| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಮಂಗಳೂರು: ಬ್ಯಾರಿ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ ಪ್ರಕಟ |
ಪ್ರಕಟಿಸಿದ ದಿನಾಂಕ : 2010-03-20
ಮಂಗಳೂರು, ಮಾ.೧೯: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ೨೦೦೯ನೆ ಸಾಲಿನ ಗೌರವ ಪ್ರಶಸ್ತಿಯನ್ನು ಅಕಾಡ ಮಿಯ ಅಧ್ಯಕ್ಷ ಎಂ.ಬಿ. ಅಬ್ದುರ್ರಹ್ಮಾನ್ ಇಂದು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಖ್ಯಾತ ಸಾಹಿತಿ ಅಹ್ಮದ್ ನೂರಿ ಬೆಂಗಳೂರು, ಬಹುಭಾಷಾ ವಿದ್ವಾಂಸ ಮೌಲಾನಾ ಅಬುಲ್ ಹಸನ್ ಮುಹಮ್ಮದ್ ಮೌಲವಿ ಮಂಗಳೂರು, ಬ್ಯಾರಿ ಜನಪದ ಕಲೆಯಾದ ದಫ್ ಗುರು ಇಸ್ಮಾಯೀಲ್ ಉಸ್ತಾದ್ ಸುರಿಬೈಲ್ ಗೌರವ ಪ್ರಶಸ್ತಿಗೆ ಪಾತ್ರರಾದವರು.
ಸುಮಾರು ೫೦ ವರ್ಷಗಳಿಗೂ ಹಿಂದೆ ಹಲವಾರು ಬ್ಯಾರಿ ಹಾಡುಗಳನ್ನು ರಚಿಸಿ ಸ್ವತ: ರಾಗ ಸಂಯೋಜಿಸಿ ಹಾಡಿ ಕೇಳಿ ಸುತ್ತಿದ್ದ ಅಹ್ಮದ್ ನೂರಿಯವರ ‘ಕೇಲಂಡ ಮಕ್ಕಲೇ ಕೇಲಂಡ’, ‘ಎತ್ತರೆ ತೋಲೋ ವರಕ್‌ರೊ ಮಸ್ತ್‘, ‘ಆಲಂ ಪಡಚದುಂ ನೀನೆಮೆ... ಅದ್‌ರೆ ಚಮೆಯಿಚ್ಚೆದುಂ ನೀನೇಮೆ‘, ‘ದುನಿಯಾವಾಗೆಂ ಚಿಮ್ಮೆ ಕಡಲ್, ತೂಫಾನುಂ, ತೀ ಮಿನ್ನುಂ ಚೆಡಿಲ್’ ಎಂಬ ಬ್ಯಾರಿ ಹಾಡುಗಳು ಇಂದಿಗೂ ಬ್ಯಾರಿ ಮನೆಗಳಲ್ಲಿ ಜನಜನಿತ. ಕನ್ನಡ, ಅರಬಿ, ಪರ್ಶಿಯನ್, ಮಳಯಾಲಂ, ತಮಿಳು, ಉರ್ದು, ಹಿಂದಿ, ಇಂಗ್ಲಿಷ್, ಬ್ಯಾರಿ ಭಾಷೆಯಲ್ಲಿ ವಿದ್ವಾಂಸರಾಗಿರುವ ನೂರಿ ಪವಿತ್ರ ಕುರ್‌ಆನ್‌ನ್ನು ಕನ್ನಡಕ್ಕೆ ಅನುವಾದಿಸಿ ದ್ದಾರೆ. ಇವರ ‘ಮೈಕಾಲ’ ಕೃತಿಯು ಕನ್ನಡ ದಲ್ಲಿ, ‘ಹಿಜರಿ ಸಂಸ್ಕರಣ ಸಂಚಿಕೆ’ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಪ್ರಕಟವಾಗಿದೆ.
‘ಹಮ್‌ದರ್ದ್’ ಕನ್ನಡ ವಾರಪತ್ರಿಕೆಯ ಸಂಪಾದಕರಾಗಿ, ‘ಸದಾಕತ್’ ಇಂಗ್ಲಿಷ್ ವಾರಪತ್ರಿಕೆಯ ಉಪ ಸಂಪಾದಕರಾಗಿ, ಪ್ರಭಾ, ಕಂಠೀರವ, ಸ್ವದೇಶಾಭಿಮಾನಿ, ಜೀವನ, ಬಡವರ ಬಂಧು, ಉದಯ ಚಂದ್ರ, ಶಾಂತಿ ಸಂದೇಶ, ನವಶಕ್ತಿ ಮತ್ತು ಅಮಾನತ್ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ದುಡಿದ ಹಿರಿಮೆ ಅಹ್ಮದ್ ನೂರಿಯ ವರದ್ದು. ಇವರು ಫಾದರ್ ಮುಲ್ಲರ‍್ಸ್‌ನ ‘ದಿ ಗೈಡ್ ಹೆಲ್ತ್’ ಗ್ರಂಥವನ್ನು ಉರ್ದು ಭಾಷೆಗೆ ಅನುವಾದಿಸಿದ್ದಾರೆ. ೧೯೯೮ರಲ್ಲಿ ಮಂಗಳೂರು ಪುರಭವನದಲ್ಲಿ ನಡೆದ ಪ್ರಥಮ ಬ್ಯಾರಿ ಸಾಹಿತ್ಯ ಸಮ್ಮೇಳನದಲ್ಲಿ ನೂರಿಯವರ ಸಾಧನೆಯನ್ನು ಪರಿಗಣಿಸಿ ಸನ್ಮಾನಿಸಿ ಗೌರವಿಸಲಾಗಿತ್ತು.
