ಪೆರ್ಲ: ತುಳು ಸಮಗ್ರ ಅಭಿವೃದ್ಧಿಗೆ ಯೋಜನೆ : ಕುಂಞಂಬು |
ಪ್ರಕಟಿಸಿದ ದಿನಾಂಕ : 2010-03-16
ಪೆರ್ಲ, ಮಾ. ೧೫: ತುಳು ಅಕಾಡೆಮಿಗೆ ಸರಕಾರ ಈಗಾಗಲೇ ೨೦ ಲಕ್ಷ ರೂ. ನೀಡಿದೆ. ಪ್ರಸ್ತುತ ವರ್ಷ ಮಂಡನೆಯಾದ ಮುಂಗಡ ಪತ್ರದಲ್ಲಿ ೧೦ ಲಕ್ಷ ರೂ. ಮೀಸಲಿರಿಸಲಾಗಿದೆ. ತುಳುವಿನ ಸಮಗ್ರ ಅಭಿವೃದ್ಧಿಗೆ ಸರಕಾರ ವಿವಿಧ ಯೋಜನೆಗಳನ್ನು ರೂಪಿಸಿದೆ ಎಂದು ಶಾಸಕ ಸಿ.ಎಚ್. ಕುಂಞಂಬು ಅವರು ನುಡಿದರು.
ಅವರು ಕಾಟುಕುಕ್ಕೆ ಎಯುಪಿ ಶಾಲೆಯಲ್ಲಿ `ಮಾಯಿದ ಪರ್ಬ' ಸಾಂಸ್ಕೃತಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಈಗಾಗಲೇ ಪೈವಳಿಕೆ ಪಂಚಾಯತ್‌ನಲ್ಲಿ ತುಳು ಉತ್ಸವ ನಡೆಸಲು ನಿರ್ಧರಿಸಲಾಗಿದೆ. ಮುಂಬೈಯಲ್ಲಿ ವಿಶಿಷ್ಟ ರೀತಿಯಲ್ಲಿ ತುಳು ಕಾರ್ಯಕ್ರಮ ಆಯೋಜಿ ಸಲಾಗುವುದು. ಡಾ| ವೆಂಕಟರಾಜಜ ಪುಣಿಂಚತ್ತಾಯರು ಸಂಪಾದಿಸಿದ ತುಳು `ಕರ್ಣಪರ್ವ' ಗ್ರಂಥವನ್ನು ಪ್ರಕಟಿ ಸಲಾಗುವುದು. ಮುಜುಂಗಾವಿನಲ್ಲಿ ಪಾರ್ತಿಸುಬ್ಬ ಕಲಾಕ್ಷೇತ್ರದ ಶಿಲಾನ್ಯಾಸ ವನ್ನು ಮಾ. ೨೭ರಂದು ರಾಜ್ಯ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ನೆರವೇರಿಸುವರು ಎಂದು ಶಾಸಕರು ತಿಳಿಸಿದರು.
ತುಳು ಅಕಾಡೆಮಿ ಅಧ್ಯಕ್ಷ ಡಾ| ಪಿ. ವೆಂಕಟರಾಜ ಪುಣಿಂಚತ್ತಾಯ ಅಧ್ಯಕ್ಷತೆ ವಹಿಸಿದ್ದು ಮೂಡಬಿ ದಿರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕ ಟಿ.ಎ.ಎಸ್ ಖಂಡಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ವೈದಿಕ ಸಂಸ್ಕೃತಿ ಮತ್ತು ತುಳು ಸಂಸ್ಕೃತಿಗೆ ಭಿನ್ನತೆಯಿದೆ. ತುಳುವರಲ್ಲಿ ಮೂರ್ತಿ ಪೂಜೆ ಇಲ್ಲ, ಅವರು ಪ್ರಕೃತಿಯ ಆರಾಧಕರು. ಭೂಮಿಯನ್ನು ತಾಯಿಯಾಗಿ ಕಾಣುವ ಪರಿಕಲ್ಪನೆ ಅವರದ್ದು. ತುಳುವರ ಕಾಲಗಣನೆ ವೈದಿಕ ಸಂಸ್ಕೃತಿಯಿಂದ ಭಿನ್ನವಾಗಿದೆ. ತುಳುವರೆ ಸೂರ್ಯನ ಚಲನೆ ನೋಡಿ ಕಾಲಗಣನೆ ಮಾಡಿದವರು. ತುಳುವರಲ್ಲಿ ಪುನರ್ಜನ್ಮದ, ನರಕ-ಸ್ವರ್ಗದ ಕಲ್ಪನೆಯಿಲ್ಲ ಎಂದು ಹೇಳಿದ ಅವರು ಕೆಡ್ಡಸದ ಮಹತ್ವದ ಬಗ್ಗೆ ಮಾತನಾಡಿದರು.
