ಮು೦ಬೈ: ಸಂಭ್ರಮದ ಗುಡಿಪಾಡ್ವಾ |
ಪ್ರಕಟಿಸಿದ ದಿನಾಂಕ : 2010-03-17
(ಚಿತ್ರ ವರದಿ-ರೋನ್ಸ್ ಬ೦ಟ್ವಾಳ್)
ಮುಂಬಯಿ, ಮಾ.೧೬: ಚೈತ್ರಮಾಸ ಮತ್ತು ನೂತನ ವರ್ಷದ ಮೊದಲ ದಿನವಾದ ಇಂದು ಮಹಾರಾಷ್ಟ್ರದಲ್ಲಿ ಸಾಂಪ್ರದಾಯಿಕವಾಗಿ `ಗುಡಿಪಾಡ್ವಾ' ಆಚರಿಸಲಾಯಿತು. ವಾಣಿಜ್ಯ ನಗರಿ ಮುಂಬಯಿಯಲ್ಲಿ ಜನರು ಸಡಗರ, ಸಂಭ್ರಮದಿಂದ ಗುಡಿಪಾಡ್ವಾ ಆಚರಿಸಿದರು.

ಹಿಂದೂ ಪಂಚಾಂಗದಲ್ಲಿ ಶುಭದಾಯಕವಾದ ಮೂರು ಮತ್ತು ಅರ್ಧ (ಮೂರೂವರೆ ಮುಹೂರ್ತ)ದಿನಗಳಲ್ಲಿ ಈ ದಿನ ಕೂಡಾ ಒಂದಾಗಿದ್ದು, ಹೊಸ ವ್ಯವಹಾರ ಪ್ರಾರಂಭಿಸಲು ಅತ್ಯಂತ ಶುಭ ದಾಯಕವೆಂದು ಪರಿಗಣಿಸಲಾಗಿದೆ.

ದಿನಾವಶ್ಯಕ ಸಾಮಗ್ರಿಗಳ ಬೆಲೆ ಗಗನಕ್ಕೇರಿದ್ದರೂ ಜನರಲ್ಲಿ ಹಬ್ಬದ ಉತ್ಸಾಹ ಕುಗ್ಗಿದಂತೆ ಕಂಡು ಬಂದಿಲ್ಲ. ಗೃಹೋಪಯೋಗಿ, ದ್ವಿಚಕ್ರವಾಹನ, ಕಾರು, ಚಿನ್ನ ಮತ್ತು ಬೆಳ್ಳಿ ಆಭರಣ ಖರೀದಿ ಸುವುದು ಕಂಡು ಬಂದಿದೆ.

ಮಹಾರಾಷ್ಟ್ರೀಯನ್ನರ ಮನೆಗಳ ಹೊರಗೆ ನೀಲಿ ಮತ್ತು ಹಳದಿ ಬಣ್ಣದ ಜರಿಬಟ್ಟೆಯನ್ನು ಉದ್ದದ ಬಿದಿರ ಕೋಲಿನ ತುದಿಗೆ ಸಿಲುಕಿಸಿ, ಮೇಲೆ ತಾಮ್ರದ ತಂಬಿಗೆ ಮುಚ್ಚಿ ಹೂಗಳಿಂದ ಅಲಂಕರಿಸಿದ `ಗುಡಿ' ರಾರಾಜಿಸುತ್ತಿತ್ತು. ಸಂಪ್ರದಾಯಸ್ಥರು ಮನೆ ಪ್ರವೇಶ ದ್ವಾರವನ್ನು ತೋರಣಗಳಿಂದ ಅಲಂಕರಿಸಿ, ಹೊಸ್ತಿಲಿನ ಮುಂದೆ ಆಕರ್ಷಕವಾದ ರಂಗೋಲಿ ಹಾಕಿದ್ದರು. ಮಧ್ಯಾಹ್ನ ಭೋಜನ ಕ್ಕಾಗಿ ಹೋಳಿಗೆ, ಶ್ರೀಖಂಡ ಪುರಿ ಮತ್ತು ಇತರ ಸಾದ್ವಭರಿತ ತಿನಸುಗಳನ್ನು ಸಿದ್ಧಪಡಿಸಿದ್ದರು.

ನಾಸಿಕ್ ವರದಿ : ನಗರದಲ್ಲಿ ಸಾರ್ವಜನಿಕರು ಗುಡಿಪಾಡ್ವಾವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಇಲ್ಲಿನ ಇತಿಹಾಸ ಪ್ರಸಿದ್ಧ ಪಂಚವಟಿಯ ಕಾಳಾರಾಮ ಮಂದಿರದಲ್ಲಿ ಸಹಸ್ರಾರು ಭಕ್ತರು ಪೂಜೆ, ಪ್ರಾರ್ಥನೆ ಸಲ್ಲಿಸಿದರು. ವನವಾಸ ಮುಗಿಸಿ ಅಯ್ಯೋಧೆಗೆ ಚೈತ್ರಮಾಸದ ಮೊದಲ ದಿನ ಮರಳಿದಾಗ ಶ್ರೀರಾಮಚಂದ್ರನಿಗೆ ಜನರು ಗುಡಿಗಳೊಂದಿಗೆ ಸ್ವಾಗತ ಕೋರಿದ್ದರು.




ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-17 00:00:00
|
|
|