| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಉಡುಪಿ: ಡಾ.ಅಮೃತ ಸೋಮೇಶ್ವರ, ಕರ್ಗಿ ನಲಿಕೆಗೆ ಜಾನಪದ ಪ್ರಶಸ್ತಿ |
ಪ್ರಕಟಿಸಿದ ದಿನಾಂಕ : 2010-03-19
ಉಡುಪಿ, ಮಾ.೧೮: ತುಳು ಜಾನಪದ ವಿದ್ವಾಂಸ ಡಾ.ಅಮೃತ ಸೋಮೇಶ್ವರ ಹಾಗೂ ಅಪರೂಪದ ಪಾಡ್ದನ ಹಾಡುಗಾರ್ತಿ ಕರ್ಗಿ ನಲಿಕೆಯವರಿಗೆ ಚೊಚ್ಚಲ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಕಳೆದ ಒಂದು ದಶಕದಿಂದ ಜಾನಪದ ಗ್ರಂಥಗಳನ್ನು ಪ್ರಕಟಿಸು ತ್ತಿರುವ ಕೆಮ್ಮಲಜೆ ಜಾನಪದ ಪ್ರಕಾಶನ ಈ ವರ್ಷದಿಂದ ಆರಂಭಿಸಿದ ತುಳು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿಯನ್ನು ಮಾ.೨೮ರಂದು ಪ್ರದಾನ ಮಾಡಲಾಗುವುದು ಎಂದು ಪ್ರಕಾಶನದ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿ ವರ್ಷ ಒಬ್ಬರು ಜಾನಪದ ಸಂಶೋಧಕ ಹಾಗೂ ಒಬ್ಬ ಜಾನಪದ ಕಲಾವಿದರಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಡಾ.ಎಕ್ಕಾರು ವಿವರಿಸಿದರು.
ಪ್ರಥಮ ಪ್ರಶಸ್ತಿಗೆ ಜಾನಪದ ಸಾಹಿತ್ಯ ಅದರಲ್ಲೂ ವಿಶೇಷ ವಾಗಿ ತುಳು ಜಾನಪದದ ಗಣಿಯಂತಿರುವ ಹಿರಿಯ ವಿದ್ವಾಂಸ ಡಾ.ಅಮೃತ ಸೋಮೇಶ್ವರ ಹಾಗೂ ದೈವಾರಾಧನೆಯ ಕಲಾವಿದ ದೋಗು ನಲಿಕೆಯವರ ಪತ್ನಿ ಪಾಡ್ದನ ಕಲಾವಿದೆ ಕರ್ಗಿ ನಲಿಕೆ ಯವರನ್ನು ಎಸ್.ಎ.ಕೃಷ್ಣಯ್ಯ, ಡಾ.ವೈ.ಎನ್.ಶೆಟ್ಟಿ, ಡಾ.ದುಗ್ಗಪ್ಪ ಕಜೆಕಾರ, ಡಾ.ಗಣನಾಥ ಎಕ್ಕಾರು ಅವರನ್ನೊಳಗೊಂಡ ಸಮಿತಿ ಆಯ್ಕೆ ಮಾಡಿದೆ ಎಂದವರು ಹೇಳಿದರು.
ಪ್ರಶಸ್ತಿಯು ೧೦ ಸಾವಿರ ರೂ.ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿರುವುದು. ಮಾ.೨೮ರಂದು ಸಂಜೆ ೪ ಗಂಟೆಗೆ ಹೊಟೇಲ್ ಕಿದಿಯೂರಿನ ರೂಫ್‌ಟಾಪ್‌ನಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯ ಗೃಹ ಸಚಿವ ಡಾ.ವಿ.ಎಸ್. ಆಚಾರ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಬನ್ನಂಜೆ ಬಾಬು ಅಮೀನ್‌ರ ‘ತುಳುನಾಡ ದೈವಗಳು ಸಾಂಸ್ಕೃತಿಕ ವಿಶ್ಲೇಷಣೆ’ ಕೃತಿ ಬಿಡುಗಡೆ ಗೊಳ್ಳಲಿದೆ. ಕುದಿ ವಸಂತ ಶೆಟ್ಟಿ ಕೃತಿ ಪರಿಚಯ ಮಾಡಲಿ ದ್ದಾರೆ. ಶಾಸಕ ಕೆ.ರಘುಪತಿ ಭಟ್, ಮಂಗಳೂರು ವಿವಿ ಕುಲಸಚಿವ ಡಾ.ಕೆ.ಚಿನ್ನಪ್ಪ ಗೌಡ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್, ಸಾಹಿತಿ ಡಾ.ನಾ.ಮೊಗಸಾಲೆ, ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ಅಂಬಾತನಯ ಮುದ್ರಾಡಿ, ಮಾಜಿ ಸಂಸದ ವಿನಯಕುಮಾರ್ ಸೊರಕೆ, ಯು.ನಾರಾಯಣ, ಪ್ರಮೋದ್ ಮಧ್ವರಾಜ್, ಇಂದ್ರಾಳಿ ಜಯಕರ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ.
ಕೆಮ್ಮಲಜೆ ಜಾನಪದ ಲೇಖನ ಸ್ಪರ್ಧೆ ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಡಾ.ಗಣನಾಥ ಎಕ್ಕಾರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್.ಎ.ಕೃಷ್ಣಯ್ಯ, ಬನ್ನಂಜೆ ಬಾಬು ಅಮೀನ್, ಓಬು ಪೂಜಾರಿ ಹಾಗೂ ಆನಂದ ಸನಿಲ್ ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-19 00:00:00
|
|
|
|
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ] |
|