|
ಪ್ರಕಟಿಸಿದ ದಿನಾಂಕ : 2010-03-18
ಬನ್ನೇರುಘಟ್ಟ ಜೈವಿಕ ಉದ್ಯಾನವು ಬದಲಾಗಬೇಕು; ದೂಳೆದ್ದು ಮುಖ ಮೆತ್ತುವ ಬದಲು ನೋಡಿ ದವರ ಮುಖದಲ್ಲಿ ಸುತ್ತಲಿನ ಹಸಿರು ಹರ್ಷ ಮೂಡಿಸಬೇಕು! ಇಂಥ ಆಶಯವನ್ನು ಸಾಕಾರ ಗೊಳಿಸುವ ನಿಟ್ಟಿನಲ್ಲಿ ದಿಟ್ಟ ಪ್ರಯತ್ನವೊಂದು ನಡೆದಿದೆ.
ಇದೇನು ಉದ್ಯಾನವೇ? ಎಲ್ಲೆಡೆಯೂ ಧೂಳು. ಹಸಿರು ಎಲ್ಲಿದೆಯೆಂದು ಹುಡುಕಬೇಕು. ದೊಡ್ಡ ಮರಗಳ ಅಡಿಯಲ್ಲಿ ಬರಿ ಮಣ್ಣಿನ ಕಣಗಳ ನರ್ತನ. ಮನಸ್ಸಿಗೆ ಹಿತವೆನಿಸುವ ಬದಲು ಕಿರಿಕಿರಿ ಯೇ ಹೆಚ್ಚು. ಪ್ರವಾಸಿಗಳಿಗೆ ಅನಾನುಕೂಲ. ಮಕ್ಕಳನ್ನು ಕರೆದುಕೊಂಡು ಕುಟುಂಬ ಸಮೇತ ಹೋದರಂತೂ ಪ್ರಾಣಿಗಳನ್ನು ನೋಡುವುದಕ್ಕಿಂತ ಪ್ರೇಮಿಗಳ ಲೀಲೆಯೇ ಕಣ್ಣಿಗೆ ಹೆಚ್ಚಾಗಿ ಬಿದ್ದು ಮುಜುಗರ ಉಂಟು ಮಾಡುತ್ತದೆ. ಇಂಥದ ಅನೇಕ ಸಮಸ್ಯೆ ಬನ್ನೇರುಘಟ್ಟ ವನ್ಯಜೀವಿ ಉದ್ಯಾ ನದಲ್ಲಿ ಬಲವಾಗಿ ಕಾಡುತ್ತದೆ.
ವನ್ಯಜೀವಿಗಳನ್ನು ನೋಡಬೇಕೆಂದು ಬಂದವರಿಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಮಾಹಿತಿ ಬಿಟ್ಟರೆ ಬೇರೇನೂ ಇಲ್ಲ. ಎಲ್ಲಿ ಹೋಗಬೇಕು? ಯಾವ ಪ್ರಾಣಿ ಎಲ್ಲಿದೆ ಎಂದು ತಿಳಿಸುವ ವ್ಯವಸ್ಥೆಯೂ ಇಲ್ಲ. ಜಾತ್ರೆಯಲ್ಲಿ ಅಮ್ಮನ ಕೈತಪ್ಪಿಸಿಕೊಂಡು ನಿಂತ ಮಗುವಿನಂಥ ಪರಿಸ್ಥಿತಿ ಇಲ್ಲಿಗೆ ಬಂದ ವರದು.
