ಅನಿಲ್ ಕುಂಬ್ಳೆ ‘ವೈಡ್ ಆಂಗಲ್’ ಬಿಡುಗಡೆ |
ಪ್ರಕಟಿಸಿದ ದಿನಾಂಕ : 2010-03-18
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಸೆರೆಹಿಡಿದಿರುವ ಛಾಯಾಚಿತ್ರಗಳ ಸಂಗ್ರಹ ಪುಸ್ತಕ ‘ವೈಡ್ ಆ್ಯಂಗಲ್’ನ್ನು ಆಸ್ಟ್ರೇಲಿಯಾದ ಸ್ಪಿನ್ ದಂತಕತೆ ಶೇನ್ ವಾರ್ನ್ ಬುಧವಾರ ಇಲ್ಲಿ ಬಿಡುಗಡೆ ಮಾಡಿದರು.
ಬೆಂಗಳೂರು: ಭಾರತ ತಂಡದ ಆಟಗಾರರು ಡ್ರೆಸಿಂಗ್ ಕೋಣೆಯಲ್ಲಿ ತೋರಿದ ‘ಸಾಧನೆ’ಗಳು, ಪ್ರಕೃತಿಯ ವಿಸ್ಮಯ, ವನ್ಯಜೀವಿಗಳು, ಕುಂಬ್ಳೆ ಅವರ ಅಂಗಳದ ಹೊರಗಿನ ಜೀವನ, ಅವರ ಕುಟುಂಬ ಸದಸ್ಯರ ಅಪರೂಪದ ಚಿತ್ರಗಳು ಇದರಲ್ಲಿ ಒಳಗೊಂಡಿವೆ.
‘ಅನಿಲ್ ಅವರೊಬ್ಬ ಜಂಟಲ್‌ಮನ್, ಮಾತ್ರವಲ್ಲ ಕಠಿಣ ಎದುರಾಳಿ. ಅಂಗಳದಲ್ಲಿ ಅಮೋಘ ಸಾಧನೆ ತೋರಿರುವ ಅವರು ಫೋಟೋಗ್ರಫಿ ಮೂಲಕವೂ ಸಾಧನೆ ಮೆರೆದಿದ್ದಾರೆ’ ಎಂದು ವಾರ್ನ್ ಈ ಸಂದರ್ಭ ನುಡಿದರು.

‘ಭಾರತ ಅಂಡರ್-17 ತಂಡದ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ಶ್ರೀನಗರಕ್ಕೆ ತೆರಳುವ ಸಂದರ್ಭ ನಾನು ಸಹೋದರನ ಸಲಹೆಯಂತೆ ಮೊದಲ ಸಲ ಕ್ಯಾಮರಾ ಕೈಯಲ್ಲಿ ಹಿಡಿದೆ. ಆ ಬಳಿಕ ಅದೊಂದು ಹವ್ಯಾಸವಾಗಿ ಬದಲಾಯಿತು. ಸುದೀರ್ಘ ಕ್ರಿಕೆಟ್ ಜೀವನದಲ್ಲಿ ಕಂಡುಬಂದ ಅಪರೂಪದ, ಚಾರಿತ್ರಿಕ ಕ್ಷಣಗಳನ್ನು ಈ ಪುಸ್ತಕದಲ್ಲಿ ನೋಡಬಹುದು’ ಎಂದು ಕುಂಬ್ಳೆ ನುಡಿದರು. ಸಚಿನ್ ತೆಂಡೂಲ್ಕರ್ ಅವರು ಮುನ್ನುಡಿ ಬರೆದಿರುವ ಈ ಪುಸ್ತಕದ ಮುಖಬೆಲೆ ರೂ. 5,900.
ಇದು http://wideangle.canvera.com ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು ಆಸಕ್ತರು ನೋಡಬಹುದಾಗಿದೆ

