ಬೆಂಗಳೂರು, ಮಾ.೧೮: ಭೂ ಕಬಳಿಕೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಪ್ರೋ ಮುಖ್ಯಸ್ಥ ಅಝೀಂ ಪ್ರೇಮ್‌ಜಿ ಹಾಗೂ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಸಮಾಜ ಸೇವಾ ಕಾರ್ಯಕರ್ತ ಸಂತೋಷ್ ಮಿನ್ ಎಂಬವರು ಅಝೀಂ ಪ್ರೇಮ್‌ಜಿ ಪ್ರತಿಷ್ಠಾನದ ವಿರುದ್ದ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ವಿ.ಗೋಪಾಲ್‌ಗೌಡ ನೇತೃತ್ವದ ವಿಭಾಗೀಯ ಪೀಠ, ಈ ಪ್ರಕರಣದಲ್ಲಿ ಅಜೀಂ ಪ್ರೇಮ್‌ಜಿ ಯವರನ್ನು ಪ್ರತಿವಾದಿಯ ನ್ನಾಗಿ ಮಾಡುವಂತೆ ಸೂಚಿಸಿ, ವಿಚಾರಣೆಯನ್ನು ಮುಂದೂಡಿದೆ.
ಕೆ.ಆರ್.ಪುರಂ ಹೋಬಳಿಯ ಬೆಳ್ಳಂದೂರು ಬಳಿಯ ಕೆಂಪಾಪುರ ಕೆರೆ ವ್ಯಾಪ್ತಿಯ ೬ ಕೋಟಿ ರೂ. ಮೌಲ್ಯದ ೨೩ ಗುಂಟೆ ಅರಣ್ಯ ಭೂಮಿಯನ್ನು ಅಜೀಂ ಪ್ರೇಮ್‌ಜಿ ಪ್ರತಿಷ್ಠಾನ ಅಕ್ರಮವಾಗಿ ವಶ ಮಾಡಿಕೊಂಡಿದೆ. ಈ ವಿಷಯ ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದ ಜಂಟಿ ಸದನ ಸಮಿತಿಯ ವರದಿಯಲ್ಲೂ ಸ್ಪಷ್ಟಪಡಿಸಲಾಗಿದೆ.
೨೦೦೭ರ ಫೆ. ೧ಕ್ಕೆ ಈ ವರದಿ ಸಲ್ಲಿಸಲಾಗಿದೆ. ಈ ಬಗ್ಗೆ ಆಕ್ಷೇಪಣೆಗಳು ಕೇಳಿಬಂದಾಗ ಆಗಷ್ಟ್ ೨೭ಕ್ಕೆ ರಾಮಸ್ವಾಮಿ ಪುನಃ ಸ್ಥಳ ಪರೀಶಿಲನೆ ಮಾಡಿ ಕಬಳಿಕೆಯನ್ನು ದೃಢೀಕರಿ ಸಿದ್ದಾರೆ. ಈ ಬಗ್ಗೆ ಸರಕಾರ ಹಾಗೂ ಬಿಬಿಎಂಪಿ ಆಯುಕ್ತರಿಗೆ ಅನೇಕ ಬಾರಿ ದೂರು ನೀಡಲಾಗಿದೆ. ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲೂ ಇದಕ್ಕೆ ಸಂಬಂಧಪಟ್ಟಂತೆ ಸಮರ್ಪಕ ವಿವರಗಳು ಲಭ್ಯವಾಗಿಲ್ಲ. ಇಷ್ಟಿದ್ದರೂ ಈ ಬಗ್ಗೆ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿದೆಯೆನ್ನಲಾಗಿದೆ.