ಬೆಂಗಳೂರು, ಮಾ. ೧೮: ತಮಿಳು ಚಿತ್ರನಟಿಯೊಂದಿಗೆ ಬಿಡದಿಯ ಧ್ಯಾನಪೀಠ ಆಶ್ರಮದಲ್ಲಿ ‘ಕಾಮಕೇಳಿ’ ನಡೆಸಿ ವಿವಾದಕ್ಕೆ ಸಿಲುಕಿದ್ದ ನಿತ್ಯಾನಂದ ಸ್ವಾಮಿ ವಿರುದ್ಧ ಬಿಡದಿಯ ಪೊಲೀಸರು ಮೂರು ಪ್ರಕರಣಗಳನ್ನು ದಾಖಲು ಮಾಡಿದ್ದಾರೆ.
ತಮಿಳುನಾಡಿನ ಪೊಲೀಸರು ನಿತ್ಯಾನಂದ ಸ್ವಾಮಿಯ ಲೈಂಗಿಕ ಹಗರಣದ ಪ್ರಕರಣವನ್ನು ರಾಜ್ಯ ಪೊಲೀಸರಿಗೆ ಹಸ್ತಾಂತರಿಸಿರುವ ಹಿನ್ನೆಲೆ ಯಲ್ಲಿ ಪೊಲೀಸರು ಈ ಕ್ರಮಕ್ಕೆ ಮುಂದಾಗಿ ದ್ದಾರೆ. ನಿತ್ಯಾನಂದ ಸ್ವಾಮಿಯ ವಿರುದ್ಧ ಮಾನಭಂಗ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮತ್ತು ಸ್ವಾಮಿಯ ಲೈಂಗಿಕ ಹಗರಣವನ್ನು ಬಹಿರಂಗ ಪಡಿಸಿದ ಆಶ್ರಮದ ಸಿಬ್ಬಂದಿ ಲೇನಿನ್‌ಗೆ ಕೊಲೆ ಬೆದರಿಕೆ ಸೇರಿದಂತೆ ಒಟ್ಟು ಮೂರು ಪ್ರಕರಣಗಳನ್ನು ಬಿಡದಿ ಪೊಲೀಸರು ದಾಖಲು ಮಾಡಿಕೊಂಡಿದ್ದಾರೆ.
ಈ ಪ್ರಕರಣದ ತನಿಖೆ ನಡೆಸಲು ಬಿಡದಿಯ ಡಿವೈಎಸ್ಪಿ ದೇವರಾಜ್ ಅವರಿಗೆ ವಹಿಸಲಾಗಿದೆ. ನಿತ್ಯಾನಂದ ಸ್ವಾಮಿಯ ರಾಸಲೀಲೆ ಬಹಿರಂಗಗೊಳಿಸಿದ ಆಶ್ರಮದ ಸಿಬ್ಬಂದಿ ಲೇನಿನ್‌ನನ್ನು ಬಿಡದಿಯ ಆಶ್ರಮಕ್ಕೆ ಕರೆತಂದು ತನಿಖೆ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಕದ್ದಮೆ ದಾಖಲಿಸಿ ಕೊಂಡಿರುವ ಪೊಲೀಸರು ತನಿಖೆ ಚುರುಕು ಗೊಳಿಸಿದ್ದಾರೆ.
ಈ ಮಧ್ಯೆ ನಿತ್ಯಾನಂದ ಸ್ವಾಮಿ ತಲೆ ಮರೆಸಿಕೊಂಡಿದ್ದು, ಅಜ್ಞಾತ ಸ್ಥಳಗಳಿಂದ ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿದ್ದಾನೆ. ಆ ಮೂಲಕ ವಿವಾದಕ್ಕೆ ಗುರಿಯಾಗುತ್ತಿದ್ದು, ಸಾರ್ವಜನಿಕರಿಂದ ವ್ಯಾಪಕ ಟೀಕೆಗೆ ಗುರಿಯಾಗುತ್ತಿದ್ದಾನೆ. ಪೊಲೀಸರ ಸಮಗ್ರ ತನಿಖೆ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರ ಹೇಳಬೇಕಾಗಿದೆ.