ಬೆಂಗಳೂರು, ಮಾ.೧೮: ಮುಂದಿನ ದಿನಗಳಲ್ಲಿ ಗಣಿಗಾರಿಕೆ ತರಬೇತಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಚಿಂತನೆ ನಡೆಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಹಾಗೂ ಬಳ್ಳಾರಿ ಗಣಿ ದೊರೆ ಜನಾರ್ದನ ರೆಡ್ಡಿ ಹೇಳಿದ್ದಾರೆ.
ವಿಧಾನಪರಿಷತ್ ಸದನ ಕಲಾಪದಲ್ಲಿ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಖಾಸಗಿ ಸಂಸ್ಥೆಗಳಿಗೆ ವಿಶ್ವವಿದ್ಯಾಲಯ ಸ್ಥಾಪನೆಗೆ ಅವಕಾಶ ನೀಡುವ ವಿಧೇಯಕ ಕುರಿತು ಪರ್ಯಾಲೋಚನೆ ನಡೆಸಿ, ಅಂಗೀಕಾರ ನೀಡುವಂತೆ ವಿರೋಧ ಪಕ್ಷದ ಸದಸ್ಯರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಸದಸ್ಯ ಎಂ.ಸಿ.ನಾಣಯ್ಯ, ಖಾಸಗಿ ಸಂಸ್ಥೆಗಳಿಗೆ ವಿಶ್ವವಿದ್ಯಾಲಯ ಸ್ಥಾಪಿಸಲು ಅವಕಾಶ ನೀಡಲು ಹೊರಟಿರುವ ಸರಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದರು.
ಬೆಂಗಳೂರು ನಗರದಲ್ಲಿ ೫೦೦, ೧೦೦೦ ಕೋಟಿ ರೂ. ಹಣವುಳ್ಳ ಶ್ರೀಮಂತರು ಸಾವಿರಾರು ಮಂದಿ ಇದ್ದಾರೆ. ಜನಾದನ ರೆಡ್ಡಿಯೂ ಗಣಿಗಾರಿಕೆ ವಿವಿ ಸ್ಥಾಪಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇವರೆಲ್ಲರಿಗೂ ಒಂದೊಂದು ವಿವಿ ಸ್ಥಾಪನೆಗೆ ಅವಕಾಶ ನೀಡಲು ಸರಕಾರ ಮುಂದಾದರೆ, ಶಿಕ್ಷಣ ವ್ಯವಸ್ಥೆಯ ಏನಾಗುತ್ತದೆ ಎಂದು ನಾಣಯ್ಯ ಸರಕಾರವನ್ನು ಪ್ರಶ್ನಿಸಿದರು.
ಸದನದಲ್ಲಿ ಹಾಜರಿದ್ದ ಸಚಿವ ಜನಾದನ ರೆಡ್ಡಿ ಮಧ್ಯೆ ಪ್ರವೇಶಿಸಿ, ಇದುವರೆಗೂ ನನಗೆ ಗಣಿಗಾರಿಕೆ ತರಬೇತಿ ವಿಶ್ವವಿದ್ಯಾಲಯ ಸ್ಥಾಪಿಸುವ ಯೋಜನೆ ಬಂದಿರಲಿಲ್ಲ. ಈಗ ನೆನಪು ಮಾಡಿಕೊಟ್ಟಿದ್ದೀರಿ, ಮುಂದಿನ ದಿನಗಳಲ್ಲಿ ಈ ವಿವಿ ಸ್ಥಾಪಿಸಲು ಚಿಂತನೆ ನಡೆಸಲಾಗುವುದು ಎಂದರು.