ಇದಿಷ್ಟು ಪ್ರವಾಸಿಗಳ ಗೋಳಾದರೆ ಉದ್ಯಾನದಲ್ಲಿನ ಹಲವಾರು ಕೇಜ್‌ಗಳಲ್ಲಿರುವ (ಪಂಜರ) ವನ್ಯಜೀವಿಗಳಿಗೂ ನೆಮ್ಮದಿ ಇಲ್ಲ. ನಾನಾ ಕಾರಣಕ್ಕೆ ಕಿರಿಕಿರಿ ಆಗುತ್ತಿದ್ದರೂ ಮೌನವಾಗಿ ಲೋಹ ದ ಬಲೆಗಳ ಒಳಗೆ ನಿಂತು ಪಿಳಿಪಿಳಿ ಕಣ್ಣುಬಿಡುತ್ತವೆ. ಎಲ್ಲ ದಿಕ್ಕಿನಿಂದಲೂ ಬಂದು ನಿಂತು ತಮ್ಮ ನ್ನು ನೋಡುವ ಜನರ ತಂಟೆ, ಕುಚೇಷ್ಟೆಯಿಂದಯಿಂದ ಅವುಗಳಿಗೂ ಶಾಂತಿಯಿಲ್ಲ.
ವನ್ಯಜೀವಿ ವೈದ್ಯರು ಹೇಳುವ ಪ್ರಕಾರ ಇಂಥ ಪ್ರಾಣಿ ಸಂಗ್ರಹಾಲಯದ ಕೇಜ್‌ಗಳಲ್ಲಿನ ಜೀವಿ ಗಳನ್ನು ನೋಡಲು ಒಂದು ಕಡೆಯಿಂದ ಮಾತ್ರ ಅವಕಾಶ ಇರಬೇಕು. ಎಲ್ಲ ಕಡೆಯಿಂದ ಗದ್ದಲ ವಾಗುತ್ತಿದ್ದರೆ ಅವುಗಳು ಕೂಡ ಮಾನಸಿಕವಾಗಿ ದಣಿಯುವ ಅಪಾಯವಿರುತ್ತದೆ. ಆದ್ದರಿಂದ ಸುತ್ತಲೂ ನಿಂತು ನೋಡುವ ರೀತಿಯಲ್ಲಿ ವ್ಯವಸ್ಥೆ ಇರಲೇಬಾರದು. ಇವು ತುಂಬ ಸಣ್ಣ ವಿಷಯ ಗಳೆಂದು ಮೇಲು ನೋಟಕ್ಕೆ ಅನಿಸಬಹುದು.
ಈ ಎಲ್ಲ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿರುವ ಬನ್ನೇರುಘಟ್ಟ ಜೈವಿಕ ಉದ್ಯಾನದ ನಿರ್ದೇಶಕರಾದ ಮಿಲ್‌ಟ್ಯಾಗೊ ಅವರು ಉದ್ಯಾನಕ್ಕೆ ಹೊಸದೊಂದು ರೂಪ ನೀಡುವ ಕೆಲಸಕ್ಕೆ ಚಾಲನೆ ನೀಡಿದ್ದಾರೆ. ಪ್ರಾಣಿ ವೀಕ್ಷಣೆ ಮಾತ್ರ ಇಲ್ಲಿಗೆ ಬರುವವರ ಉದ್ದೇಶವಾಗಿರಬೇಕು, ಬೇರೆ ಚಟುವಟಿಕೆಗಳ ಕೇಂದ್ರ ಇದಾಗಬಾರದು ಎನ್ನುವುದೇ ಉದ್ಯಾನವನ್ನು ರೂಪಾಂತರಿಸುವ ಯೋಚನೆ ಹಾಗೂ ಯೋಜನೆಗೆ ಮೂಲ ಕಾರಣ. ವನ್ಯಜೀವಿ ಉದ್ಯಾನದ ಮೊದಲ ಗುರಿ ಪ್ರಾಣಿ ವೀಕ್ಷಣೆ ಹಾಗೂ ಮಾಹಿತಿ ಸಂಗ್ರಹವೆಂದು ಸ್ಪಷ್ಟಗೊಳಿಸುವ ಕಡೆಗೆ ಮಾತ್ರ ಗಮನ.
