ಮಂಡ್ಯ: ರಾಜ್ಯಮಟ್ಟದ ಜಾನಪದ ಕಲಾಮೇಳ-ಸಮ್ಮೇಳನಕ್ಕೆ ತೆರೆ: ಜಾನಪದ ವಿವಿಗೆ ಒತ್ತಾಯಿಸಿ ನಿರ್ಣಯ |
ಪ್ರಕಟಿಸಿದ ದಿನಾಂಕ : 2010-03-15
ಮಂಡ್ಯ, ಮಾ.೧೪: ನಗರದ ಕಲಾಮಂದಿರದಲ್ಲಿ ಮೂರು ದಿನಗಳ ಕಾಲ ನಡೆದ ರಾಜ್ಯಮಟ್ಟದ ಯುವಕತಿ-ಜಾನಪದ ಕಲಾಮೇಳ ಹಾಗೂ ೩೬ನೆ ಅಖಿಲ ಕರ್ನಾಟಕ ಜಾನಪದ ಸಮ್ಮೇಳನಕ್ಕೆ ರವಿವಾರ ಸಂಜೆ ತೆರೆಬಿದ್ದಿತು.
20 ಜಿಲ್ಲೆಗಳಿಂದ ಆಗಮಿಸಿದ್ದ ೪೦೦ ಕಲಾವಿದರು ಪಾಲ್ಗೊಂಡಿದ್ದರು. ಜಾನಪದ ಸಮ್ಮೇಳನದ ಅಂಗವಾಗಿ ಶರೀರ ಜಾನಪದ ವಿಷಯವಾಗಿ ಎರಡು ದಿನಗಳು ನಡೆದ ಗೋಷ್ಠಿಯಲ್ಲಿ ವಿದ್ವಾಂಸರು ಪ್ರಬಂಧ ಮಂಡಿಸಿದರು.
ಸಮಾರೋಪ ಭಾಷಣ ಮಾಡಿದ ಮೈಸೂರು ವಿವಿ ಕನ್ನಡ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಡಾ. ರಾಮೇಗೌಡ (ರಾಗೌ) ಅವರು, ಬಹು ಸಂಸ್ಕೃತಿಯ ಪ್ರತೀಕವಾದ ಜಾನಪದವನ್ನು ಉಳಿಸಬೇ ಕಾಗಿದೆ ಎಂದು ಕರೆ ನೀಡಿದರು.
ಜನಪದ ಜಾತ್ಯತೀತವಾದದ್ದು. ೬ ಸಾವಿರ ವರ್ಷಗಳ ಹಿಂದೆ ಸೃಷ್ಟಿಯಾದ ಜನಪದವು ತನ್ನ ಒಡಲಲ್ಲಿ ಲೋಕಸೃಷ್ಟಿಯನ್ನು ಅಳವಡಿಸಿ ಕೊಂಡಿದೆ. ಜಾನಪದವು ಉನ್ನತ ಸಂಸ್ಕೃತಿಯಾಗಿದೆ ಎಂದು ಅವರು ವಿಶ್ಲೇಷಿಸಿದರು.
ಈ ದೇಶದ ಸಾಮಾಜಿಕ ಸಂಕೀರ್ಣ ವ್ವವಸ್ಥೆಯಲ್ಲಿ ಬಹು ಸಂಸ್ಕೃತಿಯ ಉಳಿವು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ ರಾಗೌ, ಇಂದು ಜಾನಪದ ಸ್ಥಿತ್ಯಂತರ ವಾಗುತ್ತಿರುವುದಕ್ಕೆ ನಮ್ಮಲ್ಲಿನ ಸಂಘರ್ಷ ಕಾರಣ ವಾಗಿದೆ ಎಂದರು.
ಶರೀರ ಜಾನಪದದಲ್ಲಿ ಹಿಂದೆಂದೂ ಕಾಣದ ಸ್ಥಿತ್ಯಂತರ ವಾಗುತ್ತಿದೆ. ಬಹುಸಂಸ್ಕೃತಿ ಎನ್ನುವುದು ತಲಮಟ್ಟದ ಅಥವಾ ನೆಲದ ಸಂಸ್ಕೃತಿಯಾಗಿದೆ ಎಂದು ಅವರು ಹೇಳಿದರು.