ಲಿಖಿತ ಸಾಹಿತ್ಯದ ಬಗ್ಗೆ ಅಕಾಡೆಮಿ ಇನ್ನಷ್ಟು ಗಮನ ಹರಿಸಬೇಕು ಎಂದು ಸಾಹಿತಿ ಹಾಗೂ ಉಪ ನ್ಯಾಸಕ ಟಿ.ಎ.ಎನ್. ಖಂಡಿಗೆ ಸಲಹೆಯಿತ್ತರು. ಮಾಜಿ ನಗರಸಭಾ ಅಧ್ಯಕ್ಷ ಎಸ್.ಜೆ. ಪ್ರಸಾದ್ ಬಹುಮಾನ ವಿತರಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸಿ. ಸಂಜೀವ ರೈ, ಕಾಟುಕುಕ್ಕೆ ಸುಬ್ರಾಯ ದೇವಾಲಯದ ಆಡಳಿತ ಮೊಕ್ತೇಸರ ಸಚ್ಚಿದಾನಂದ ಖಂಡೇರಿ, ಎಣ್ಮಕಜೆ ಗ್ರಾ.ಪಂ. ಸದಸ್ಯ ಬಟ್ಟು ಶೆಟ್ಟಿ ಕಾಟು ಕುಕ್ಕೆ, ಶಾಲಾ ವ್ಯವಸ್ಥಾಪಕ ಕೃಷ್ಣ ಭಟ್ ಕುಂಚಿನಡ್ಕ, ಮುಖ್ಯೋಪಾಧ್ಯಾಯಿನಿ ವೆಂಕಟೇಶ್ವರಿ, ತುಳು ಅಕಾಡೆಮಿ ಸದಸ್ಯರಾದ ಸುಧಾಕರ ಮಾಸ್ತರ್, ಅದಿತಿ ಶುಭ ಹಾರೈಸಿದರು. ಅಕಾಡೆಮಿಯ ಸದಸ್ಯರಾದ ಉಮೇಶ್ ಸಾಲ್ಯಾನ್, ರಾಧಾಕೃಷ್ಣ ಕೆ. ಉಳಿಯತ್ತಡ್ಕ, ರಾಜೇಶ್ ಆಳ್ವ ಬದಿಯಡ್ಕ, ನ್ಯಾಯವಾದಿ ಸ್ವರ್ಣಲತಾ, ಗೀತಾ ಸಾಮಾನಿ ಮೊದಲಾದವರು ಉಪಸ್ಥಿತರಿದ್ದರು.
ಬೆಳಗ್ಗೆ ನಡೆದ ವಿವಿಧ ಸ್ಪರ್ಧೆಗಳನ್ನು ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಡಿ. ಸುನೀತ್ ಕುಮಾರ್ ಉದ್ಘಾಟಿಸಿದರು. ಸಭಾ ಕಾರ್ಯಕ್ರಮ ದಲ್ಲಿ ಶ್ರೀಧರ ಮಣಿಯಾಣಿ ಸ್ವಾಗತಿಸಿ ದರು. ಗೋಪಾಲ ಮಾಸ್ತರ್ ಪ್ರಾಸ್ತಾವಿಕ ಮಾತನಾಡಿದರು. ಶಿವರಾಮ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು. ಅಕಾ ಡೆಮಿ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿಗಾರ್ ವಂದಿಸಿದರು.
ಕೇರಳ ತುಳು ಅಕಾಡೆಮಿ, ಕಾಟುಕುಕ್ಕೆ ರಂಗ ಸಂಗಮ, ದೇಶಾಭಿಮಾನಿ ಆರ್ಟ್ಸ್ ಮತ್ತು ಸ್ಪೋ ರ್ಟ್ಸ್ ಕ್ಲಬ್ ಬಾಳೆಮೂಲೆ ಸಂಘಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ `ಬಂಗಾರ್ ಕಂಡನಿ' ತುಳು ಹಾಸ್ಯನಾಟಕ ನಡೆಯಿತು.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-16 00:00:00
|
|
|