ಓದುಗರೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು |
ಪ್ರಕಟಿಸಿದ ದಿನಾಂಕ : 2010-03-16
ಚೈತ್ರ-ವೈಶಾಖಗಳೊಡೆಯನಾದ ಋತುಗಳ ರಾಜ ವಸಂತನು ಇಳೆಗಿಳಿಯುವ ವೇಳೆ ತನ್ನೊಂ ದಿಗೆ ಹೊಸ ಹೊಸ ಹೆಸರಿನ ಸಂವತ್ಸರಾಧಿಪತಿಯನ್ನೂ ಕರೆಯುತ್ತಾನೆ. ಒಂದು ವರುಷದ ಸೀಮಿತ ಕಾಲಾವಧಿಯ ಆಡಳಿತದ ಗದ್ದುಗೆ ಏರಿ ಪಟ್ಟಾಭಿಷೇಕ ನಡೆಸುವ ದಿನವೇ ಯುಗಾದಿ.
ರಾಜ್ಯಾಭಿಷೇಕ, ಕಿರೀಟ ಧಾರಣೆಯ ಸಂಭ್ರಮ. ಎಲ್ಲೆಡೆಯೂ ಸಡಗರದ ವಾತಾವರಣ. ವಿರೋಧಿ ಯೇ ಇರಲಿ, ವಿಕೃತಿಯೇ ಇರಲಿ, ಏನೇ ಹೆಸರಿರಲಿ. ಕಾಲದರಸನ ಹೆಸರು ಹೇಗಿದ್ದರೇನು? ಏನಿದ್ದರೇನು? ಒಂದು ವರುಷದ ಅವಧಿಯ ನಿನ್ನ ಆಡಳಿತ ಸುಭಿಕ್ಷವಾಗಿರಲಿ ಎಂಬ ಹಾರೈಕೆಗನು ಗುಣವಾಗಿ ಸಂಭ್ರಮ, ವೈಭವ, ಪೂಜೆ, ಪುನಸ್ಕಾರ, ಎಲ್ಲವೂ ಹೊಸತು-ಎಲ್ಲೆಲ್ಲೂ ಹೊಸತು. ಹೊಸತನ ಬದುಕಿನ ಅವಿಭಾಜ್ಯ ಅಂಗ. ಹಳತರಲ್ಲೂ ಹೊಸತು-ಹೊಸತರಲ್ಲೂ ಹೊಸತು. ಅದಕ್ಕಾಗಿಯೇ ಕವಿ `ಹೊಸ ವರುಷಕೆ ಹೊಸ ಹರುಷದ ಹೊಸತು ಹೊಸತು ತರುತಿದೆ' ಎಂದು ಹಾಡಿದ್ದಾನೆ-ಕುಣಿದಿದ್ದಾನೆ-ಕುಣಿಸಿದ್ದಾನೆ.
ಈ ಯುಗಾದಿ ಹಬ್ಬವೇ ಹೀಗೆ. ನೂತನ ನಾಮಧೇಯದೊಂದಿಗೆ ಪ್ರತೀ ವರ್ಷ ಮೇಷ ಮಾಸದ ಹಿಂದಿನ ಅಮಾವಾಸ್ಯೆಯ ಪಾಡ್ಯದಂದು ಹಾಜರಾಗಿ ಮನೆಯ ಕದ ತಟ್ಟುತ್ತದೆ. ಒಂದು ವರ್ಷಗಳ ಕಾಲ ಎಲ್ಲರೊಳಗೊಂದಾಗಿ ಬೆರೆತು ಆಡಿ, ಪಾಡಿ, ಕಾಡಿ, ಉಂಡು, ತಿಂದು, ನೊಂದು, ಬೆಂದು, ಸುಖ-ಕಷ್ಟಗಳ ಬೆರಸಿ ಕಲಸಿ ಸುರಿಸಿ, ಬಾಳಿಸಿ, ಗೋಳಾಡಿಸಿ ಬಂದಷ್ಟೇ ಶೀಘ್ರವಾಗಿ ಕಣ್ಮರೆಯಾ ಗುತ್ತದೆ. ತಾನು ಬರುವಾಗ ಹೊಸತನವಿರಬೇಕು ಎಂದು ಬಯಸುವ ಈ ಸಂವತ್ಸರಾಧಿಪತಿಯ ಅಪೇಕ್ಷೆಗನುಗುಣವಾಗಿ ನೂತನ ಬಾಗಿಲು ತೆರೆಯಲು ಎಲ್ಲರೂ ಉತ್ಸುಕ ರಾಗಿರುತ್ತಾರೆ-ಎಲ್ಲವೂ ಸಜ್ಜಾಗಿರುತ್ತದೆ. ಪ್ರಕೃತಿಯೇ ಸನ್ನದ್ಧವಾದ ಮೇಲೆ ಅನ್ಯರ ಪಾಡೇನು?
