| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಇಳಿಕೆ: ಮುಖ್ಯಮಂತ್ರಿ ಯಡಿಯೂರಪ್ಪ |
ಪ್ರಕಟಿಸಿದ ದಿನಾಂಕ : 2010-03-19
ಬೆಂಗಳೂರು, ಮಾ.೧೮: ಬೆಳಗಾವಿ ಕಿತ್ತೂರು ಚೆನ್ನಮ್ಮ ಸ್ನಾತಕೋತ್ತರ ಅಧ್ಯಯನ ಕೇಂದ್ರವನ್ನು ವಿಶ್ವವಿದ್ಯಾಲಯವಾಗಿ ಮೇಲ್ದರ್ಜೆಗೇರಿಸಲಾಗುವುದು. ಬೀಡಿ, ಸಿಗರೇಟು ಮತ್ತು ತಂಬಾಕು ಉತ್ಪನ್ನಗಳ ಮೇಲೆ ವಿಧಿಸಲಾಗಿದ್ದ ತೆರಿಗೆಯನ್ನು ಶೇ.೪ರಿಂದ ೨ಕ್ಕೆ ಇಳಿಕೆ ಮಾಡಲಾಗುವುದು. ತೆಂಗು, ಕೊಬ್ಬರಿ ಸೇರಿದಂತೆ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ಆಯ-ವ್ಯಯದ ಮೇಲಿನ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಎಂಟನೆ ತರಗತಿಯಲ್ಲಿ ಓದುತ್ತಿರುವ ಬಾಲಕ- ಬಾಲಕಿಯರಿ ಗಾಗಿ ‘ಉಚಿತ ಬೈಸಿಕಲ್ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯನ್ನು ೨೦೧೦-೧೧ನೆ ಸಾಲಿನಿಂದ ಬಸ್‌ಪಾಸ್ ಮತ್ತು ಹಾಸ್ಟೆಲ್ ಸೌಲಭ್ಯ ಪಡೆಯುತ್ತಿರುವ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗುವುದು ಎಂದು ಸದನಕ್ಕೆ ಭರವಸೆ ನೀಡಿದರು.
ನೂತನವಾಗಿ ‘ಸಾಮರಸ್ಯ ಗ್ರಾಮ ಯೋಜನೆ’ ರೂಪಿಸಲಾಗುವುದು. ಈ ಯೋಜನೆಯಡಿ ಸಂಘರ್ಷ ರಹಿತ ಶಾಂತಿ-ಸುವ್ಯವಸ್ಥೆ ಕಾಪಾಡಿಕೊಂಡಿರುವ ಗ್ರಾಮಗಳಿಗೆ ಪ್ರೋತ್ಸಾಹಧನ ನೀಡಲಾಗುವುದು ಎಂದ ಯಡಿಯೂರಪ್ಪ, ಬೆಂಗಳೂರು ನಗರದ ವರ್ತುಲ ರೈಲ್ವೆ ಯೋಜನೆಗೆ ರಾಜ್ಯ ಸರಕಾರದಿಂದ ಶೇ. ೫೦ರಷ್ಟು ಹಣ ಒದಗಿಸಲಾಗುವುದು. ಈ ಸಂಬಂಧ ಕೇಂದ್ರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಅವರಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ರೈಲ್ವೆ ಯೋಜನೆ ಅನುಷ್ಠಾನಕ್ಕೆ ತ್ವರಿತ ಸರಕಾರ ಬದ್ಧವಾಗಿದೆ ಎಂದು ಸದನಕ್ಕೆ ಹೇಳಿದರು.
ಈಗಾಗಲೇ ರಾಜ್ಯ ಸರಕಾರ ಘೋಷಣೆ ಮಾಡಿರುವಂತೆ ವಿದ್ಯುತ್ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕೃಷಿ ಉತ್ಪಾದನೆಗೆ ಆದ್ಯತೆ ನೀಡಲಾಗುವುದು. ಅಲ್ಲದೆ, ನೆರೆ ಸಂತ್ರಸ್ತರಿಗೆ ‘ಆಸರೆ’ ಯೋಜನೆಯಡಿ ಸುಮಾರು ೩೦೫ ಗ್ರಾಮಗಳ ೬೩ ಸಾವಿರ ಕುಟುಂಬಗಳಿಗೆ ಒಟ್ಟು ೧೮ ಸಾವಿರ ಮನೆ ನಿರ್ಮಾಣ ಕಾರ್ಯಕ್ಕೆ ಮಾ. ೨೧ರಂದು ಚಾಲನೆ ನೀಡಲಾಗುವುದು ಎಂದು ಹೇಳಿದ ಯಡಿಯೂರಪ್ಪ, ರಾಜ್ಯದ ಕೈಗಾರಿಕೆ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಜೂನ್ ೩ಮತ್ತು ೪ರಂದು ಬೆಂಗಳೂರಿನಲ್ಲಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲಾಗುವುದು ಎಂದು ವಿವರಿಸಿದರು.
