| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಚಾಮರಾಜನಗರ: ಶಿಕ್ಷಣಕ್ಕೆ ಒತ್ತು ನೀಡಲು ಮಹಿಳೆಯರಿಗೆ ಡಿವೈಎಸ್ಪಿ ಕರೆ |
ಪ್ರಕಟಿಸಿದ ದಿನಾಂಕ : 2010-03-19
ಚಾಮರಾಜನಗರ, ಮಾ.೧೮: ದೇಶದಲ್ಲಿ ಅನೇಕ ಸಾಹಸಿ ಮಹಿಳೆಯರು ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ. ಇಂದಿನ ಯುವ ಪೀಳಿಗೆಯ ಹೆಣ್ಣು ಮಕ್ಕಳು ಅವರ ಆದರ್ಶಗಳನ್ನು ಪಾಲಿಸಿ ಕೊಂಡು ಅದೇ ಹಾದಿಯಲ್ಲಿ ಮುನ್ನಡೆಯಲು ಪ್ರಯತ್ನಿಸಬೇಕು ಎಂದು ಡಿವೈಎಸ್ಪಿ ಸಿ. ಬಸವರಾಜು ಕರೆ ನೀಡಿದ್ದಾರೆ.
ನಗರದ ಪ್ರಜಾಪಿತ ಬಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯ ಹಾಗೂ ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆಯ ಆಶ್ರಯದಲ್ಲಿ ಪ್ರಕಾಶ ಭವನದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ವಿದ್ಯಾವಂತರಾಗುವ ಜೊತೆಗೆ ತಮ್ಮ ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸಿ ದೇಶದ ಉತ್ತಮ ಪ್ರಜೆಯನ್ನಾಗಿಸಬೇಕು ಎಂದು ಕಿವಿಮಾತು ಹೇಳಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ವಕೀಲೆ ಜಿ. ನಾಗಶ್ರೀ ಪ್ರತಾಪ್ ಮಾತನಾಡಿ, ಕೇಂದ್ರ ಸರಕಾರವು ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರಿಗೆ ಶೇ.೩೩ ಮೀಸಲಾತಿ ಪ್ರಕಟಿಸಿದೆ. ಆದರೆ ಮಹಿಳೆಯರಿಗೆ ಇದರ ಅರಿವು ಕಡಿಮೆ ಇದ್ದು, ಅವರು ಮೀಸಲಾತಿ ಬಗ್ಗೆ ತಿಳುವಳಿಕೆ ಪಡೆಯುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಲು ಪ್ರಯತ್ನಿಸಬೇಕೆಂದರು.
ಜೈ ಭುವನೇಶ್ವರಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ನಗರಸಭೆಯ ಪೌರಾಯುಕ್ತ ಎಸ್. ಪ್ರಕಾಶ್ ಮಾತನಾಡಿ, ಸ್ತ್ರೀ ಶಕ್ತಿ ಸಂಘಗಳಿಗೆ ಸರಕಾರವು ಹೆಚ್ಚಿನ ಸಹಕಾರ ನೀಡುತ್ತಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಚೂಡಾ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ಪ್ರಾಥಮಿಕ ಹಂತದಲ್ಲಿ ತಾಯಂದರು ತಮ್ಮ ಮಕ್ಕಳಿಗೆ ಯಾವ ರೀತಿ ಜ್ಞಾನಾರ್ಜನೆ ನೀಡುತ್ತಾರೋ ಆ ನಿಟ್ಟಿನಲ್ಲಿ ದೇಶದ ಉತ್ತಮ ಪ್ರಜೆಯಾಗಿ ಹೊರಹೊಮ್ಮುತ್ತಾರೆ ಎಂದು ಹೇಳಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಜಿಲ್ಲಾ ಸಂಚಾಲಕಿ ಬಿ.ಕೆ. ದಾನೇಶ್ವರಿ, ಜೈ ಹಿಂದ್ ಪ್ರತಿಷ್ಠಾನ ಅಧ್ಯಕ್ಷ ಹಾಗೂ ಉಪನ್ಯಾಸಕ ಸುರೇಶ್ ಎನ್. ಋಗ್ವೇದಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನಗರಸಭೆಯ ಮಾಜಿ ಅಧ್ಯಕ್ಷ ಎನ್.ಪದ್ಮ ನಾಯಕ್ ಬಹುಮಾನ ವಿತರಿಸಿದರು. ಸಾಹಿತಿ ಹಾಗೂ ಉಪನ್ಯಾಸಕ ನಾಗೇಶ್ ಸೋಸ್ಲೆ ಹಾಜರಿದ್ದರು.
ಜೈಭುವನೇಶ್ವರಿ ಕನ್ನಡ ಯುವ ವೇದಿಕೆ ಅಧ್ಯಕ್ಷ ಜಿ.ಬಂಗಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಕೆ.ಮಂಜುನಾಥ ಆರಾಧ್ಯ, ಸತೀಶ್ ಕುಮಾರ್, ವೇಣುಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-19 00:00:00
|
|
|
|
|