ಜಾನಪದ ಪ್ರಕಾರಗಳು ಮಾನವ ಸೃಷ್ಟಿಂi ಹೊರತು ದೈವ ಸೃಷ್ಟಿಯಲ್ಲ. ಷರೀರ ಪದಗಳು ಜಾನಪದವಲ್ಲ. ತತ್ವಪದಗಳೂ ಶುದ್ಧ ಜಾನಪದವಲ್ಲ. ಅವುಗಳು ಅರೆ ಅಥವಾ ಜನಪ್ರಿಯ ಜಾನಪದಗಳು ಎಂದು ಅವರು ಅಭಿಪ್ರಾಯಪಟ್ಟರು.
ಜಾನಪದ ವಿವಿ ಸ್ಥಾಪನೆಯಾಗಬೇಕೆಂಬುದು ಬಹುದಿನಗಳ ಬೇಡಿಕೆ. ಇದು ಸಾಕಾರಗೊಂಡರೆ ೪೦ ವರ್ಷಗಳ ಕನಸು ಸಾಕಾರಗೊಳ್ಳುತ್ತದೆ ಎಂಬ ಭರವಸೆ ಯನ್ನು ಇಟ್ಟುಕೊಂಡಿದ್ದೇನೆ. ಸರಕಾರ ಈ ನಿಟ್ಟಿನಲ್ಲಿ ಮುಂದಾಗಬೇಕೆಂದು ಅವರು ಒತ್ತಾಯಿಸಿದರು.
ಸಮ್ಮೇಳನದ ಸರ್ವಾಧ್ಯಕ್ಷ ಹ.ಕ.ರಾಜೇಗೌಡ ಮಾತನಾಡಿ, ಮೂರು ದಿನಗಳ ಸಮ್ಮೇಳನ ಸಂಪೂರ್ಣ ಯಶಸ್ವಿಯಾದ ಸಂತೋಷ ನನಗಾಗಿದೆ. ಯಾವುದೇ ಲೋಪವಿಲ್ಲದೆ ಸಮ್ಮೇಳನ ಯಶಸ್ಸು ಕಂಡಿದೆ ಎಂದು ಹೇಳಿದರು.
ಸಮ್ಮೇಳನಕ್ಕೆ ಪ್ರೇಕ್ಷಕರ ಕೊರತೆ ಇತ್ತು ಎಂಬುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ನನಗೇನೂ ಹಾಗೆ ಎನಿಸುತ್ತಿಲ್ಲ. ಸಮ್ಮೇಳನದಲ್ಲಿ ಪ್ರೇಕ್ಷಕರ ಸಂಖ್ಯೆ ಮುಖ್ಯವಲ್ಲ. ಆಸಕ್ತರ ಹಾಜರಿ ಮುಖ್ಯ ಎಂದು ಅವರು ಅಭಿಪ್ರಾಯಪಟ್ಟರು.
ಸರಕಾರಿ ಅಧಿಕಾರಿಗಳು ಅವರದೆ ಆದ ಪ್ರಪಂಚ ದಲ್ಲಿ ಮುಳುಗಿರುತ್ತಾರೆ ಎಂಬುದು ಮೊದಲಿನಿಂದಲೂ ನನ್ನ ಅಭಿಪ್ರಾಯವಾಗಿತ್ತು.
