ವಿಶ್ವ ಬ್ಯಾಡ್ಮಿಂಟನ್: ಇತಿಹಾಸ ಸೃಷ್ಟಿಸಿದ ಸೈನಾ ನೆಹ್ವಾಲ್ |
ಪ್ರಕಟಿಸಿದ ದಿನಾಂಕ : 2010-03-19
ನವದೆಹಲಿ, ಗುರುವಾರ, 18 ಮಾರ್ಚ್ 2010
ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ಐದನೇ ಸ್ಥಾನಕ್ಕೆ ತಲುಪುವ ಮೂಲಕ ತನ್ನ ಕನಸನ್ನು ನನಸಾಗಿಸಿಕೊಂಡಿದ್ದು, ದಾಖಲೆ ನಿರ್ಮಿಸಿದ್ದಾರೆ.
ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ ಹಿನ್ನೆಲೆಯಲ್ಲಿ, ಸೈನಾ ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ಐದನೇ ಸ್ಥಾನಕ್ಕೆ ತಲುಪಿದ್ದು, ಈ ಸಾಧನೆಗೈದ ಏಕೈಕ ಭಾರತೀಯ ಮಹಿಳಾ ಕ್ರೀಡಾಪಟು ಎಂಬ ಹೆಮ್ಮೆಗೆ ಪಾತ್ರರಾಗಿದ್ದಾರೆ.
ಈ ಹಿಂದೆ ಅಗ್ರ ಆರನೇ ಸ್ಥಾನಕ್ಕೆ ತಲುಪಿದ್ದೇ ಸೈನಾ ಅವರ ಶ್ರೇಷ್ಠ ರ‌್ಯಾಂಕಿಂಗ್ ಆಗಿತ್ತು. ಆದರೆ ಅಗ್ರ ಐದರೊಳಗೆ ಪ್ರವೇಶಿಸುವುದು ನನ್ನ ಕನಸು ಎಂದು ಸೈನಾ ಹೇಳಿಕೊಂಡಿದ್ದರು.
ಆಲ್-ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಸೆಮಿಫೈನಲ್‌ನಲ್ಲಿ ಸೋಲನುಭವಿಸಿದರೂ ಶ್ರೇಯಾಂಕ ಏರಿಕೆಯಿಂದಾಗಿ ಮುಂಬರುವ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಇದು ಆತ್ಮವಿಶ್ವಾಸ ವೃದ್ಧಿಗೆ ಕಾರಣವಾಗಲಿದೆ ಎಂದು ಬ್ಯಾಡ್ಮಿಂಟನ್ ಮೂಲಗಳು ತಿಳಿಸಿವೆ.
2009ರ ಇಂಡೋನೇಷಿಯನ್ ಸೂಪರ್ ಸೀರಿಸ್ ಪಂದ್ಯಾವಳಿ ಗೆದ್ದುಕೊಂಡು ದಾಖಲೆ ನಿರ್ಮಿಸಿದ್ದ ಹೈದರಾಬಾದ್ ಹುಡುಗಿ, ವರ್ಲ್ಡ್ ಸೂಪರ್ ಸೀರಿಸ್ ಮಾಸ್ಟರ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿದ್ದರು. ಮಲೇಷಿಯನ್ ಓಪನ್, ಡೆನ್ಮಾರ್ಕ್ ಓಪನ್, ಫ್ರೆಂಚ್ ಸೂಪರ್ ಸೀರಿಸ್, ಸ್ವಿಸ್ ಓಪನ್, ಇಂಡಿಯನ್ ಓಪನ್ ಮತ್ತು ಸಿಂಗಾಪುರ್ ಓಪನ್ ಪಂದ್ಯಾವಳಿಗಳಲ್ಲಿ ಕ್ವಾರ್ಟರ್‌ಫೈನಲ್ ಹಂತವನ್ನು ತಲುಪಿದ ಸಾಧನೆ ಅವರದ್ದು.
ಹರಿಯಾಣಾದ ಹಿಸಾರ್ ನಗರದಲ್ಲಿ ಜನ್ಮ ತಾಳಿದ ಸೈನಾ, ಆಲ್ ಇಂಗ್ಲೆಂಡ್ ಚಾಂಪಿಯನ್ ಪುಲ್ಲೇಲಾ ಗೋಪಿಚಂದ್ ಅವರ ಮಾರ್ಗದರ್ಶನದಲ್ಲಿ ಹೈದರಾಬಾದ್‌ನಲ್ಲಿ ತರಬೇತಿ ಪಡೆಯುತ್ತಿದ್ದು, ಅವರ ಕುಟುಂಬವೂ ಅಲ್ಲೇ ನೆಲೆಸಿದೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-19
|
|
|