ಪ್ರೇಮಿಗಳ ಟೈಂಪಾಸ್‌ಗೆ ತಾಣ ಇದಲ್ಲವೆಂದು ಸಾರುವ ರೀತಿಯಲ್ಲಿಯೇ ಎಲ್ಲ ಸಂದಿಗೊಂದಿಯ ಮಾರ್ಗಗಳನ್ನು ಬಂದ್ ಮಾಡಲು ಕೂಡ ಒತ್ತು ನೀಡಲಾಗುತ್ತಿದೆ. ಕಲ್ಲುಗಳು, ಮರಗಳ ಸಂದು ಗಳ ನಡುವೆ ಕೂಡ ನುಗ್ಗಿ ಹೋಗದ ರೀತಿಯಲ್ಲಿ ಅಲ್ಲಿ ಹಚ್ಚಹಸಿರಾದ ಹೊಸ ವಿನ್ಯಾಸದ ಉದ್ಯಾ ನ ರೂಪ ಪಡೆಯಲಿದೆ. ಎಲ್ಲವೂ ವ್ಯವಸ್ಥಿತವಾಗಿ ಕಾಣಿಸಲಿದೆ ಎನ್ನುವುದು ಮಿಲ್‌ಟ್ಯಾಗೊ ಅವರ ಅಭಯ.
ಸಹಾಯಕ ನಿರ್ದೇಶಕ (ವನ್ಯಜೀವಿ ವೈದ್ಯಕೀಯ ಸೇವೆ) ಡಾ.ಬಿ.ಸಿ.ಚಿಟ್ಟಿಯಪ್ಪ ಅವರಿಗೆ ಬನ್ನೇರು ಘಟ್ಟ ಉದ್ಯಾನಕ್ಕೆ ಹೊಸ ರೂಪ ನೀಡಿ ವ್ಯವಸ್ಥಿತಗೊಳಿಸುವ ಹೊಣೆಯನ್ನು ವಹಿಸಲಾಗಿದೆ. ಪ್ರಕೃ ತಿ ಹಾಗೂ ವನ್ಯಜೀವಿಗಳ ಬಗ್ಗೆ ಸಹಜವಾಗಿಯೇ ಕಾಳಜಿಯನ್ನು ಹೊಂದಿರುವ ಚಿಟ್ಟಿಯಪ್ಪ ಹಲ ವಾರು ಹೊಸ ಅಂಶಗಳನ್ನು ಈ ಉದ್ಯಾನಕ್ಕೆ ಸೇರಿಸಲು ಮುಂದಾಗಿದ್ದಾರೆ.
ಕೇಜ್‌ಗಳ ಹೊಸ ಸ್ವರೂಪ: ಸದ್ಯ ವನ್ಯಜೀವಿಗಳನ್ನು ಎಲ್ಲ ಕಡೆಯಿಂದಲೂ ಸುತ್ತುವರಿದು ನೋಡು ವುದಕ್ಕೆ ಅವಕಾಶವಿದೆ.ಇದನ್ನು ಬದಲಿಸಿ, ಒಂದು ಕಡೆಯಿಂದ ಮಾತ್ರ ಕೇಜ್‌ಗಳತ್ತ ಪ್ರವೇಶಕ್ಕೆ ಅವಕಾಶ ಇರುವಂತೆ ಮಾಡುವ ವಿನ್ಯಾಸ ರೂಪಿಸಲಾಗಿದೆ. ಪ್ರಾಣಿಗಳಿಗೆ ಬಾಕಿ ಮೂರು ಕಡೆ ಯಿಂದ ಏಕಾಂತದ ವ್ಯವಸ್ಥೆ ಇರುತ್ತದೆ. ಜೊತೆಗೆ ಪ್ರತಿಯೊಂದು ಕೇಜ್‌ನ ಸುತ್ತಲೂ ಹೊಸದಾಗಿ ಮರಗಳನ್ನು ನೆಡುವ ಕೆಲಸವೂ ಆರಂಭವಾಗಿದೆ. ಅವುಗಳ ಬೆಳೆದು ನಿಂತ ನಂತರ ಅಲ್ಲಿನ ವಾತಾವರಣ ಇನ್ನಷ್ಟು ತಂಪಾಗಲಿದೆ.
