಬಿ ಗಾರ್ಡನ್‌ನ ವೆಂಕಪ್ಪ ಭಂಡಾರಿ ಅವರ ಮನೆಯಿಂದ ೨೦೦೮ ಎಪ್ರಿಲ್ ೨೧ರಂದು ಕಳವು ಮಾಡಿದ್ದ ಎಂಬ ವಿಚಾರ ತಿಳಿಯಿತು.
ವೆಂಕಪ್ಪ ಭಂಡಾರಿಯವರ ಮನೆಯಿಂದ ಆರೋಪಿ ಪ್ರಸಾದ್ ಪೂಜಾರಿ ಒಂದೂವರೆ ಪವನಿನ ಚಿನ್ನದ ನೆಕ್ಲೆಸ್, ಒಂದೂ ಮುಕ್ಕಾಲು ಪವನಿನ ಚಿನ್ನದ ಬಳೆ, ಒಂದೂವರೆ ಪವನಿನ ಬೆಂಡೋಲೆ, ಮೂರು ಮುಕ್ಕಾಲು ಪವನಿನ ಕಿವಿಯೋಲೆ ಸೇರಿದಂತೆ ಒಟ್ಟು ೧.೨೫ ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದ. ಇದರ ಜತೆಗೆ ಸ್ವಲ್ಪ ನಗದು ಹಣವನ್ನೂ ಕಳ್ಳತನ ಮಾಡಿದ್ದ ಎಂದು ಒಪ್ಪಿಕೊಂಡಿದ್ದಾನೆ.
ಕಳವು ಮಾಡಿದ ಚಿನ್ನಾಭರಣಗಳಲ್ಲಿ ನೆಕ್ಲೆಸ್ ಹೊರತು ಪಡಿಸಿ ಉಳಿದ ಎಲ್ಲವುಗಳನ್ನು ಆತ ಫೈನಾನ್ಸ್ ಸಂಸ್ಥೆಯೊಂದರಲ್ಲಿ ಇರಿಸಿದ್ದು, ಅವುಗಳನ್ನು ಆತ ನೀಡಿದ ಮಾಹಿತಿ ಮೇರೆಗೆ ವಶ ಪಡಿಸಿಕೊಳ್ಳಲಾಗಿದೆ.
ಹಳೆ ಆರೋಪಿ
ಕಳವು ಪ್ರಕರಣಗಳಿಗೆ ಸಂಬಂಧಿಸಿ ಈತನ ಮೇಲೆ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ೩, ಬಂಟ್ವಾಳ ನಗರ ಮತ್ತು ಕಾರ್ಕಳ ನಗರ ಪೊಲೀಸ್ ಠಾಣೆಗಳಲ್ಲಿ ತಲಾ ೧ ಪ್ರಕರಣ ಸೇರಿದಂತೆ ಒಟ್ಟು ೫ ಪ್ರಕರಣಗಳು ಈ ಹಿಂದೆ ದಾಖಲಾಗಿವೆ. ಕಾರ್ಕಳದಲ್ಲಿ ನಡೆಸಿದ ಕಳ್ಳತನಕ್ಕೆ ಸಂಬಂಧಿ ಸಿ ೧ ವರ್ಷದ ಹಿಂದೆ ಪೊಲೀಸರಿಂದ ಬಂಧಿತನಾಗಿ ಜೈಲು ಶಿಕ್ಷೆಗೆ ಒಳಗಾಗಿದ್ದ. ಬಳಿಕ ಅಲ್ಲಿಂದ ತಪ್ಪಿಸಿಕೊಂಡಿದ್ದ. ಇದೀಗ ಡಿ.ಸಿ.ಐ.ಬಿ. ಪೊಲೀಸರ ಬಲೆಗೆ ಬಿದ್ದಿರುವ ಆತನನ್ನು ಮುಂದಿನ ಕ್ರಮಕ್ಕಾಗಿ ಬಂದರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಡಿ.ಸಿ.ಐ.ಬಿ. ಇನ್ಸ್‌ಪೆಕ್ಟರ್ ಎಚ್.ಎನ್. ವೆಂಕಟೇಶ ಪ್ರಸನ್ನ, ಎ.ಎಸ್.ಐ. ನಾರಾಯಣ ಮಣಿ ಯಾಣಿ, ಸಿಬಂದಿ ಶಶಿಧರ ಶೆಟ್ಟಿ, ಚೇತನ್ ಬೊಟ್ಯಾಡಿ, ಗಣೇಶ್ ಮಾನ್ಯ, ಚಂದ್ರ ಅಡೂರು, ದಿನೇಶ್ ಬೇಕಲ್, ಸಂತೋಷ್ ಪಡೀಲ್, ಕುಮಾರ್ ಬಿ., ಧರ್ಮೇಂದ್ರ, ಪ್ರಶಾಂತ್ ಶೆಟ್ಟಿ, ಗಣೇಶ್ ಕಲ್ಲಡ್ಕ, ಶಾಂತ ಶೆಟ್ಟಿ, ದೇವಯ್ಯ ಅವರು ಈ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.
ಬೀಗ ಹಾಕಿದ ಮನೆಗಳೇ ಟಾರ್ಗೆಟ್
ಬಹುತೇಕ ಬೀಗ ಹಾಕಿದ ಮನೆಗಳೇ ಈತನ ಟಾರ್ಗೆಟ್. ಕೂಲಿ ಕೆಲಸಕ್ಕೆ ಅಥವಾ ಚಿತ್ರ ಮಂದಿ ರಕ್ಕೆ (ಚಲನ ಚಿತ್ರ ವೀಕ್ಷಣೆಗೆ) ಹೋಗುವಾಗ ಬೀಗ ಹಾಕಿರುವ ಮನೆಗಳು ಈತನ ಕಣ್ಣಿಗೆ ಬಿದ್ದರೆ ಅಲ್ಲಿ ಸ್ವಲ್ಪ ಹೊತ್ತು ನಿಂತು ಆಚೀಚೆ ನೋಡಿ ಸುತ್ತ ಮುತ್ತ ಯಾರೂ ಇಲ್ಲದಿರುವುದು ಖಾತರಿ ಯಾದರೆ ಮನೆಯ ಹಿಂಬದಿಗೆ ಹೋಗಿ ಅಲ್ಲಿರುವ ಬಾಗಿಲಿನ ಬೀಗ ಅಥವಾ ಚಿಲಕ ಬಲಾತ್ಕಾರ ವಾಗಿ ಮುರಿದು ಒಳ ನುಗ್ಗಿ ಕಳ್ಳತನ ಮಾಡುತ್ತಿದ್ದ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-20 00:00:00
|
|
|