ಮಾಘ-ಪಾಲ್ಗುಣದಲ್ಲಿ ಎಲೆಯನ್ನುದುರಿಸಿಕೊಂಡು ಬೋಳು ಬೋಳಾದ ವೃಕ್ಷಗಳು ಪುನಃ ಹೊಚ್ಚ ಹೊಸ ಚಿಗುರೊಡೆದು ಹಸಿರಿನಿಂದ ತುಂಬಿ ನಳನಳಿಸಿದರೆ, ಅದರೊಂದಿಗೆ ತೂಗಿ ತೊನೆವ ಗೊಂಚಲು ಗೊಂಚಲು ಕಾಯಿಗಳು ಕಳಿತ ಹಣ್ಣಾಗಿ ಪರಿಮಳ ಬೀರುತ್ತಾ `ಹೊಸ ಫಲ ನಾನು' ಸಮರ್ಪಿಸು ನನ್ನ ದೇವರಿಗೆ' ಎಂದು ಕೈಮುಗಿಯುವಂತಿರುತ್ತವೆ.
ವಿವಿಧ ವರ್ಗದ ತರಕಾರಿ, ಹಣ್ಣುಗಳು, ನೂರಾರು ಜಾತಿಯ ಮಾವು-ಗೇರು, ಒಬ್ಬನಿಂದ ಎತ್ತ ಲಾಗದ ಹಲಸು, ಘಮ ಘಮಿಸುವ ಅನಾನಸು, ವಿದ್ಯುದ್ದೀಪದಂತೆ ಪಳಪಳನೆ ಹೊಳೆವ ಕಿತ್ತಳೆ, ಚಕ್ಕೋತ, ತುಂಟ ಹಕ್ಕಿಗಳ ಜತೆ ಹುಡುಗರನ್ನೂ ಸೆಳೆವ ಪೇರಳೆ-ನೇರಳೆ, ಒಂದೇ ಎರಡೇ... ನೂರಾರು, ಸಾವಿರಾರು. ರಾಶಿ ರಾಶಿ ಹಣ್ಣುಗಳು, ಅತ್ತಲೇ ನೋಟ ಬೀರುವ ಆಸೆಯ ಕಣ್ಣುಗಳು! ಪ್ರಕೃತಿ ಮಾತೆಯು ಶೃಂಗರಿಸಿಕೊಂಡರೆ ಮಾನವನಿಗೆ ಸುಭಿಕ್ಷೆ-ಸಂತೋಷ. ಮನೆಯ ದೇವರ ಮುಂದೆ ಮಾತೆಯ ಮಡಿಲಿನ ಮಕ್ಕಳಿಗೆ ಆರಾಧನೆ.
ಸಾಲಾಗಿ ಜೋಡಿಸಿಡುವ ಹಣ್ಣು, ತರಕಾರಿ, ಕಾಯಿ-ತೆಂಗಿನಕಾಯಿ, ಸಿಯಾಳ, ವಿವಿಧ ಫಲ, ಯುಗಾದಿಯ ಮುಂಜಾನೆ ಎದ್ದು ಹೊಸದನ್ನೇ ನೋಡಬೇಕು. ಎಂತಹ ತವಕ? ವರ್ಷವಿಡಿ ಹೊಸದಾಗಿರಲಿ, ಬೇಡ ಹಳೆಯ ನೆನಪು. ಹಳೆಯ ಗೂಟದ ಬುಡದಿ ಹೊಸ ಚಿಗುರು ಮೂಡಿದರೆ? ಹಳತರಲ್ಲಿ ಹೊಸತು! ಇದೇ ಯುಗಾದಿಯ ಅಂತಃಸತ್ವ-ಸಿಂತಃ ಸತ್ಯ.
ಯುಗಾದಿಯ ದಿನ ಬೇವು-ಬೆಲ್ಲ ಮೆಲ್ಲಬೇಕಂತೆ. ಕಷ್ಟವು ಕಹಿ, ಸುಖವು ಸಿಹಿ. ಕಷ್ಟದ ಒಗರು ಮರೆ ಯಲು ಸವಿಯ ಸ್ವೀಕಾರ. ಏಕೆಂದರೆ ಇವೆರಡೂ ಬಾಳಲ್ಲಿ ನಿರಂತರ-ಒಂದೇ ನಾಣ್ಯದ ಎರಡು ಮುಖಗಳು. ದುಃಖ ದುಮ್ಮಾನಗಳು ಬೇಡ ಬೇಡವೆಂದರೂ ಬರುತ್ತಲೇ ಇರುತ್ತವೆ. ಸುಖ-ಸಂತೋಷಗಳು ಬೇಕು ಬೇಕೆಂದು ಹಾತೊರೆದರೂ ಬರಲಾರದೇ ಇರಬಹುದು. ಎಲ್ಲವೂ ಭಗವಂತನ ಲೀಲೆಗೆ ಮೀಸಲು. ಹಾಗೆಂದು ಕಹಿಯನ್ನು ಮರೆಯಲು ಸಿಹಿಯ ಲೇಪ-ಸಿಹಿಯಲ್ಲೇ ಮೈಮರೆಯದಿರೆಂದು ಕಹಿಯ ಶಾಪ! ಇದು ಯುಗಾದಿಯ ವಿರಾಟ್ ಸ್ವರೂಪ. ಎಂತಹ ಮರ್ಮ-ಬಾಳಿನ ಧರ್ಮ. ಸುಖ ದುಃಖೇ ಸಮಕೃತ್ವಾ ಲಾಭಾ ಲಾಭೌ ಜಯಾ ಜಯೌ!
