ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಗರದಲ್ಲಿಂದು ಅದ್ದೂರಿ ಚಾಲನೆ : ಎಲ್ಲ ಶಾಲೆಗಳಲ್ಲಿ ಕನ್ನಡ ಭಾಷೆಗೆ ಮನ್ನಣೆ ಅಗತ್ಯ- ಸಮ್ಮೇಳನ ಉದ್ಘಾಟಿಸಿದ ಹಿರಿಯ ಸಾಹಿತಿ ಪ್ರೋ| ಎಚ್ .ಎಸ್ ವೆಂಕಟೇಶ್‌ಮೂರ್ತಿ. |
ಪ್ರಕಟಿಸಿದ ದಿನಾಂಕ : 2010-03-16
(ವಿಶೇಷ ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್)
{ ಬಹಳ ಚೆನ್ನಾಗಿರುವ ಚಿತ್ರಗಳನ್ನು ನೀವು ನೋಡಲೇ ಬೇಕು }
ಮಂಗಳೂರು,ಮಾ.15: ನಗರದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ದಕ್ಷಿಣ ಕನ್ನಡ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನವು ಇಂದಿನಿಂದ ಆರಂಭಗೊಂಡಿತು.
ಮಂಗಳೂರು ಪುರಭವನದಲ್ಲಿ ಅದ್ದೂರಿಯಾಗಿ ಆಯೋಜಿಸಿಲಾದ ದಕ್ಷಿಣ ಕನ್ನಡ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉಡುಪಿ ಪೇಜಾವರ ಮಠಾಧೀಶರಾದ ಶ್ರೀ.ಶ್ರೀ. ವಿಶ್ವೇಶತೀರ್ಥ ಶ್ರೀ ಪಾದಂಗಳವರ ದಿವ್ಯ ಸಾನಿಧ್ಯ ಹಾಗೂ ಸಮ್ಮೇಳನಾಧ್ಯಕ್ಷ ಪಾದೆಕಲ್ಲು ನರಸಿಂಹ ಭಟ್ ಅವರ ಉಪಸ್ಥಿತಿಯಲ್ಲಿ ಹಿರಿಯ ಸಾಹಿತಿ, ಕವಿ, ಡಾ|ಎಚ್.ಎಸ್.ವೆಂಕಟೇಶ್ ಮೂರ್ತಿ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕ್ರಷ್ಣ.ಜೆ.ಪಾಲೆಮಾರ್ ವಹಿಸಿದ್ದರು. ಮನಾಪ ಮೇಯರ್ ಶ್ರೀಮತಿ ರಜನಿ ದುಗ್ಗಣ್ಣ ಅವರು ನೇತ್ರತ್ವ ವಹಿಸಿದ್ದರು.
ಶಾಸಕ ಎನ್ ಯೋಗೀಶ್ ಭಟ್ ಅವರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಉಳ್ಳಾಲ ಶಾಸಕ ಯು.ಟಿ.ಖಾದರ್ ಅವರು ಕಥಾ ಸಂಕಲನವನ್ನು ಬಿಡುಗಡೆಗೊಳಿಸಿದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಸುಬ್ರಾಯ ಚೊಕ್ಕಡಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಅಂಬಾತನಯ ಮುದ್ರಾಡಿ, ಕಾಸರಗೋಡು ಕ.ಸಾ.ಪ ಅಧ್ಯಕ್ಷರಾದ ಎಸ್ ವಿ ಭಟ್ ಮೊದಲಾದವರು ಮುಖ್ಯ ಅಥಿತಿಗಳಾಗಿದ್ದರು.
