| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಸರಕಾರಿ ನೌಕರರಿಗೆ ಆಸ್ತಿ ವಿವರ ಸಲ್ಲಿಕೆ ಕಡ್ಡಾಯವಾಗಲಿ: ಸಂತೋಷ್ ಹೆಗ್ಡೆ |
ಪ್ರಕಟಿಸಿದ ದಿನಾಂಕ : 2010-03-19
ಬೆಂಗಳೂರು, ಮಾ.೧೮: ಶಾಸಕರಂತೆ ಸರಕಾರಿ ನೌಕರರು ಲೋಕಾಯುಕ್ತ ಸಂಸ್ಥೆಗೆ ಆಸ್ತಿ ವಿವರ ಸಲ್ಲಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಲೋಕಾಯುಕ್ತ ಸಂತೋಷ್ ಹೆಗ್ಡೆ ಸಲಹೆ ಮಾಡಿದ್ದಾರೆ.
ಅಕ್ರಮ ಆಸ್ತಿ ಗಳಿಕೆಯ ಸಂಬಂಧ ದಾಳಿ ನಡೆಸುವ ಮೊದಲು ಅಧಿಕಾರಿಗಳ ಆಸ್ತಿ ವಿವರಗಳನ್ನು ಪಡೆಯಲಾಗುತ್ತಿದೆ. ಇದರಿಂದ ಸದರಿ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿ ಎಚ್ಚೇತ್ತುಕೊಳ್ಳುತ್ತಿದ್ದಾರೆ. ತಮ್ಮ ಅಕ್ರಮ ಆಸ್ತಿಯನ್ನು ಬೇರೆಡೆ ಬಚ್ಚಿಟ್ಟು ತಪ್ಪಿಸಿಕೊಳ್ಳುತ್ತಿದ್ದಾರೆ.
ಲೋಕಾಯುಕ್ತ ಸಂಸ್ಥೆಗೆ ಇದೊಂದು ಸವಾಲಾಗಿದ್ದು, ಸರಕಾರ ಆಸ್ತಿ ವಿವರ ಸಲ್ಲಿಕೆಯನ್ನು ಕಡ್ಡಾಯಗೊಳಿಸುವುದು ಅಗತ್ಯವಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಅದೇ ರೀತಿ ಪಾಲಿಕೆಗಳಲ್ಲಿ ಚುನಾಯಿತರಾಗುವ ಸದಸ್ಯರೂ ಕೂಡ ತಮ್ಮ ಆಸ್ತಿ ವಿವರಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಲು ಸರಕಾರ ಕಾಯ್ದೆ ತಿದ್ದುಪಡಿ ಮಾಡಬೇಕೆಂದು ಅವರು ಆಗ್ರಹಿಸಿದರು.
ಸರಕಾರಿ ಅಧಿಕಾರಿಗಳು ತಮ್ಮ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪ್ರತಿವರ್ಷವೂ ಆಸ್ತಿಯ ವಿವರಗಳನ್ನು ಸಲ್ಲಿಸುತ್ತಿದ್ದಾರೆ. ಅದರ ಒಂದು ಪ್ರತಿಯನ್ನು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸುವಂತೆ ಅಧಿಸೂಚನೆ ಹೊರಡಿಸಬೇಕಿದೆ. ಈ ವಿಷಯವಾಗಿ ರಾಜ್ಯ ಸರಕಾರಕ್ಕೆ ತಾವು ಪತ್ರ ಬರೆಯುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಸಾವಿರಾರು ನೌಕರರಿದ್ದಾರೆ ಲೋಕಾಯುಕ್ತ ಪ್ರತಿಯೋಬ್ಬರ ಆಸ್ತಿ ವಿವರಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಮಾಹಿತಿ ಅಗತ್ಯವೆಂದು ಕೇಳಿದಾಗ ಹಿರಿಯ ಅಧಿಕಾರಿಗಳು ಗುರಿಯಲ್ಲಿರು ನೌಕರರನಿಗೆ ಮಾಹಿತಿ ನೀಡಿ ಎಚ್ಚರಿಸುತ್ತಾರೆ. ಇದರಿಂದಾಗಿ ಬಹಳಷ್ಟು ಅಧಿಕಾರಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ. ಇಂತಹ ಸ್ಥಿತಿಗೆ ಸರಕಾರವೇ ಕಾರಣ. ಸ್ಪಷ್ಟ ನಿಯಮಾವಳಿಗಳನ್ನು ಜಾರಿಗೆ ತರದೆ ಭ್ರಷ್ಟಚಾರ ನಿಯಂತ್ರಣ ಮಾಡಿ ಎಂದರೆ ಹೇಗೆ ಎಂದು ಅವರು ಕಿಡಿಕಾರಿದರು.
ಬಹುತೇಕ ಉಪನೋಂದಾವ ಣಾಧಿಕಾರಿಗಳು ಮಧ್ಯವರ್ತಿಗಳ ಮೂಲಕವೆ ವ್ಯವಹಾರ ಮಾಡುತ್ತಿದ್ದಾರೆ. ಅಧಿಕಾರಿ ಒಂದು ಕಡೆಯಿದ್ದರೆ ಮಧ್ಯವರ್ತಿ ಇನ್ನೊಂದೆಡೆ ಇರುತ್ತಾನೆ. ಇದನ್ನು ಪತ್ತೆ ಹಚ್ಚುವುದು ಕಷ್ಟವಾಗಿದೆ ಎಂದು ಅವರು ಹೇಳಿದರು.
ಪಾಲಿಕೆಗಳಲ್ಲಿ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂಪಾಯಿಗಳು ಪ್ರತಿವರ್ಷ ಖರ್ಚಾಗುತ್ತಿದೆ. ಈ ಖರ್ಚಿಗೂ, ಪಾಲಿಕೆ ಸದಸ್ಯರ ಆಸ್ತಿ ಮೊತ್ತ ಹೆಚ್ಚಳಕ್ಕೂ ಬಹಳಷ್ಟು ಸಂಬಂಧವಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಸದಸ್ಯರು ಆಸ್ತಿ ವಿವರ ಸಲ್ಲಿಕೆಯನ್ನು ಕಡ್ಡಾಯಗೊಳಿಸಬೇಕಿದೆ. ಈಗಿರುವ ಲೋಕಾಯುಕ್ತ ಕಾಯ್ದೆಯ ೧೨೨ರ ಕಲಂಗೆ ತಿದ್ದುಪಡಿ ತಂದು, ಶಾಸಕರು, ವಿಧಾನಪರಿಷತ್ ಸದಸ್ಯರು ಎಂಬುದರ ಜೊತೆಗೆ ಚುನಾಯಿತ ಪಾಲಿಕೆ ಸದಸ್ಯರು ಎಂದು ನಮೂದಿಸಿದರೆ ಸಾಕು ಎಂದು ಅವರು ಸಲಹೆ ನೀಡಿದರು.
ಈ ಕುರಿತು ಎರಡುವರೆ ತಿಂಗಳ ಹಿಂದೆಯೇ ಮುಖ್ಯಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಯಾವಾಗ ಎಂದು ಗೋತ್ತಿಲ್ಲ ಎಂದು ಹೆಗ್ಡೆ ನುಡಿದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-19 00:00:00
|
|
|
|
|