| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಪರಮಾಣು ಬಾಧ್ಯತಾ ಮಸೂದೆ: ವಿಪಕ್ಷಗಳಿಗೆ ಸರಕಾರದಿಂದ ಮಾತುಕತೆಯ ಆಹ್ವಾನ |
ಪ್ರಕಟಿಸಿದ ದಿನಾಂಕ : 2010-03-18
ಹೊಸದಿಲ್ಲಿ, ಮಾ.೧೭: ಪರಮಾಣು ಬಾಧ್ಯತಾ ಮಸೂದೆಯ ಕುರಿತಾಗಿ ಸಂಪೂರ್ಣ ವಿಪಕ್ಷದ ವಾಗ್ದಾಳಿಗೆ ಗುರಿಯಾಗಿರುವ ಕೇಂದ್ರದ ಯುಪಿಎ ಸರಕಾರಗ, ಎಲ್ಲ ವಿಚಾರಗಳ ಕುರಿತು ಮಾತುಕತೆಯ ಆಹ್ವಾನ ನೀಡಿದೆ. ಪರಿಹಾರ ಮೊತ್ತ ಏರಿಕೆ ಸಹಿತ ಎಲ್ಲ ವಿಚಾರಗಳನ್ನು ‘ತಣ್ಣಗೆ ಕುಳಿತು’ ಚರ್ಚಿಸೋಣವೆಂದು ಸರಕಾರವಿಂದು ವಿಪಕ್ಷಗಳಿಗೆ ಹೇಳಿದೆ.
ಇದೇ ವೇಳೆ, ಪರಮಾಣು ವಲಯವನ್ನು ವಿದೇಶಿ ಹೂಡಿಕೆದಾರರಿಗೆ ಮುಕ್ತಗೊಳಿಸುವ ಯಾವುದೇ ಯೋಜನೆಯನ್ನು ಸರಕಾರ ಹೊಂದಿಲ್ಲವೆಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಪೃಥ್ವೀರಾಜ ಚೌಹಾಣ್ ಸ್ಪಷ್ಟಪಡಿಸಿದ್ದಾರೆ.
“ಕೆಲವು ರಾಜಕೀಯ ಪಕ್ಷಗಳು ಭಾರೀ ಭಯವನ್ನು ಹುಟ್ಟಿಸುತ್ತಿವೆ. ಮುಖ್ಯವಾಗಿ ಎಡ ಪಕ್ಷಗಳ ಮಿತ್ರರು ಇದನ್ನು ಮಾಡುತ್ತಿದ್ದಾರೆ. ವಿದೇಶಿ ಭಾಗಿದಾರಿಕೆಯ ಯಾವುದೇ ವಿಷಯ ಪ್ರಸ್ತಾಪವಾದೊಡನೆಯೇ ಅವರು ಕೆಂಪು ಬಾವುಟ ತೋರಿಸುತ್ತಾರೆ. ಈ ವಿಷಯವನ್ನು ಸಂಸತ್ತಿನಲ್ಲಾಗಲಿ, ಸ್ಥಾಯಿ ಸಮಿತಿಯಲ್ಲಾಗಲಿ ಉದ್ವೇಗ ರಹಿತವಾಗಿ ಚರ್ಚಿಸಬಹುದೆಂಬುದು ನನ್ನ ಅಭಿಪ್ರಾಯವಾಗಿದೆ. ಅಥವಾ ವೈಯಕ್ತಿಕ ಮಾತುಕತೆಗೂ ನಾವು ಸಿದ್ಧರಿದ್ದೇವೆ” ಎಂದವರು ಅಸೋಚಾಮ್‌ನ ಸಮ್ಮೇಳನವೊಂದರಲ್ಲಿ ಹೇಳಿದ್ದಾರೆ.
ಆದಾಗ್ಯೂ, ವಿಪಕ್ಷಗಳು ಇದನ್ನೊಂದು ರಾಜಕೀಯ ವಿಚಾರವಾಗಿ ಪರಿಗಣಿಸುತ್ತಿವೆಯಾದರೆ, ತಾವಿದನ್ನು ಮುಂದುವರಿಸಲೇ ಬೇಕಾಗುತ್ತದೆ ಎಂದು ಚೌಹಾಣ್ ನುಡಿದಿದ್ದಾರೆ.
ಪರಮಾಣು ಘಟಕಗಳ ಕಾರ್ಯವಾಹಿಗಳು ನೀಡಬೇಕಾದ ಪರಿಹಾರ ಹೆಚ್ಚಿಸಬೇಕೆಂಬ ಬೇಡಿಕೆಯ ಕುರಿತು ಪ್ರತಿಕ್ರಯಿಸಿದ ಅವರು, “ಎಲ್ಲ ಸಮಸ್ಯೆಗಳ ಬಗ್ಗೆ ಯಾವುದೇ ವೇದಿಕೆಯಾಗಲ್ಲಾಗಲಿ ಅಥವಾ ವೈಯಕ್ತಿಕವಾಗಿಯಾಗಲಿ ಚರ್ಚೆ ನಡೆಸಬಹುದು. ನಾವು ಎಲ್ಲಿಂದಲಾದರೂ ಆರಂಭಿಸೋಣ. ಅಡ್ಡಿಪಡಿಸುವುದು ಬೇಡ ಎಂದಿದ್ದಾರೆ.
ಅಮೆರಿಕದ ಸಂಸ್ಥೆಗಳು ಭಾರತದಲ್ಲಿ ಪರಮಾಣು ಸ್ಥಾವರ ಸ್ಥಾಪಿಸುವ ಪ್ರಶ್ನೆಯೇ ಇಲ್ಲ. ಏಕೆಂದರೆ ಅದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಚೌಹಾಣ್ ಸ್ಪಪ್ಟಪಡಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-18 00:00:00
|
|
|
|
|