ಆದರೆ, ಮಂಡ್ಯದಲ್ಲಿ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲಾ ಅಧಿಕಾರಿಗಳು ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದ್ದಾರೆ ಎಂದೂ ಅವರು ಶ್ಲಾಸಿದರು. ಪ್ರಭಾರ ಜಿಲ್ಲಾಧಿಕಾರಿ ಹಾಗೂ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಪುಟ್ಟಮಾದಯ್ಯ ಅಧ್ಯಕ್ಷತೆವಹಿಸಿದ್ದರು. ಕರ್ನಾಟಕ ಮತ್ತು ತಮಿಳುನಾಡಿ ಎನ್‌ವೈಕೆ ನಿರ್ದೇಶಕ ಎಂ.ಸದಾಚಾರವೇಲು, ಧಾರವಾಡ ವಿವಿ ಜಾನಪದ ಅಧ್ಯಯನ ವಿಭಾಗದ ಕಾರ್ಯಾಧ್ಯಕ್ಷ ಡಾ. ವಿ.ಎಲ್.ಪಾಟೀಲ್, ಜಿಲ್ಲಾ ಯುವ ಸಮನ್ವಯಾ ಧಿಕಾರಿ ಎಸ್.ಸಿದ್ದರಾಮಪ್ಪ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಬಿ.ಜಯಪ್ರಕಾಶ ಗೌಡ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಐದು ಮಂದಿಗೆ ಪ್ರಶಸ್ತಿ ಪ್ರದಾನ
ಮಂಡ್ಯ, ಮಾ.೧೪: ನಗರದಲ್ಲಿ ನಡೆದ ೩೬ನೆ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದಲ್ಲಿ ಮಂಡ್ಯದ ಜನದನಿ ಸಂಘಟನೆ ವತಿಯಿಂದ ಐದು ಮಂದಿ ಜಾನಪದ ವಿದ್ವಾಂಸರು ಹಾಗೂ ಕಲಾವಿದರಿಗೆ ತಲಾ ಹತ್ತು ಸಾವಿರ ನಗದು ಒಳಗೊಂಡ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಖ್ಯಾತ ಸಾಹಿತಿ ಡಾ. ಸಿ. ಪಿ. ಕಷ್ಣಕುಮಾರ್ (ಸಿಪಿಕೆ) ಹಾಗೂ ಬನ್ನೂರು ಕೆಂಪಮ್ಮ ಅವರಿಗೆ ಕ್ರಮವಾಗಿ ಡಾ. ಎಚ್.ಎಲ್.ನಾಗೇಗೌಡ ಜಾನಪದ ತಜ್ಞ ಪ್ರಶಸ್ತಿ ಹಾಗೂ ಕಲಾವಿದ ಪ್ರಶಸ್ತಿ ನೀಡಲಾಯಿತು.
ಕ್ಯಾತನಹಳ್ಳಿ ರಾಮಣ್ಣ ಹಾಗೂ ಹುಳ್ಳೇನಹಳ್ಳಿ ಗಂಗಾಧರ ಅವರಿಗೆ ಕ್ರಮವಾಗಿ ಡಾ. ಜೀಶಂಪ ಜಾನಪದ ತಜ್ಞ ಪ್ರಶಸ್ತಿ ಹಾಗೂ ಕಲಾವಿದ ಪ್ರಶಸ್ತಿ ಮತ್ತು ಡಿ. ಎಂ. ಲಕ್ಕಯ್ಯ ಅವರಿಗೆ ಬಾಣಸವಾಡಿ ಬೋರೇಗೌಡ ನಾಟಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಮ್ಮೇಳನದ ಗೌರವಾಧ್ಯಕ್ಷ ಹಾಗೂ ಶಾಸಕ ಎಂ. ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸಂಸದ ಎನ್. ಚಲುವರಾಯಸ್ವಾಮಿ ಪ್ರಶತ್ತಿ ಪ್ರದಾನ ಮಾಡಿದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಬಿ. ಜಯಪ್ರಕಾಶಗೌಡ ಮತ್ತಿತರರು ಹಾಜರಿದ್ದರು.
ಖ್ಯಾತ ವಿದ್ವಾಂಸ ಕ್ಯಾತನಹಳ್ಳಿ ರಾಮಣ್ಣ ಸಮಾರಂಭಕ್ಕೆ ಗೈರುಹಾಜರಾದ ಹಿನ್ನೆಲೆಯಲ್ಲಿ ಅವರ ನಿವಾಸದಲ್ಲೇ ಪ್ರಶಸ್ತಿ ಪ್ರದಾನ ಮಾಡುವುದಾಗಿ ಸಂಘಟಕರು ತಿಳಿಸಿದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-15 00:00:00
|
|
|