ಬಂಟ್ವಾಳ: ಅಕ್ರಮ ಮರಳು ಸಾಗಾಟ: ಜಿಲ್ಲಾಧಿಕಾರಿಯಿಂದ ನೇರ ಕಾರ್ಯಾಚರಣೆ
ಪ್ರಕಟಿಸಿದ ದಿನಾಂಕ : 2010-03-19
ಬಂಟ್ವಾಳ, ಮಾ.೧೮: ಮರಳು ಸಾಗಾಟ ಪ್ರಕರಣವೊಂದಕ್ಕೆ ಸಂಬಂಧಿಸಿ ಲಾರಿ ಚಾಲಕನೋರ್ವನನ್ನು ದ.ಕ. ಜಿಲ್ಲಾಧಿಕಾರಿ ಪೊನ್ನುರಾಜ್ ತರಾಟೆಗೆ ತೆಗೆದುಕೊಂಡು ಬುದ್ದಿಹೇಳಿ ಪೊಲೀಸರಿಗೊಪ್ಪಿಸಿದ ಘಟನೆ ವಿಟ್ಲ ಸಮೀಪದ ಉಕ್ಕುಡ ಎಂಬಲ್ಲಿ ನಡೆದಿದೆ.
ಘಟನೆ ವಿವರ: ಕನ್ಯಾನ ನಿವಾಸಿಯಾಗಿರುವ ಲ್ಯಾನ್ಸಿ ಎಂಬಾತ ಲಾರಿಯೊಂದರಲ್ಲಿ ಪಡಿಬಾಗಿಲು ಸಮೀಪ ಕನ್ಯಾನ ರಸ್ತೆಯ ಮೂಲಕ ಮರಳು ಸಾಗಿಸುತ್ತಿದ್ದನೆನ್ನಲಾಗಿದ್ದು, ಇದೇ ಸಂದರ್ಭ ಲಾರಿಯನ್ನು ಹಿಂಬಾಲಿಸಿದ ಜಿಲ್ಲಾಧಿಕಾರಿ, ಉಕ್ಕುಡ ಚೆಕ್‌ಪೋಸ್ಟ್ ಬಳಿ ಲಾರಿಯನ್ನು ತಡೆದು ದಾಖಲೆ ಪತ್ರಗಳನ್ನು ತಪಾಸಣೆ ನಡೆಸಿದ್ದಾರೆ.
ಸಮರ್ಪಕ ಉತ್ತರ ನೀಡದ ಚಾಲಕನಿಗೆ ಕೈ ಏಟಿನ ರುಚಿ ತೋರಿಸಿದ ಜಿಲ್ಲಾಧಿಕಾರಿ, ಆತನನ್ನು ತಮ್ಮ ಅಂಗರಕ್ಷಕರ ಮೂಲಕ ವಿಟ್ಲ ಪೋಲಿಸರಿಗೊಪ್ಪಿಸಿದ್ದಾರೆ ಎಂದು ಹೇಳಲಾಗಿದೆ. ಸ್ಥಳೀಯವಾಗಿ ದಾಸ್ತಾನು ಇರಿಸಲಾಗಿದ್ದ ಮರಳನ್ನು ಕನ್ಯಾನದ ಮನೆಯೊಂದಕ್ಕೆ ಸಾಗಿಸಲಾಗುತ್ತಿತ್ತು ಎಂಬುದಾಗಿ ತಪಾಸಣೆ ಸಂದರ್ಭ ಚಾಲಕ ಉತ್ತರಿಸಿದ್ದು, ಪರವಾನಿಗೆ ಇಲ್ಲದೆ ದಾಸ್ತಾನು ಇರಿಸುವಂತಿಲ್ಲ ಹಾಗೂ ಆತ ಜಿಲ್ಲಾಧಿಕಾರಿಯ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಿಲ್ಲ ಮಾತ್ರವಲ್ಲದೆ, ಆತನಲ್ಲಿ ಚಾಲನೆಯ ಪರವಾನಿಗೆಯೂ ಇರಲಿಲ್ಲ ಹಾಗಾಗಿ ಆತನನ್ನು ತನಿಖೆಗಾಗಿ ವಿಟ್ಲ ಪೋಲಿಸರಿಗೊಪ್ಪಿಸಲಾಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ತಿಳಿಸಿದ್ದಾರೆ.