ಅಬುಲ್ ಹಸನ್ ಮೌಲವಿ ಮಂಗಳೂರಿ ನಲ್ಲಿರುವ ಬ್ಯಾರಿ ಮಾಹಿತಿ ಕೇಂದ್ರ ಹಾಗೂ ಅರೆಬಿಕ್ ಇನ್ಸ್‌ಸ್ಟಿಟ್ಯೂಟ್‌ನ ನಿರ್ದೇಶಕರಾಗಿರುತ್ತಾರೆ. ಇವರು ಮದ್ರಸ, ಮಸೀದಿಗಳಲ್ಲಿ ಬ್ಯಾರಿ ಭಾಷೆಯಲ್ಲಿ ಮತ ಪ್ರವಚನ ನೀಡುವ ಮೂಲಕ ಇತಿಹಾಸ ಸೃಷ್ಟಿಸಿದವರು. ಹದೀಸ್‌ಗಳ ಸಂಗ್ರಹ ‘ಮುತ್ತುಮಾಲೆ’ ಎಂಬ ಪ್ರಥಮ ಬ್ಯಾರಿ ಕೃತಿ ರಚಿಸಿದ ಹಿರಿಮೆ ಇವರದ್ದು. ಖಬ್ರ್ ಝಿಯಾರತ್, ಬರಾಅತ್ ರಾತ್ರಿ ಇವರ ಕನ್ನಡ ಕೃತಿಗಳು. ಜುಮಾ ಖುತ್ಬಾ, ಅಯ್ಯುಹಲ್ ವಲದ್, ಮುಖಾ ಶಿಫತುಲು ಖುಲೂಬ್ ಎಂಬ ಅರಬಿ ಹಾಗೂ ಉರ್ದು ಕೃತಿಗಳನ್ನು ಇವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಬ್ಯಾರಿ, ಕನ್ನಡ, ಮಳಯಾಲಂ, ಉರ್ದು, ಅರೆಬಿಕ್, ಇಂಗ್ಲಿಷ್ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿರುವ ಇವರು ಒಬ್ಬ ಶ್ರೇಷ್ಠ ವಾಗ್ಮಿ. ‘ಮೆಸ್ಕೋ ವಾರ್ತೆ’ ಎಂಬ ಕನ್ನಡ ವಾರ ಪತ್ರಿಕೆಯನ್ನು ಸ್ಥಾಪಿಸಿ ಅದರ ಸಂಪಾದಕ ರಾಗಿ ಅಬುಲ್ ಹಸನ್ ದುಡಿದಿದ್ದರು.
ಬ್ಯಾರಿ ಜಾನಪದ ಕಲೆ ದಫ್‌ನ ಗುರುಗಳಾಗಿರುವ ಇಸ್ಮಾಯೀಲ್ ಉಸ್ತಾದ್ ಬಂಟ್ವಾಳ ತಾಲೂಕಿನ ಸುರಿಬೈಲ್‌ನವರು. ೩೦ಕ್ಕೂ ಹೆಚ್ಚು ಸ್ಥಳಗಳಲ್ಲಿ ಯುವಕರನ್ನು ಸಂಘಟಿಸಿ ದಫ್ ಕಲೆಯ ತರಬೇತಿ ನೀಡಿರುವ ಇಸ್ಮಾಯೀಲ್‌ರಿಗೆ ೯೦೦ಕ್ಕೂ ಹೆಚ್ಚು ಶಿಷ್ಯರಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಕುಕ್ಕಾಜೆಯ ಫ್ರೆಂಡ್ಸ್ ಅಸೋಸಿ ಯೇಶನ್ ಕುಕ್ಕಾಜೆಯಲ್ಲಿ ಹಾಗೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಇತ್ತೀಚೆಗೆ ಬಂಟ್ವಾಳದಲ್ಲಿ ಹಮ್ಮಿಕೊಂಡಿದ್ದ ‘ಬ್ಯಾರಿ ಜನಪದ ಉತ್ಸವ’ದ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ., ಅರ್ಥ ಸದಸ್ಯೆ ಮಂಗಲಾ ಎಂ. ನಾಯ್ಕ, ಸದಸ್ಯರಾದ ಪ್ರೊ.ಬಿ.ಎಂ.ಇಚ್ಲಂಗೋಡು, ಹಂಝ ಮಲಾರ್ ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-20 00:00:00
|
|
|
|
|