ವ್ಯವಸ್ಥಿತ ಮಾರ್ಗ: ಎಲ್ಲೆಂದರಲ್ಲಿ ಗೊಂದಲವಾಗುವ ರೀತಿಯಲ್ಲಿ ಈಗ ಮಾರ್ಗಗಳು ಇರುವು ದರಿಂದ ಜನರು ತಮಗೆ ಇಷ್ಟಬಂದಂತೆ ಅಲ್ಲೊಂದು ಇಲ್ಲೊಂದು ಕೇಜ್‌ನಲ್ಲಿರುವ ಪ್ರಾಣಿ ಹಾಗೂ ಪಕ್ಷಿಗಳನ್ನು ನೋಡಿಕೊಂಡು ಹೋಗುತ್ತಿದ್ದಾರೆ. ಇನ್ನು ಮುಂದೆ ಒಂದಾದ ನಂತರ ಒಂದು ಕೇಜ್‌ಗೆ ಹೋಗಲು ಅನುಕೂಲವಾಗುವ ರೀತಿಯಲ್ಲಿ ಮಾರ್ಗವನ್ನು ರೂಪಿಸಲಾಗುತ್ತಿದೆ.
ಅಷ್ಟೇ ಅಲ್ಲ ಈಗ ಖಾಲಿ ಇರುವ ಜಾಗಗಳಲ್ಲಿ ಹಸಿರು ಬೆಳೆಸುವ ಹಾಗೂ ವಿವಿಧ ಸಸ್ಯಗಳನ್ನು ನೆಡುವ ಕಾರ್ಯಕ್ಕೂ ಚಾಲನೆ ದೊರೆತಿದೆ. ಒಂದು ಮಾರ್ಗದಲ್ಲಿ ಹೊರಟರೆ ಸಂಪೂರ್ಣವಾಗಿ ಎಲ್ಲ ಕೇಜ್‌ಗಳನ್ನು ನೋಡಿಕೊಂಡು ನಿರ್ಗಮನ ಮಾರ್ಗದ ಮೂಲಕ ಹೊರಗೆ ಬರುವುದಕ್ಕೆ ಸಾಧ್ಯವಾಗಬೇಕು. ಈ ಅಂಶವನ್ನು ಗಮನದಲ್ಲಿ ಇಟ್ಟುಕೊಂಡು ಪಕ್ಕದಲ್ಲಿ ಕಂಬಿಗಳ ಅಡ್ಡಗೋಡೆ ಕಟ್ಟಲಾಗುತ್ತಿದೆ. ಇದರಿಂದ ಖಾಲಿ ಜಾಗದಲ್ಲಿ ನೆಡಲಾಗಿರುವ ಗಿಡಗಳಿಗೆ ಯಾವುದೇ ರೀತಿಯಲ್ಲಿ ಧಕ್ಕೆ ಮಾಡಲು ಅವಕಾಶ ಇರುವುದಿಲ್ಲ.