ದ.ಕ ಜಿಲ್ಲಾ ಕಸಾಪದ ಗೌರವ ಕೋಶಾಧ್ಯಕ್ಷ ಭುವನಾಭಿರಾಮ ಉಡುಪ, ಪ್ರೋ| ರಾದಾಕ್ರಷ್ಣ, ಡಾ| ಎಂ.ಪಿ ಶ್ರೀನಾಥ್ ಉಜಿರೆ, ಡಾ| ಬಿ.ಯಶೋವರ್ಮ ಬೆಳ್ತಂಗಡಿ, ಬಂಟ್ವಾಳ ತಾಲೂಕು ಅಧ್ಯಕ್ಷ ತಮ್ಮಯ್ಯ, ಮಂಗಳೂರು ತಾಲೂಕು ಅಧ್ಯಕ್ಷ ಸರ್ವೊತ್ತೋಮ ಅಂಚನ್, ಶ್ರೀಮತಿ ಮೀನಾಕ್ಷಿ ಗೌಡ ಸುಳ್ಯ, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಅವರು ಸ್ವಾಗತಿಸಿ, ಪ್ರಸ್ತಾವನೆ ಗೈದರು.
ಶ್ರೀಮತಿ ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ದ.ಕ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ| ಗಣೇಶ್ ಅಮೀನ್ ಸಂಕಮಾರ್ ವಂದಿಸಿದರು.
ಎಲ್ಲ ಶಾಲೆಗಳಲ್ಲಿ ಕನ್ನಡ ಭಾಷೆಗೆ ಮನ್ನಣೆ ಅಗತ್ಯ : ಡಾ| ಮೂರ್ತಿ
ಮಂಗಳೂರು, ಮಾ. ೧೫: ಎಸ್‌ಎಸ್‌ಎಲ್‌ಸಿವರೆಗೆ ಕನ್ನಡವನ್ನು ಕಡ್ಡಾಯಗೊಳಿಸುವುದು ಅನಿವಾರ್ಯ. ಶಾಲೆಗಳಲ್ಲಿ ಕನ್ನಡಕ್ಕೆ ಅಗ್ರ ಮಾನ್ಯತೆ ದೊರೆಯಬೇಕು. ಸರಕಾರ ಮಕ್ಕಳಲ್ಲಿ ಕನ್ನಡ ಉಳಿಸುವ ಕಾರ್ಯಕ್ಕೆ ಮುಂದಾಗಬೇಕು. ಇಲ್ಲವಾದರೆ ನಾವು ಕನ್ನಡ ಮಕ್ಕಳನ್ನು ಕಳೆದುಕೊಳ್ಳವುದು ಖಚಿತ ಎಂದು ಹಿರಿಯ ಸಾಹಿತಿ, ಕವಿ ಡಾ| ಎಚ್.ಎಸ್. ವೆಂಕಟೇಶಮೂರ್ತಿ ಸೋಮವಾರ ಎಚ್ಚರಿಸಿದರು.
ನಗರದ ಪುರಭವನದಲ್ಲಿ ೧೬ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ನಾಲಗೆಯಲ್ಲಿ ಕನ್ನಡ ಉಳಿಯಬೇಕಿದೆ. ಮಕ್ಕಳಲ್ಲಿ ಕನ್ನಡ ಭಾಷೆ ಇರುವ ತನಕ ಕನ್ನಡಕ್ಕೆ ಅಪಾಯವಿಲ್ಲ. ಇದಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿರು ವುದು ಸರಕಾರ. ಶಾಲೆಗಳಲ್ಲಿ ಕನ್ನಡಕ್ಕೆ ಅಗ್ರ ಮಾನ್ಯತೆ ಸಿಗುವಂತಾಗಬೇಕು. ಮಕ್ಕಳಲ್ಲಿ ಕನ್ನಡದ ಬೀಜಾಂಕುರವಾದರೆ ಅದು ಹೆಮ್ಮರವಾಗಿ ಬೆಳೆಯಬಲ್ಲದು. ಇದಕ್ಕೆಲ್ಲ ಪೂರಕವಾಗಿ ಸಾಹಿತ್ಯ ಸಮ್ಮೇಳನಗಳು ಕಾರ್ಯನಿರ್ವಹಿಸಬಹುದು ಎಂದು ಅವರು ನುಡಿದರು.
