ವಿಮಾನಾಪಹಾರಕರಿಗೆ ಮರಣ ದಂಡನೆ: ಹೊಸ ಕಾಯ್ದೆಗೆ ಸಂಪುಟದ ಸಮ್ಮತಿ
ಪ್ರಕಟಿಸಿದ ದಿನಾಂಕ : 2010-03-20
ಹೊಸದಿಲ್ಲಿ, ಮಾ.೧೯: ವಿಮಾನಗಳನ್ನು ಅಪಹರಿಸುವವರಿಗೆ ಹಾಗೂ ಅವುಗಳನ್ನು ದಾಳಿಯ ಅಸ್ತ್ರವಾಗಿ ಉಪಯೋಗಿಸುವವರಿಗೆ ಮರಣ ದಂಡನೆ ವಿಧಿಸುವ ಕಾಯ್ದೆ ತಿದ್ದುಪಡಿಗೆ ಕೇಂದ್ರ ಸಂಪುಟವು ಶುಕ್ರವಾರ ಒಪ್ಪಿಗೆ ಸೂಚಿಸಿದೆ.
ಪ್ರಧಾನಿ ಮನಮೋಹನ ಸಿಂಗರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯೊಂದರಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿಮಾನಪಹರಣಗಳನ್ನು ತಡೆಯುವ ಉದ್ದೇಶದಿಂದ ೧೯೮೨ರ ಅಪಹರಣ ವಿರೋಧಿ ಕಾಯ್ದೆಗೆ ಈ ಹೊಸ ವಿಧಿಯನ್ನು ಸೇರಿಸಲಾಗುವುದು.
ನಾಗರಿಕ ವಿಮಾನ ಯಾನ ಸಚಿವಾಲಯದ ಪ್ರಸ್ತಾಪದಂತೆ, ವಿಮಾನಾಪಹರಣ ತಡೆಯಲು ಮರಣದಂಡನೆ ಹಾಗೂ ಜೀವಾವಧಿ ಶಿಕ್ಷೆಗಳನ್ನು ಸೇರಿಸುವ ಮೂಲಕ ಗೃಹ ಸಚಿವ ಪಿ.ಚಿದಂಬಂರ ನೇತೃತ್ವದ ಸಚಿವ ಮಂಡಳಿಯೊಂದು ಈ ಮೊದಲೇ ತಿದ್ದುಪಡಿ ಕಾಯ್ದೆಯೊಂದಕ್ಕೆ ಮಂಜೂರಾತಿ ನೀಡಿತ್ತು.
ಮರಣದಂಡನೆ ನಿವಾರಿಸಬೇಕೆಂದು ವಿಶ್ವಾದ್ಯಂತ ಅಭಿಪ್ರಾಯ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಈ ವಿಷಯ ಚರ್ಚಿಸಲು ಸಚಿವ ಮಂಡಳಿಯೊಂದನ್ನು ರಚಿಸಲಾಗಿತ್ತು. ಪ್ರಸ್ತಾಪಕ್ಕೆ ಸಂಪುಟ ಸಮ್ಮತಿ ನೀಡಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವೆ ಅಂಬಿಕಾ ಸೋನಿ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದರು.
ಸರಕಾರ ಈ ಪ್ರಸ್ತಾಪಿತ ತಿದ್ದುಪಡಿಯನ್ನು ಮುಂದಿನ ತಿಂಗಳು ಸಂಸತ್ತಿನ ಮುಂದೆ ಇರಿಸಲಿದೆ.
ಹೊಸ ಕಾಯ್ದೆಯ ಪ್ರಕಾರ ಭಾರತೀಯ ವಾಯು ಸೇನೆಯು ಅಪಹೃತ ವಿಮಾನವನ್ನು ಅಡ್ಡಗಟ್ಟಿ, ಬಲವಂತವಾಗಿ ಕೆಳಕ್ಕಿಳಿಸಬಹುದು.
ಅಂತಹ ವಿಮಾನವನ್ನು ಅಪಹರಣಕಾರರು ಯಾವುದೇ ಪ್ರಮುಖ ಸ್ಥಾವರಕ್ಕೆ ಅಪ್ಪಳಿಸಲು ಬಳಸುವ ಬಗ್ಗೆ ಪುರಾವೆ ದೊರೆತರೆ ವಿಮಾನವನ್ನು ಹೊಡೆದುರುಳಿಸಲೂ ಇದು ಅವಕಾಶ ಕಲ್ಪಿಸುತ್ತದೆ.