ಉಡುಪಿ: ನಮ ತುಳುವೆರ್ ಕಲಾ ಸಂಘಟನೆಗೆ `25' ವರ್ಷ |
ಪ್ರಕಟಿಸಿದ ದಿನಾಂಕ : 2010-03-15
ಉಡುಪಿ, ಮಾ.೧೪ : ಮಲೆನಾಡಿನ ಹಚ್ಚಹಸಿರಿನ ನಡುವೆ ೧೯೮೫ರಲ್ಲಿ ಉಸಿರು ಪಡೆದುಕೊಂಡ ಕಾರ್ಕಳ ತಾಲೂಕಿನ ಮುದ್ರಾಡಿಯ `ನಮ ತುಳುವೆರ್' ಕಲಾಸಂಘಟನೆ (ನಾಟ್ಕ)ಗೆ ಈಗ ೨೫ರ ಏರು ಹರೆಯ. ಈ ಸಂಭ್ರಮವನ್ನು ಜನರ ನಡುವೆ ಆಚರಿಸಲು ಸಂಘಟನೆ ಸೋಮವಾರ ದಿಂದ ಅನೇಕ ಕಾರ್ಯಕ್ರಮ ಆಯೋಜಿಸಿದೆ.
ಆರಂಭದ ೧೦ ವರ್ಷಗಳ ನಾಟ್ಕ ಕೇವಲ ಮಣ್ಣಿನ ಭಾಷೆಯಾದ ತುಳುವಿನಲ್ಲಿಯೇ ನಾಟಕಗಳ ನ್ನು ಪ್ರಯೋಗಕ್ಕೆ ಆರಿಸಿಕೊಂಡು ಸ್ಥಳೀಯವಾಗಿ ಸಾಧನೆ ಮಾಡಿತ್ತು. ೯೫ರಲ್ಲಿ ನಾಡಿನ ಭಾಷೆ ಯಾದ ಕನ್ನಡದತ್ತ ಹೊರಳಿದ್ದು ಮಾತ್ರವಲ್ಲ ನಾಡಿನುದ್ದಕ್ಕೂ ತನ್ನ ಸಾಧನೆಯ ವ್ಯಾಪ್ತಿಯನ್ನು ವಿಸ್ತರಿಸಿತು. ಆದರೆ ತುಳುವನ್ನು ಮರೆಯಲಿಲ್ಲ. ಕನ್ನಡ - ತುಳುವಿನ ಜುಗಲ್‌ಬಂದಿಯಲ್ಲಿ ನಾಟ್ಕ ಹೊಸ ಎತ್ತರಕ್ಕೆ ಏರಿತು, ಹೊಸ ಅವಕಾಶ ಹುಡುಕಿಕೊಂಡಿತು. ಮುದ್ರಾಡಿಯಿಂದ ಹೊರಗೆ ಒಂದು ಗಟ್ಟಿ ಅಭಿಮಾನಿ ಬಳಗವನ್ನೇ ಕಟ್ಟಿಕೊಂಡಿತು. ಜೊತೆಗೆ ಪ್ರಶಸ್ತಿ - ಬಹುಮಾನ ಬಗಲಿ ಗಿಳಿಸಿತು. ಈ ನಾಟ್ಕ ಸಂಸ್ಥೆಯ ಕಳೆದ ೧೦ ವರ್ಷಗಳಲ್ಲಿ ಪಡೆದುಕೊಂಡ ಪ್ರಶಸ್ತಿಗಳ ಸಂಖ್ಯೆಯೇ ಅದರ ಗಟ್ಟಿತನ ತೋರಿಸುತ್ತದೆ.
ಅಲ್ಲದೇ ನಾಟ್ಕ ಸಂಘಟನೆ ೨೦ ವರ್ಷಾಚರಣೆ ಸಂದರ್ಭ ೨೦ ದಿನಗಳ ಬೃಹತ್ ನಾಟಕೋತ್ಸವ ನಡೆಸಿ ಅದರಲ್ಲಿ ೨೪ ನಾಟಕಗಳನ್ನು ಪ್ರದರ್ಶಿಸಿದ್ದು ಇದು ರಾಜ್ಯದಲ್ಲಿಯೇ ದಾಖಲೆಯಾಗಿದೆ.