ಇಂದು ಕನ್ನಡ ಸಾಹಿತ್ಯ ಸಮ್ಮೇಳನವೆಂದರೆ ಸಂಭ್ರಮದ ವಿಷಯವಾಗಿ ಉಳಿದಿಲ್ಲ. ಇದು ವಿಷಾದ ಪರ್ವವಾಗಿದೆ. ಕನ್ನಡವನ್ನು ಉಳಿಸುವ, ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುವ ಘಟ್ಟ ಇದಾಗಿದೆ ಎಂದು ವಿವರಿಸಿದರು.
ಮೆರವಣಿಗೆ , ಭಾಷಣಗಳಿಂದ ಕನ್ನಡ ಭಾಷೆಯನ್ನು ಉಳಿಸಲು ಸಾಧ್ಯವಿಲ್ಲ. ಕನ್ನಡ ಕುರಿತಂತೆ ಮನ ಪರಿವರ್ತನೆ ಸಾಧ್ಯವಾಗದಿದ್ದರೆ ಭಾಷೆ ಉಳಿಯುವುದು ಕಷ್ಟ. ನಾವು ಅಚ್ಚ ಕನ್ನಡ ಮಕ್ಕಳನ್ನು ಬೆಳೆಸುವ ಅಗತ್ಯವಿದೆ. ಇಂಗ್ಲಿಷ್ ಮಕ್ಕಳು ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದಾರೆ. ನಮ್ಮ ಮಕ್ಕಳು ಇಂದು ಅಕ್ಷರಸ್ಥ ವಿದ್ಯಾವಂತರಲ್ಲ , ನಿರಕ್ಷರಸ್ಥ ವಿದ್ಯಾವಂತರಾಗುತ್ತಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಕನ್ನಡ ಭಾಷೆ ಓದುವ ಭಾಷೆ ಬದಲು ಆಡುವ ಭಾಷೆಯಾಗಿ ಉಳಿದುಕೊಳ್ಳುವ ಅಪಾಯವಿದೆ ಎಂದು ಅವರು ಎಚ್ಚರಿಸಿದರು.
ಕುವೆಂಪು ಕಾದಂಬರಿಗಳಲ್ಲಿ ನಾವು ಮಲೆನಾಡಿನ ದಟ್ಟ ಕಾಡಿನ ವರ್ಣನೆಯನ್ನು ಕಂಡಿದ್ದೇವೆ. ಆದರೆ ಇಂದು ಮಲೆನಾಡಿನಲ್ಲಿ ಕಾಡು ಉಳಿದಿದೆಯೋ ಇಲ್ಲವೋ ಗೊತ್ತಿಲ್ಲ. ರತ್ನಾಕರವರ್ಣಿ ಕೃತಿಗಳಲ್ಲಿ ಸಮುದ್ರದ ವರ್ಣನೆ ಇದೆ. ಬೇಂದ್ರೆ ಅವರ ಗಂಗಾವತರಣದಲ್ಲಿ ಗಂಗೆಯ ವರ್ಣನೆ ಇದೆ. ಆದರೆ ಇಂದು ನೀರಿಗೆ ಸಮಸ್ಯೆ. ಕೆ.ಎಸ್.ನರಸಿಂಹ ಸ್ವಾಮಿ ಕವನಗಳಲ್ಲಿ ದಾಂಪತ್ಯದ ಅದ್ಭುತ ಪರಿಕಲ್ಪನೆಗಳಿವೆ. ಆದರೆ ಈಗ ಸಮಾಜದ ಮೂಲಭೂತ ಘಟಕವಾದ ಕುಟುಂಬ ವಿಘಟಿತವಾಗುವ ಪರಿಸ್ಥಿತಿ ನಮ್ಮ ಎದುರಿಗಿದೆ. ಮಾಸ್ತಿ ಅವರ ಕೃತಿಗಳು ಇರುವ ತನಕ ದೇವ ಶ್ರದ್ಧೆ ಶಾಶ್ವತವೆಂದು ನಾವು ನಂಬಿದ್ದೆವು. ಆದರೆ ಈಗ ಶ್ರದ್ಧಾ ಕೇಂದ್ರಗಳು ವಿಕಂಪನ ಸ್ಥಿತಿಗೆ ತಲುಪಿವೆ. ನಮ್ಮ ಸಾಹಿತಿ, ಕವಿಗಳು ವರ್ಣಿಸಿದ, ಬಣ್ಣಿಸಿದ ಸ್ಥಿತಿ ಇಂದು ಇದೆಯೇ? ಅದು ಬರೆಯ ಪುಸ್ತಕಗಳಲ್ಲಿ ಉಳಿದುಕೊಂಡಿದೆಯೇ? ಯಾಕೆ ಹೀಗೆ ಎಂದು ಚಿಂತಿಸಬೇಕಿದೆ ಎಂದರು.