ಇನ್ನೊಂದು ವಿಶೇಷವೆಂದರೆ ಪ್ರತಿಯೊಂದು ಕೇಜ್ ಹತ್ತಿರಕ್ಕೆ ಹೋಗುವ ಮೊದಲೇ ಅದರಲ್ಲಿ ಇರುವ ವನ್ಯಜೀವಿಯ ಸಂಪೂರ್ಣ ವಿವರ ಲಭ್ಯವಾಗುವಂತೆ ಮಾಡುವುದು. ಅದಕ್ಕಾಗಿ ಖಾಸಗಿ ಸ್ವಯಂ ಸೇವಾ ಸಂಸ್ಥೆಗಳ ನೆರವಿನಿಂದ ಗುಣಮಟ್ಟದ ಫಲಕಗಳನ್ನು ಸಿದ್ಧಪಡಿಸಲಾಗುತ್ತದೆ. ಹೊಯ್ಸಳ ವೈಲ್ಡ್ ಲೈಫ್ ಕನ್ಸರ್ವೇಷನ್ ಸೊಸೈಟಿಯು ಇಂಥ ಮಾಹಿತಿ ಫಲಕಗಳನ್ನು ಸಿದ್ಧಪ ಡಿಸಿ ನೀಡಲು ಈಗಾಗಲೇ ಮುಂದೆ ಬಂದಿದೆ. ಸಚಿತ್ರವಾದ ಮಾಹಿತಿ ಫಲಕಗಳ ಮೂಲಕ ಅನಕ್ಷ ರಸ್ಥರಿಗೂ ಪ್ರಾಣಿ ಹಾಗೂ ಪಕ್ಷಿಯ ಕುರಿತು ಮಾಹಿತಿ ನೀಡಲಿವೆ.
ಹುಲ್ಲಿನ ಲಾನ್: ಉದ್ಯಾನದ ಎಲ್ಲ ಖಾಲಿ ಸ್ಥಳಗಳಲ್ಲಿ ಹುಲ್ಲಿನ ಹಾಸು ಹಾಸಲಾಗುತ್ತಿದೆ. ಹೀಗೆ ಮಾಡುವ ಮೂಲಕ ಬನ್ನೇರುಘಟ್ಟ ಉದ್ಯಾನವೆಂದರೆ ಧೂಳಿನ ಗೂಡು ಎನ್ನುವ ದೂರನ್ನೂ ಅಳಿಸಿ ಹಾಕಲಾಗುವುದು. ಉದ್ಯಾನಕ್ಕೆ ಸೇರಿದ ವಾಹನಗಳಿಗಾಗಿ ಇರುವ ಒಂದು ಟಾರ್ ರಸ್ತೆಯನ್ನು ಮಾತ್ರ ಹಾಗೆಯೇ ಉಳಿಸಲಾಗುತ್ತದೆ. ಆದರೆ ಬಾಕಿ ಎಲ್ಲ ಮಾರ್ಗಗಳನ್ನು ಮುಚ್ಚಿ ಎಲ್ಲೆಡೆ ಹಸಿರಾ ಗಿಸಲು ಒತ್ತು ನೀಡಲಾಗುವುದು.
ಈಗ ಮರಗಳ ಅಡಿಯಲ್ಲಿ ಎಲ್ಲೆಂದರಲ್ಲಿ ಇರುವ ಆಸನಗಳನ್ನು ತೆಗೆದು, ಅವುಗಳನ್ನು ಕೇವಲ ಕೇಜ್‌ಗಳ ಮಾರ್ಗದ ನಡುವೆ ಅಲ್ಲಲ್ಲಿ ಜೋಡಿಸಲಾಗುವುದು. ಹೀಗೆ ಮಾಡುವ ಮೂಲಕ ಕೇವಲ ಪ್ರೇಮಿಗಳ ಸಲ್ಲಾಪದ ಆಸನಗಳು ಮುಂದೆ ಎಲ್ಲರ ವಿರಾಮಕ್ಕೆ ಲಭ್ಯವಾಗುತ್ತವೆ. ಉದ್ಯಾನದಲ್ಲಿ ರುವ ಕಲ್ಲು ಬಂಡೆಗಳು ಹಾಗೂ ಮರಗಳ ಪಕ್ಕದಲ್ಲಿನ ಮರೆಗಳನ್ನು ಕೂಡ ಮುಚ್ಚಲಾಗುತ್ತದೆ.
