ಮಂಗಳೂರು, ಮಾ.೧೪: ದಕ್ಷಿಣ ಕನ್ನಡ ಜಿಲ್ಲಾ ೧೬ನೆ ಕನ್ನಡ ಸಾಹಿತ್ಯ ಸಮ್ಮೇಳನವು ಮಾ.೧೫, ೧೬ ಮತ್ತು ೧೭ರಂದು ನಗರದ ಪುರಭವನದಲ್ಲಿ ನಡೆಯಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅಧ್ಯಕ್ಷತೆಯಲ್ಲಿ ಹಿರಿಯ ಸಾಹಿತಿ ಪ್ರೊ.ಎಚ್.ಎಸ್. ವೆಂಕಟೇಶ ಮೂರ್ತಿ ಸಂಜೆ ೫ ಗಂಟೆಗೆ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲ್ ಪುಸ್ತಕ ಮಾಲೆ ಬಿಡುಗಡೆ ಮಾಡಲಿದ್ದು, ಶಾಸಕರಾದ ಅಭಯಚಂದ್ರ ಜೈನ್ ಸ್ಮರಣ ಸಂಚಿಕೆಯನ್ನು ಮತ್ತು ಯು.ಟಿ.ಖಾದರ್ ಕಥಾ ಸಂಕಲನ ಬಿಡುಗಡೆ ಮಾಡಲಿದ್ದಾರೆ. ಶಾಸಕ ಯೋಗೀಶ್ ಭಟ್ ವಸ್ತು ಪ್ರದರ್ಶನ ಉದ್ಘಾಟಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮನು ಬಳಿಗಾರ್ ಪುಸ್ತಕ ಪ್ರದರ್ಶನ ಉದ್ಘಾಟಿಸಲಿದ್ದಾರೆ.
ಮೂರು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಆಹೋರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ವಿಷಯಕ್ಕೆ ಸಂಬಂಧಿಸಿ ಮೂರು ಗೋಷ್ಠಿಗಳು, ವಿದ್ಯಾರ್ಥಿ ಕವಿಗೋಷ್ಠಿ, ಬಹುಭಾಷಾ ಕವಿಗೋಷ್ಠಿ, ಸಂವಾದ, ಬಹಿರಂಗ ಅಧಿವೇಶನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.