ಕೈಗಾರಿಕಾಭಿವೃದ್ಧಿಗೆ ಸರಕಾರ ವಿಶೇಷ ಗಮನ ನೀಡಲಿದೆ. ಈ ನಿಟ್ಟಿನಲ್ಲಿ ನೂತನ ಕೈಗಾರಿಕಾ ನೀತಿ ಮತ್ತು ನೂತನ ಗಣಿ ನೀತಿ ರೂಪಿಸಲಾಗುವುದು. ೨೦೧೪ರ ಒಳಗೆ ೩ಲಕ್ಷ ಕೋಟಿ ರೂ.ಬಂಡವಾಳ ಹೂಡಿಕೆ ಮಾಡುವ ಮೂಲಕ ಕನಿಷ್ಠ ೧೦ ಲಕ್ಷ ಮಂದಿಗೆ ಉದ್ಯೋಗ ಸೃಷ್ಟಿಸುವ ಗುರಿಯನ್ನು ಹೊಂದ ಲಾಗಿದೆ ಎಂದ ಯಡಿಯೂರಪ್ಪ, ಡಿಸೆಂಬರ್ ತಿಂಗಳಲ್ಲಿ ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಲಾಗುವುದು ಎಂದು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಮಠ-ಮಾನ್ಯಗಳಿಗೆ ಹಣ ನೀಡಿದ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡ ಯಡಿಯೂರಪ್ಪ, ಮಠ-ಮಾನ್ಯಗಳ ಭಕ್ತರ ಮೂಲಭೂತ ಸೌಕರ್ಯ ಕಲ್ಪಿಸಲು ಹಣ ನೀಡಲಾಗಿದೆ. ಈ ಬಗ್ಗೆ ಅನಗತ್ಯ ಚರ್ಚೆ ಬೇಡ ಎಂದು ಮನವಿ ಮಾಡಿದರು. ಭೂ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸರಕಾರದ ವಿರುದ್ಧ ವ್ಯವಸ್ಥಿತ ಪಿತೂರಿ ಮಾಡಲಾಗುತ್ತಿದೆ. ಭೂಮಿ ಇಲ್ಲದೆ ಯಾವುದೇ ಕೈಗಾರಿಕೆಗಳನ್ನು ಸ್ಥಾಪಿಸಲು ಸಾಧ್ಯವೆ ಎಂದು ಯಡಿಯೂರಪ್ಪ ತೀಕ್ಷ್ಣವಾಗಿ ಪ್ರಶ್ನಿಸಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಪ್ರತಿಪಕ್ಷಗಳ ಸದಸ್ಯರುಗಳು ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ರಾಜ್ಯದ ಆರ್ಥಿಕ ಸ್ಥಿತಿ ಸುಸ್ಥಿತಿಯಲ್ಲಿದೆ.
ಇಲಾಖಾವಾರು ಶೇ.೯೪ರಷ್ಟು ಹಣ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ ಮುಖ್ಯಮಂತ್ರಿಗಳು, ಪ್ರತಿಪಕ್ಷಗಳ ಸದಸ್ಯರುಗಳು ಸಂಧಾನ ಬಿಟ್ಟು ಸಂಘರ್ಷ, ಬ್ಲಾಕ್‌ಮೇಲ್ ತಂತ್ರಕ್ಕೆ ಮಣಿಯುವುದಿಲ್ಲ ಎಂದು ಗುಡುಗಿದರು. ‘ಮನೆಯ ಗುಟ್ಟು ರಟ್ಟಾಗಬಾರದು’ ರಾಜ್ಯದ ಸ್ಥಿತಿಯನ್ನು ರಾಷ್ಟದ ಮುಂದೆ ಹರಾಜು ಮಾಡುವುದು ಬೇಡ ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-19 00:00:00
|
|
|
|
|