ಹೀಗೆ ಮಾಡಿದ ನಂತರ ಈ ಉದ್ಯಾನವು ಪ್ರೇಮಿಗಳ ತಾಣವಾಗಿ ಉಳಿಯುವುದಿಲ್ಲ. ಕೇವಲ ವನ್ಯಜೀವಿಗಳನ್ನು ನೋಡುವ ಆಸಕ್ತಿ ಇರುವವರು ಮಾತ್ರ ಬರುವಂಥ ಜ್ಞಾನ ಕೇಂದ್ರವಾಗಲಿದೆ.
ಕೃತಕ ಜಲಪಾತ: ಉದ್ಯಾನದ ಅಕರ್ಷಣೆಯನ್ನು ಹೆಚ್ಚಿಸುವುದಕ್ಕಾಗಿ ಈಗಾಗಲೇ ಇಲ್ಲಿ ಪ್ರಕೃತಿ ಸಹಜವಾಗಿ ಲಭ್ಯವಿರುವ ಬಂಡೆಗಳ ಮೇಲಿಂದ ನೀರು ಧುಮ್ಮಿಕ್ಕಿ ಹರಿಯುವ ಜಲಪಾತ ನಿರ್ಮಾ ಣವಾಗಲಿದೆ. ಪಕ್ಕದ ಕೆರೆಯಲ್ಲಿನ ನೀರನ್ನು ಈ ಜಲಪಾತಕ್ಕಾಗಿ ಬಳಸಲಾಗುವುದು. ಜಲಪಾತಕ್ಕೆ ನಿಗದಿ ಮಾಡಿರುವ ಬಂಡೆಗಳ ಪಕ್ಕದಲ್ಲಿಯೇ ಸಾಕಷ್ಟು ಖಾಲಿ ಸ್ಥಳವಿದ್ದು ಅಲ್ಲಿ ಒಂದು ಪ್ರಕೃತಿ ಮಾಹಿತಿ ಕೇಂದ್ರ ತಲೆ ಎತ್ತಿ ನಿಲ್ಲಲಿದೆ.
ಮಾಹಿತಿ ಕೇಂದ್ರವು ಇಲ್ಲಿನ ಪ್ರಕೃತಿಗೆ ಭಂಗ ತರದ ಹಾಗೆ ಇರುತ್ತದೆ. ಅಲ್ಲಿ ಓಡಾಡಿ ಹೊರಗೆ ಬಂದರೆ ಪರಿಸರಕ್ಕೆ ಸಂಬಂಧಿಸಿದ ಹಲವಾರು ವಿಷಯಗಳ ಮಾಹಿತಿ ಪಡೆದ ಅನುಭವ ಆಗಬೇ ಕು.
ನೀರಿನ ಮರು ಬಳಕೆ: ವನ್ಯಜೀವಿಗಳ ಪಂಜರಗಳಿಂದ ಹೊರ ಬರುವ ನೀರು ಉದ್ಯಾನದ ಲಾನ್ ಹಾಗೂ ಮರಗಳಿಗೆ ಬಳಕೆಯಾಗುತ್ತದೆ. ಚಳಿಗಾಲದಲ್ಲಿ ಉದುರುವ ಮರಗಳ ಎಲೆಗಳನ್ನು ಅದೇ ಮರಗಳಿಗೆ ಪ್ರಶಸ್ತವಾದ ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ.ಇದೆಲ್ಲ ಪೂರ್ಣಗೊಂಡ ನಂತರ ಬನ್ನೇರುಘಟ್ಟವು ತನ್ನ ಈಗಿನ ಮುಖವನ್ನು ಕಳೆದುಕೊಂಡು ಹಸಿರುಟ್ಟ ಸುಂದರಿಯಾಗಿ ಅಂದ ಹೆಚ್ಚಿಸಿಕೊಳ್ಳಲಿದೆ!
ವರದಿಯ ವಿವರಗಳು |
 |
ಕೃಪೆ : ಪ್ರಜಾವಾಣಿ ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2010-03-18 00:00:00
|
|
|