ಯುಗಾದಿಯ ದಿನದ ಭೋಜನದಲ್ಲೂ ವಿಶೇಷ. ಪರಮಾನ್ನಕ್ಕೆ ಗೇರುಬೀಜ ಹಾಕಲೇಬೇಕು. ಎಲ್ಲ ತರಕಾರಿಗಳ ವಿವಿಧ ರೀತಿಯ ಪಲ್ಯ ಮೇಲೋಗರಗಳು, ಹಣ್ಣುಗಳು, ರಸಾಯನ, ಎಳತೆಳತು ಹಲಸಿನೆಲೆಯನ್ನು ಕಟ್ಟಿ ಮಾಡಿದ ಪರಿಮಳ ಬೀರುವ ಗುಂಡ, ಒಂದೇ ಎರಡೇ! ಊಟ ಮಾಡಿದ ಅನಂತರ ಮಲಗಿ ಗಡದ್ದಾಗಿ ನಿದ್ರಿಸಬಾರದಂತೆ. ಅದಕ್ಕಾಗಿ ಪಂಚಾಂಗ ಶ್ರವಣ. ಮುಂದಿನ್ನೊಂ ದು ವರುಷದ ಶುಭ -ಅಶುಭಗಳ ಸೈದ್ಧಾಂತಿಕ ಅಧ್ಯಯನದ ತುಲನ-ಮಾಪನ.
ಎಲ್ಲರೂ ಒಂದೆಡೆ ಸೇರಿ ನಡೆಸುವ ಈ `ಪಂಚಾಂಗ ಶ್ರವಣದಿಂದ ಒಳಿತು-ಕೆಡುಕು ಎರಡನ್ನೂ ಹಂಚಿಕೊಂಡು ಬದುಕೋಣ ಎಂಬ ಸಂದೇಶದ ಆವಾಹನೆಗೆ ನಾಂದಿ ಹಾಡುವ ಯತ್ನ-ಸೌಹಾ ರ್ದತೆಯ ಪ್ರಯತ್ನ. ಹಳೆಯ ಪಂಚಾಂಗವನ್ನು ತೆಗೆದಿರಿಸಿ ಹೊಸ ವರುಷದ ಪಂಚಾಂಗವನ್ನು ತೆರೆದು ಪಠಿಸುತ್ತಾ ಹೊಸ ಸಂವತ್ಸರಾಧಿಪತಿಯ ವರ್ಣನೆ ಬಣ್ಣನೆ ನಡೆಸಿ ಮುಂದಿನ ದಿನಗಳಿಗೆ ಸಜ್ಜುಗೊಳಿಸುವ -ಸನ್ನದ್ಧರಾಗಿಸುವ ಈ ಪದ್ಧತಿ-ಕಟ್ಟುಪಾಡುಗಳು ಎಷ್ಟು ಅರ್ಥಪೂರ್ಣ. ಎಂತಹ ಸಿದ್ಧತೆ-ಕಟಿಬದ್ಧತೆ-ಸನ್ನದ್ಧತೆ!
ಈ ಯುಗಾದಿಗಳೇ ಹೀಗೆ. ಹೊಚ್ಚ ಹೊಸ ಜರತಾರಿ ಸೀರೆಯುಟ್ಟು ಮೈತುಂಬಾ ಚಿನ್ನದ ಆಭರಣ ತೊಟ್ಟು ತೂಗಿ ತೊನೆದು ಹೆಜ್ಜೆಯ ಮೇಲೆ ಹೆಜ್ಜೆ ಇರಿಸಿ ಮೆಲ್ಲ ಮೆಲ್ಲನೆ ನಡೆಯುತ್ತಾ ತಿಂಗಳು ತುಂಬುತ್ತಾ ಬರುವ ಬಿಮ್ಮನತೆ ಹೆಣ್ಣಿನ ಹಾಗೆ. ಆಸೆ ಆಕಾಂಕ್ಷೆ ಬಯಕೆಗಳನ್ನೆಲ್ಲಾ ಈಡೇರಿಸಿ ಕೊಂಡು ಲೋಕಕ್ಕೊಂದು ಹೊಸ ರೂಪ, ಕಲ್ಪ, ಮಾಧುರ್ಯ, ಮಮತೆಯ ಸಾಕಾರತೆಯನ್ನು ಪ್ರಸಾದಿಸುವ ಮಾತೆಯ ಹಾಗೆ. ವಿಕೃತಿ ನಾಮ ಸಂವ ತ್ಸರವು ಸರ್ವರಿಗೂ ಮಂಗಳದಾಯಕ ವಾಗಿರಲಿ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-16 00:00:00
|
|
|