ರೈತ ಹಿಂದೆ ಭೂಮಿಯ ಒಡೆಯನಾಗಿದ್ದ. ಆತನಿಗೆ ಮಾನ ಮರ್ಯಾದೆಗಳು ದೊರೆಯುತ್ತಿದ್ದವು. ಆದರೆ ಈಗ ಸಿಗುತ್ತಿರುವುದಾದರೂ ಏನು? ಈ ಹಿಂದೆ ಅತ್ಯದ್ಭುತವಾಗಿದ್ದು ಇಂದು ವಾಸ್ತವದಲ್ಲಿ ಇಲ್ಲದಾಗಿದೆ. ಹಿಂದೆ ಕನ್ನಡ ಬಗ್ಗೆ ನಿಜವಾದ ಅಭಿಮಾನ ಇತ್ತು, ಈಗ ಇಲ್ಲವಾಗಿದೆ. ನಮ್ಮ ಮಕ್ಕಳಿಗೆ ಕ್ರಿಕೆಟ್ ಪಂದ್ಯ ವೀಕ್ಷಿಸಲು ಸಮಯವಿದೆ. ಶಿವರಾಮ ಕಾರಂತರ ಕಾದಂಬರಿ ಓದಲು ಸಮಯವಿಲ್ಲ. ವಸ್ತುಸ್ಥಿತಿಗೂ ಸಾಹಿತ್ಯದಲ್ಲಿ ಕಂಡ, ಓದಿದ ವಿಷಯಗಳಿಗೂ ಅಜಗಜಾಂತರ ವ್ಯತ್ಯಾಸಗಳನ್ನು ಕಾಣುತ್ತಿದ್ದೇವೆ. ಸತ್ಯವೆನ್ನುವುದು ಅಸತ್ಯವಾಗಿ ಚಲಾವಣೆಯಲ್ಲಿದೆ. ಭಾಷೆ, ಸಮಾಜ ಎರಡೂ ಕಲುಷಿತಗೊಂಡಿವೆ ಎಂದು ಅವರು ವಿಷಾದಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಸಾನ್ನಿಧ್ಯ ವಹಿಸಿದ್ದರು. ಸಮ್ಮೇಳನಾಧ್ಯಕ್ಷ ಹಿರಿಯ ಸಾಹಿತಿ ಪಾದೆಕಲ್ಲು ನರಸಿಂಹ ಭಟ್ ಸಮ್ಮೇಳನಾಧ್ಯಕ್ಷ ಭಾಷಣ ಮಾಡಿದರು. ನಿಕಟಪೂರ್ವ ಅಧ್ಯಕ್ಷ ಸುಬ್ರಾಯ ಚೊಕ್ಕಾಡಿ ಭಾಷಣ ಮಾಡಿದರು.
ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎನ್. ಯೋಗೀಶ್ ಭಟ್, ಯು. ಟಿ. ಖಾದರ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್‌ಕುಮಾರ್ ಭಂಡಾರಿ, ಮೇಯರ್ ರಜನಿ ದುಗ್ಗಣ್ಣ, ಉಡುಪಿ ಸಾಹಿತ್ಯ ಪರಿಷತ್ ಅಧ್ಯಕ್ಷ ಅಂಬಾತನಯ ಮುದ್ರಾಡಿ, ಕೇರಳ ಘಟಕದ ಅಧ್ಯಕ್ಷ ಎಸ್. ವಿ. ಭಟ್, ಹರಿಕೃಷ್ಣ ಪುನರೂರು, ಬೆಳ್ತಂಗಡಿ ಘಟಕದ ಅಧ್ಯಕ್ಷ ಡಾ| ಬಿ. ಯಶೋವರ್ಮ, ಮಂಗಳೂರು ಘಟಕದ ಅಧ್ಯಕ್ಷ ಸರ್ವೋತ್ತಮ ಅಂಚನ್, ಬಂಟ್ವಾಳ ಘಟಕದ ಅಧ್ಯಕ್ಷ ಬಿ. ತಮ್ಮಯ್ಯ, ಸುಳ್ಯ ಘಟಕದ ಅಧ್ಯಕ್ಷೆ ಮೀನಾಕ್ಷಿ ಗೌಡ, ಡಾ| ರಾಧಾಕೃಷ್ಣ , ಭುವನಾಭಿರಾಮ ಉಡುಪ ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ ಸ್ವಾಗತಿಸಿದರು.
ಅಭಿವ್ಯಕ್ತಿ ಸಾಹಿತ್ಯದ ಗುರಿ: ಪೇಜಾವರ ಶ್ರೀ
ಮಾನವನಲ್ಲಿ ಸುಪ್ತವಾಗಿರುವ ಮಾನವೀಯತೆಯನ್ನು ಅಭಿವ್ಯಕ್ತಿಗೊಳಿಸುವುದು ಸಾಹಿತ್ಯದ ಗುರಿ. ಮಾನವೀಯತೆ ಪ್ರಕಟವಾದಾಗ ನಾಡಿನ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ನುಡಿದರು.
ನಾಡುನುಡಿಗೆ ಪ್ರೋತ್ಸಾಹ: ಸಚಿವ ಪಾಲೆಮಾರ್
ರಾಜ್ಯಸರಕಾರ ನಾಡುನುಡಿಗೆ ಹೆಚ್ಚಿನ ರೀತಿಯ ಪ್ರೋತ್ಸಾಹ ನೀಡುತ್ತಿದೆ. ಪ್ರತಿಯೊಂದು ಜಿಲ್ಲಾ ಸಮ್ಮೇಳನಕ್ಕೆ ತಲಾ ೫ ಲಕ್ಷ ರೂ. ಸರಕಾರ ನೀಡುತ್ತಿದೆ. ಉಳ್ಳಾಲದಲ್ಲಿ ಜರಗಲಿರುವ ರಾಣಿ ಅಬ್ಬಕ್ಕ ಉತ್ಸವಕ್ಕೆ ರಾಜ್ಯ ಸರಕಾರ ಈಗಾಗಲೇ ೨೫ ಲಕ್ಷ ರೂ. ಮಂಜೂರು ಮಾಡಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಸಚಿವ, ಸಮ್ಮೇಳನ ಸಮಿತಿ ಗೌರವಾಧ್ಯಕ್ಷ ಕೃಷ್ಣ ಪಾಲೆಮಾರ್ ಹೇಳಿದರು. ಇಂದಿನ ಸಮ್ಮೇಳನಕ್ಕೆ ಜಿಲ್ಲಾಡಳಿತ ಹಾಗೂ ಮನಪಾ ಸಂಪೂರ್ಣ ನೆರವು ನೀಡಿದೆ ಎಂದ ಅವರು ಸಮ್ಮೇಳನಕ್ಕೆ ಮಹಾನಗರ ಪಾಲಿಕೆ ವತಿಯಿಂದ ೨ ಲಕ್ಷ ರೂ. ಅನುದಾನ ನೀಡುವಂತೆ ಸೂಚಿಸುತ್ತೇನೆ ಎಂದರು.
ವರದಿಯ ವಿವರಗಳು |
 |
ಕೃಪೆ : ವಿಶೇಷ ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್ ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-03-16 00:00:00
|
|
|