ಈಗ ೨೫ನೇ ವರ್ಷಾಚರಣೆ ಸಂದರ್ಭದಲ್ಲಿ ನಾಟ್ಕ ಸುತ್ತಾಟ ಎಂಬ ಹೆಸರಿನಲ್ಲಿ ರಾಜ್ಯಾದ್ಯಂತ ೨೫ ಕಡೆಗಳಲ್ಲಿ ನಾಟಕೋತ್ಸವ ನಡೆಸುವುದಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ. ಇದರಲ್ಲಿ `ಅಸುದ್ಧೋ', `ಹೂವು ಮತ್ತು ಪಿಲಿಪತ್ತಿ ಗಡಸ್' ಎಂಬ ಪ್ರಶಸ್ತಿ ವಿಜೇತ ನಾಟಕ ಪ್ರದರ್ಶಿಸಲಾ ಗುತ್ತದೆ ಎಂದು ನಾಟ್ಕದ ಅಧ್ಯಕ್ಷ ಸುಕುಮಾರ್ ಮೋಹನ್ ತಿಳಿಸಿದ್ದಾರೆ.
ಅಲ್ಲದೆ ಡಿಸೆಂಬರ್‌ನಲ್ಲಿ ಈ ಬೆಳ್ಳಿ ಹಬ್ಬ ಆಚರಣೆಯ ಸಮಾರೋಪ ಸಮಾರಂಭ ನಡೆಯಲಿದ್ದು, ಈ ಮಧ್ಯೆ ರಂಗಭೂಮಿಯ ಬಗ್ಗೆ ರಾಜ್ಯ ಮಟ್ಟದ ವಿಚಾರಸಂಕಿರಣ, ರಂಗಸಂಬಂಧಿ ಚಟುವಟಿಕೆ ಗಳನ್ನು ಹಾಕಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇಂದಿನಿಂದ ನಾಟಕೋತ್ಸವ
ಬೆಳ್ಳಿಹಬ್ಬದ ಆಚರಣೆಗಾಗಿ ೩ ದಿನಗಳ ನಾಟಕೋತ್ಸವವನ್ನು ಸಂಘಟನೆ ಹಮ್ಮಿಕೊಂಡಿದೆ. ಈ ಉತ್ಸವವನ್ನು ಸೋಮವಾರ ಸಂಜೆ ೬.೩೦ಕ್ಕೆ ಮುದ್ರಾಡಿ ಶಾಲಾ ವಠಾರದಲ್ಲಿ ಸಿನಿಮಾ - ರಂಗ ಭೂಮಿ ನಟ ಕರಿಬಸವಯ್ಯ ಉದ್ಘಾಟಿಸಲಿದ್ದಾರೆ. ರಂಗದಾರ್ಶನಿಕ ಪ್ರಸನ್ನ ಅಧ್ಯಕ್ಷತೆ ವಹಿಸಲಿ ದ್ದಾರೆ. ಮುಂಬೈ ಉದ್ಯಮಿ ದಿವಾಕರ ಎನ್. ಶೆಟ್ಟಿ ಮತ್ತು ಸ್ಥಳೀಯ ಶಾಸಕ ಗೋಪಾಲ ಭಂಡಾರಿ ಭಾಗವಹಿಸುತ್ತಾರೆ.
- ಸೋಮವಾರ ಸಂಜೆ ೭ ಗಂಟೆಗೆ ಅಸುದ್ದೋ (ರಚನೆ - ಜನಾರ್ದನ ಎರ್ಪಕಟ್ಟೆ, ನಿರ್ದೇಶನ - ಸುಧೀಂದ್ರ ಮೋಹನ್) ಎಂಬ ತುಳು ನಾಟಕದ ೪ನೇ ಪ್ರದರ್ಶನ ನಡೆಯಲಿದೆ.
- ನಾಳೆ ಸಂಜೆ ೭ ಗಂಟೆಗೆ ಹೂವು (ರಚನೆ - ಗಿರೀಶ್ ಕಾರ್ನಾಡ್, ನಿರ್ದೇಶನ - ಸಿ. ಬಸವ ಲಿಂಗಯ್ಯ) ಎಂಬ ಕನ್ನಡ ನಾಟಕದ ೨೬ನೇ ಪ್ರದರ್ಶನ ನಡೆಯಲಿದೆ.
- ೧೭ರಂದು ಸಂಜೆ ೭ ಗಂಟೆಗೆ ಈ ನಾಟ್ಕ ತಂಡಕ್ಕೆ ದೊಡ್ಡ ಹೆಸರನ್ನು ತಂದುಕೊಟ್ಟ ಅತ್ಯಂತ ಯಶಸ್ವಿ ತುಳು ನಾಟಕ ಪಿಲಿಪತ್ತಿ ಗಡಸ್ (ರಚನೆ - ಡಿ. ಕೆ. ಚೌಟ, ನಿರ್ದೇಶನ - ಜೀವನ್‌ರಾಮ್ ಸುಳ್ಯ) ಇದರ ೧೩೨ನೇ ಪ್ರದರ್ಶನ ನಡೆಯಲಿದೆ.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-15
|
|
|