ರಾ. ಹೆದ್ದಾರಿಗಳಲ್ಲಿ ಹೆಲಿಪ್ಯಾಡ್ |
ಪ್ರಕಟಿಸಿದ ದಿನಾಂಕ : 2010-03-20
ಹೊಸದಿಲ್ಲಿ, ಮಾ.೧೮: ರಸ್ತೆ ಅಪಘಾತಗಳಲ್ಲಿ ಗಾಯಗೊಂಡ ವ್ಯಕ್ತಿಗಳಿಗೆ ತತ್‌ಕ್ಷಣವೇ ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಹೆದ್ದಾರಿ ಸಚಿವಾಲಯವು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತೀ ನೂರು ಕಿ.ಮೀ.ಗೆ ಒಂದರಂತೆ ಹೆಲಿಪ್ಯಾಡ್‌ಗಳನ್ನು ನಿರ್ಮಿಸುವ ಚಿಂತನೆ ನಡೆಸಿದೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶೇ. ೬೦ರಷ್ಟು ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಕೆಲವೊಮ್ಮೆ ಗಂಭೀರ ಸ್ಥಿತಿಯಲ್ಲಿರುವ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವಿಗೀಡಾಗುವಂಥ ಸಾಧ್ಯತೆಗಳು ಹೆಚ್ಚಿರುವುದನ್ನು ಗಮನಿಸಿ ಹೆದ್ದಾರಿ ಸಚಿವಾಲಯವು ರಾಷ್ಟ್ರೀಯ ಹೆದ್ದಾರಿಗಳ ಬಳಿ ಹೆಲಿಪ್ಯಾಡ್‌ಗಳ ನಿರ್ಮಾಣಕ್ಕೆ ಮುಂದಾಗಿದೆ.
ತುರ್ತು ಪರಿಸ್ಥಿತಿಯಲ್ಲಿ ಅಪಘಾತ ಸಂತ್ರಸ್ತರನ್ನು ತತ್‌ಕ್ಷಣವೇ ಆಸ್ಪತ್ರೆಗೆ ದಾಖಲಿಸುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಹೆಲಿಪ್ಯಾಡ್ ನಿರ್ಮಾಣಕ್ಕೆ ಸಂಬಂಧಿಸಿ ಸೂಕ್ತ ಪ್ರದೇಶಗಳನ್ನು ಗುರುತಿಸುವಂತೆ ಭಾರತೀಯ ರಾ. ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ಕ್ಕೆ ಸಚಿವಾಲಯ ಸೂಚಿಸಿದ್ದು, ವಿವಿಧ ರಾಜ್ಯಗಳ ಮುಖ್ಯ ಪ್ರಧಾನ ವ್ಯವಸ್ಥಾಪಕರಿಗೆ ಸೂಕ್ತ ಸ್ಥಳಗಳ ಗುರುತಿಸುವಿಕೆ ಪ್ರಕ್ರಿಯೆ ಆರಂಭಿಸುವಂತೆ ಆದೇಶಿಸಲಾಗಿದೆ ಎಂದು ಎನ್‌ಎಚ್‌ಎಐ ಅಧಿಕಾರಿಗಳು ಹೇಳಿದ್ದಾರೆ.
ಬಹುತೇಕ ಆಸ್ಪತ್ರೆಗಳು ಹೆಲಿ ಕಾಪ್ಟರ್ ಹೊಂದಿದ್ದು ,ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ತುರ್ತಾಗಿ ಆಸ್ಪತ್ರೆಗೆ ದಾಖಲಿಸುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತೀ ೧೦೦ ಕಿ.ಮೀ.ಗೆ ಒಂದರಂತೆ ಹೆಲಿಪ್ಯಾಡ್‌ಗಳನ್ನು ನಿರ್ಮಿಸುವ ಯೋಜನೆಯನ್ನು ಸಚಿವಾಲಯ ಹೊಂದಿದೆ ಎಂದು ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.
ಹೆದ್ದಾರಿ ಸಚಿವಾಲಯ ಸಲ್ಲಿಸಿರುವ ಪ್ರಸ್ತಾವಿತ ರಸ್ತೆ ಸುರಕ್ಷತೆ ಹಾಗೂ ಸಂಚಾರ ದಟ್ಟಣೆ ನಿಯಂತ್ರಣ ಮಂಡಳಿ ಮಸೂದೆಗೆ ಕೇಂದ್ರ ಸಂಪುಟ ತನ್ನ ಅನುಮೋದನೆ ನೀಡಿದೆ. ಈ ಮಸೂದೆ ಅನ್ವಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುವ ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗಳನ್ನು ತ್ವರಿತವಾಗಿ ಆಸ್ಪತ್ರೆಗೆ ಸಾಗಿಸಲು ಅಗತ್ಯ ವ್ಯವಸ್ಥೆ ಕಲ್ಪಿಸುವುದು ಕಡ್ಡಾಯವೆನಿಸಿದೆ. ದೇಶದಲ್ಲಿ ರಸ್ತೆ ಅಪಘಾತಗಳನ್ನು ಕಡಿಮೆಗೊಳಿಸುವ ಸಂಬಂಧ ಕೆಲ ವೊಂದು ಸುರಕ್ಷತಾ ಕ್ರಮಗಳನ್ನೂ ಈ ಮಸೂದೆ ಒಳಗೊಂಡಿದೆ. ರಾಷ್ಟ್ರೀಯ ರಸ್ತೆ ಸುರಕ್ಷತಾ ನಿಧಿ ಸ್ಥಾಪನೆಯ ಮೂಲಕ ಆರ್ಥಿಕ ಸ್ವಾಯತ್ತೆಯನ್ನೂ ಮಂಡಳಿ ಹೊಂದಲಿದೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-20
|
|
|