ಬಿಜೆಪಿ ಮೂಲಕ ರಾಜಕೀಯಕ್ಕೆ ಬರುತ್ತೇನೆ: ಅನಿಲ್ ಕುಂಬ್ಳೆ |
ಪ್ರಕಟಿಸಿದ ದಿನಾಂಕ : 2010-03-19
ಬೆಂಗಳೂರು, ಶುಕ್ರವಾರ, 19 ಮಾರ್ಚ್ 2010 ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಬಿಜೆಪಿಯಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹರಡಿತ್ತಾದರೂ, ಅದು ಕೆಲವೇ ದಿನಗಳಲ್ಲಿ ಠುಸ್ಸಾಗಿತ್ತು. ಆದರೆ ತಾನು ರಾಜಕೀಯಕ್ಕೆ ಬರುತ್ತಿರುವುದನ್ನು ಸ್ವತಃ ಮಾಜಿ ಲೆಗ್‌ಸ್ಪಿನ್ನರ್ ಖಚಿತಪಡಿಸಿದ್ದಾರೆ.
ನೀವು ಬಿಜೆಪಿ ಪಕ್ಷದೊಂದಿಗೆ ಯಾಕೆ ಗುರುತಿಸಿಕೊಂಡಿದ್ದೀರಿ ಎಂದು ಅವರ ಪುಸ್ತಕ 'ವೈಡ್ ಆಂಗಲ್' ಬಿಡುಗಡೆ ಸಂದರ್ಭದಲ್ಲಿ ಪ್ರಶ್ನಿಸಿದಾಗ ಉತ್ತರಿಸಿದ 39ರ ಹರೆಯದ ಮೂಲತಃ ಕಾಸರಗೋಡು ಸಮೀಪದ ಕುಂಬ್ಳೆ, 'ನಾನು ನೇರ ರಾಜಕೀಯ ಮಾಡುತ್ತಿದ್ದೇನೆ. ಪರೋಕ್ಷವಾಗಿ ಕೈಯಾಡಿಸುವುದರಲ್ಲಿ ನನಗೆ ಯಾವುದೇ ಆಸಕ್ತಿಯಿಲ್ಲ' ಎಂದರು.
ಪ್ರಸಕ್ತ ರಾಜ್ಯ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷರಾಗಿರುವ ಕುಂಬ್ಳೆ ರಾಜ್ಯ ಸಚಿವರ ಮಟ್ಟದ ಉನ್ನತ ಹುದ್ದೆಯಲ್ಲಿದ್ದು, ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ.
ನಾನು ರಾಜಕೀಯಕ್ಕೆ ಬರುವುದು ಖಚಿತ. ಈ ಬಗ್ಗೆ ಯಾವುದೇ ಸಂಶಯ ಬೇಡ. ಆದರೆ ಈಗ ನನ್ನನ್ನು ಐಪಿಎಲ್‌ನಲ್ಲಿ ಆಡಲು ಬಿಡಿ ಎಂದು ಹೇಳಿರುವ ಕುಂಬ್ಳೆ, ನೀವು ಕೆಲಸವನ್ನು ಗಂಭೀರವಾಗಿ ಪರಿಗಣಿಸಿದಾಗ ಪ್ರತೀ ದಿನ ಕಚೇರಿಗೆ ಹೋಗಬೇಕಾದ ಅಗತ್ಯವಿಲ್ಲ; ಇಲ್ಲಿ ಒಟ್ಟಾರೆಯಾಗಿ ಬೇಕಾಗಿರುವುದು ಫಲಿತಾಂಶವೇ ಹೊರತು ಹಾಜರಿಯಲ್ಲ ಎಂದು ತನ್ನ ಸರಕಾರಿ ಹುದ್ದೆಯ ಕುರಿತು ಪ್ರತಿಕ್ರಿಯಿಸಿದ್ದಾರೆ.
ಜಾತಿ ರಾಜಕೀಯಿಂದ ಅಡ್ಡಿಯಾಗಿತ್ತು...
ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದೇ ಇರಲು ಕಾರಣ ಜಾತಿ ರಾಜಕೀಯ ಎಂದು ಬಿಜೆಪಿ ಮೂಲಗಳೇ ಹೇಳಿವೆ ಎಂದು 'ಮಿಡ್-ಡೇ' ಪತ್ರಿಕೆ ವರದಿ ಮಾಡಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟಿನಿಂದ ಕುಂಬ್ಳೆಯವರು ಬೆಂಗಳೂರು ಸೆಂಟ್ರಲ್‌ನಿಂದ ಕಣಕ್ಕಿಳಿಯಲು ಬಯಸಿದ್ದರು. ಆದರೆ ಇಲ್ಲಿ ಜಾತಿ ರಾಜಕೀಯ ಅಡ್ಡ ಬಂದ ಕಾರಣ ಚುನಾವಣೆಗೆ ನಿಲ್ಲುವುದು ಸಾಧ್ಯವಾಗಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಕ್ಷೇತ್ರದ ಪಕ್ಕದಲ್ಲಿರುವ ಬೆಂಗಳೂರು ದಕ್ಷಿಣದಿಂದ ಅನಂತ್ ಕುಮಾರ್ ಸ್ಪರ್ಧಿಸುತ್ತಿದ್ದ ಕಾರಣ, ಸೆಂಟ್ರಲ್ ಕ್ಷೇತ್ರದಿಂದ ಕುಂಬ್ಳೆಗೆ ಟಿಕೆಟ್ ನೀಡಲಾಗಿರಲಿಲ್ಲ. ಇಬ್ಬರೂ ಬ್ರಾಹ್ಮಣರಾಗಿರುವುದೇ ಇದರ ಹಿಂದಿರುವ ಕಾರಣವಾಗಿತ್ತು ಎಂದು ಹೇಳಲಾಗಿದೆ.
ಈಗಾಗಲೇ ಬೆಂಗಳೂರಿನಲ್ಲಿ ಬ್ರಾಹ್ಮಣ ಸಮುದಾಯದಿಂದ ಓರ್ವ ಸಂಸದ ಮತ್ತು ಇಬ್ಬರು ಶಾಸಕರನ್ನು ಹೊಂದಿರುವುದರಿಂದ ಅವರನ್ನು ಬೆಂಗಳೂರಿನಲ್ಲಿ ಚುನಾವಣೆಗೆ ನಿಲ್ಲಿಸುವುದು ಕಷ್ಟ. ಆದರೆ ಇವರ ವಿಚಾರವನ್ನು ವಿಶೇಷವಾಗಿ ಪರಿಗಣಿಸಿರುವುದರಿಂದ ಒಂದು ಪರಿಹಾರ ಸೂತ್ರವನ್ನು ಕಂಡುಕೊಳ್ಳಲಾಗುತ್ತದೆ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಬಿಜೆಪಿಯಿಂದ ನವಜೋತ್ ಸಿಂಗ್ ಸಿಧು, ಕೀರ್ತಿ ಆಜಾದ್, ಕಾಂಗ್ರೆಸ್‌ನಿಂದ ಮೊಹಮ್ಮದ್ ಅಜರುದ್ದೀನ್, ಬಿಎಸ್‌ಪಿಯಿಂದ ಚೇತನ್ ಶರ್ಮಾ ಮತ್ತು ಲೋಕ ಭಾರ್ತಿ ಪಾರ್ಟಿಯಿಂದ ವಿನೋದ್ ಕಾಂಬ್ಳಿ ಈಗಾಗಲೇ ತಮ್ಮ ರಾಜಕೀಯ ಭವಿಷ್ಯವನ್ನು ಪರಿಶೀಲಿಸಿದ್ದು, ಕುಂಬ್ಳೆ ಅವರ ಸಾಲಿಗೆ ಯಾವಾಗ ಸೇರ್ಪಡೆಯಾಗುತ್ತಾರೆ ಎಂಬುದನ್ನು ಕಾಲವೇ ಹೇಳಬೇಕಿದೆ.
ವರದಿಯ ವಿವರಗಳು |
 |
ಕೃಪೆ : ವೆಬ್ ದುನಿಯಾ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-19 00:00:00
|
|
|