ಅನಿಲ್ ಕೊಂಡಾಡಿದ ವಾರ್ನ್
ಬೆಂಗಳೂರು: ಕ್ರಿಕೆಟ್ ಅಂಗಣದಲ್ಲಿ ಸದಾ ಸಿಟ್ಟಿನಿಂದ ಹೋರಾಟ ನಡೆಸುವ ಸ್ಪಿನ್ ಮಾಂತ್ರಿಕರಿ ಬ್ಬರು ಅಂಗಣದ ಹೊರಗಡೆ ಒಂದಾದರೆ ಹೇಗಿರುತ್ತಾರೆ? ಎಂಬುದಕ್ಕೆ ಬುಧವಾರ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಅವರ ಕೃತಿ ಬಿಡುಗಡೆ ಕಾರ್ಯಕ್ರಮ ಸಾಕ್ಷಿ ಯಾಗಿತ್ತು.
ಕುಂಬ್ಳೆ ಅವರು ೨೦ ವರ್ಷಗಳ ಕ್ರಿಕೆಟ್ ಬದುಕಿನಲ್ಲಿ ಸೆರೆ ಹಿಡಿದ ವಿಭಿನ್ನ ಛಾಯಾ ಚಿತ್ರಗಳ ಸಂಗ್ರಹ ವೈಡ್ ಆಯಂಗಲ್ ಕೃತಿಯನ್ನು ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ, ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಬುಧವಾರ ಬಿಡುಗಡೆ ಮಾಡಿದರು. ಕೃತಿಯನ್ನು ಬಿಡುಗಡೆ ಮಾಡಿದ ನಂತರ ಮಾತನಾಡಿದ ಶೇನ್‌ವಾರ್ನ್, ಕ್ರಿಕೆಟ್ ಅಂಗಣದಲ್ಲಿ ಅನಿಲ್ ಎಷ್ಟೇ ಕಟ್ಟುನಿಟ್ಟಾಗಿದ್ದರೂ ಅವರು ಹೃದಯವೈಶಾಲ್ಯವುಳ್ಳವರು. ಸಭ್ಯರು. ೨೦ ವರ್ಷಗಳ ಕ್ರಿಕೆಟ್ ಬದುಕಿನಲ್ಲಿ ಕ್ರಿಕೆಟಿಗ ನೊಬ್ಬ ಏನೆಲ್ಲ ಸಾಧಿಸಬಹುದು ಎಂಬುದನ್ನು ಜಗತ್ತಿಗೆ ತೋರಿಸಿದ್ದಾರೆ ಎಂದರು.
ಕುಂಬ್ಳೆ ಅವರಿಗೆ ಚೆಂಡನ್ನು ಸ್ಪಿನ್ ಮಾಡಲು ಬರುವುದಿಲ್ಲ ಎಂದವರಿದ್ದಾರೆ, ಅವರಿಗೆ ಲೆಗ್ ಸ್ಪಿನ್ ಮಾಡಲು ಅಸಾಧ್ಯ ಎಂದವರಿದ್ದಾರೆ. ಆದರೆ ಕ್ರಿಕೆಟ್ ಅಂಗಣದಲ್ಲಿ ಅನಿಲ್ ಅದನ್ನು ಸಾಧ್ಯವಾಗಿಸಿ ತೋರಿಸಿದ್ದಾರೆ ಎಂದರು.ಭಾರತದ ಕ್ರಿಕೆಟ್‌ನಲ್ಲಿ ಸಹಸ್ರಾರು ಮಂದಿ ಯುವ ಕ್ರಿಕೆಟಿಗರಿಗೆ ಅನಿಲ್ ಮಾದರಿ ಇದ್ದಂತೆ. ಕೇವಲ ಸಾಧನೆ ಮಾಡಿದ ಕಾರಣಕ್ಕೆ ಅನಿಲ್ ಮಾದರಿಯಾಗಿಲ್ಲ, ಅವರಲ್ಲಿ ಆಟದ ಬಗ್ಗೆ ಇರುವ ಪ್ರೀತಿ ಹಾಗೂ ಕಾಳಜಿ ಅಪಾರ ಅಭಿಮಾನಿಗಳನ್ನು ಸೃಷ್ಟಿಸಿದೆ ಎಂದು ಆಸೀಸ್ ಕ್ರಿಕೆಟ್ ದಿಗ್ಗಜ ವಾರ್ನ್ ಹೇಳಿದ್ದಾರೆ.

ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-18 00:00:00
|
|
|