ಕನ್ನಡಿಗ ಉಡುಪಿಯ ಗುರುದಾಸ್‌ಗೆ ಐಸಿಸಿ ಗ್ಲೋಬಲ್ ಅಕಾಡೆಮಿ ತರಬೇತಿ |
ಪ್ರಕಟಿಸಿದ ದಿನಾಂಕ : 2010-03-14
ನಮ್ಮದು ಬಡ ಕುಟುಂಬ. ವಡಾಪಾವ್ ಮಾರಿಕೊಂಡೇ ನಮ್ಮ ತಂದೆ ನಮಗೆ ಶಿಕ್ಷಣ ನೀಡಿದ್ದಾರೆ. ಇಬ್ಬರು ಅಕ್ಕಂದಿರಿಗೂ ತಂದೆ ಕಷ್ಟಪಟ್ಟು ಓದಿಸಿದ್ದಾರೆ. ಮುಂಬೈನಲ್ಲೇ ಇದ್ದ ಕಾರಣ ಕನ್ನಡ ಅಷ್ಟು ಚೆನ್ನಾಗಿ ಬರುತ್ತಿಲ್ಲ. ಆದರೆ ತಂದೆ-ತಾಯಿ ಉತ್ತಮವಾಗಿ ಕನ್ನಡ ಮಾತನಾಡಬಲ್ಲರು.
ಮುಂಬೈನಲ್ಲಿ ವಡಪಾವ್ ಮಾರುತ್ತಿರುವ ರವಿದಾಸ್ ಶೆಣೈ ಎಂಬುವರ ಮಗ ಗುರುದಾಸ್ ಶೆಣೈಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಗ್ಲೋಬಲ್ ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಅವಕಾಶ ಸಿಕ್ಕಿದೆ. ಇಲ್ಲಿ ಅವಕಾಶ ಪಡೆದವರಿಗೆ ದೇಶೀಯ ಕ್ರಿಕೆಟ್‌ನಲ್ಲಿ ಆಡುವ ಅವಕಾಶ ಸಿಗುವುದು ಖಚಿತ.
ಗಂಟೆಗೆ ೧೩೦ ಕಿ.ಮೀ.ವೇಗದಲ್ಲಿ ಬೌಲಿಂಗ್ ಮಾಡಬಲ್ಲ ಗುರುದಾಸ್, ಮೂಲತಃ ಉಡುಪಿಯ ಸೂಡಾದವರು. ತಂದೆ ರವಿದಾಸ್ ಮುಂಬೈನಲ್ಲಿ ನೆಲೆಸಿರುವ ಕಾರಣ ಗುರುದಾಸ್ ಅಲ್ಲಿಯೇ ವ್ಯಾಸಂಗ ಮಾಡುತ್ತಿದ್ದಾರೆ.
ಗೆಟೊರೆಡ್ ವೇಗದ ಬೌಲರ್‌ಗಳ ಆಯ್ಕೆಯಲ್ಲಿ ಗುರುದಾಸ್ ೨೨ ವರ್ಷದೊಳಗಿನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ತರಬೇತಿಗೆ ಆಯ್ಕೆಯಾಗಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಮನೋಜ್ ಪ್ರಭಾಕರ್ ಆಯ್ಕೆ ನೇತೃತ್ವದಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದೆ. ದೆಹಲಿ, ಚಂಡೀಗಢ, ಮುಂಬೈ, ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್ ನಗರಗಳಲ್ಲಿ ಆಯ್ಕೆ ನಡೆದಿತ್ತು.
ಒಟ್ಟು ನಾಲ್ಕು ಬೌಲರ್‌ಗಳಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ತರಬೇತಿ ಪಡೆಯುವ ಅವಕಾಶ ಸಿಕ್ಕಿದೆ. ಒಟ್ಟು ೬೦೦೦ ಮಂದಿ ಸ್ಪರ್ಧಿಗಳು ಈ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಅವರಲ್ಲಿ ೨೪ ಮಂದಿ ಫೈನಲ್ ಹಂತ ತಲುಪಿದ್ದರು.
ಅತ್ಯಂತ ನಿಖರವಾಗಿ ಬೌಲಿಂಗ್ ಮಾಡಬಲ್ಲ ನಾಲ್ವರು ಬೌಲರ್‌ಗಳು ಮನೋಜ್ ಪ್ರಭಾಕರ್ ನೇತೃತ್ವದ ಸಮಿತಿ ಆಯ್ಕೆ ಮಾಡಿದೆ. ಆಸ್ಟ್ರೇಲಿಯಾದ ಮಾಜಿ ಆಟಗಾರ ರೊಡ್ನಿ ಮಾರ್ಷ್ ಐಸಿಸಿ ಗ್ಲೋಬಲ್ ಅಕಾಡೆಮಿಯ ಅಧ್ಯಕ್ಷರಾಗಿದ್ದಾರೆ.
-ಹೆತ್ತವರ ಕೃಪೆ: ಮುಂಬೈನಿಂದ ಮಾತನಾಡಿದ ಗುರುದಾಸ್ ಶೆಣೈ, ನನಗೆ ಪ್ರಮುಖ ಕ್ರಿಕೆಟ್ ಪಂದ್ಯಗಳನ್ನಾಡಿದ ಅನುಭವವಿಲ್ಲ. ಆದರೆ ಮಹಾರಾಷ್ಟ್ರದಲ್ಲಿ ನಡೆದ ಕಂಗಾ ಲೀಗ್ ಟೂರ್ನಿಯಲ್ಲಿ ಆಡಿದ್ದೇನೆ. ಗೆಟೊರೆಡ್ ಟ್ಯಾಲೆಂಟ್ ಸರ್ಚ್ ಮುಂಬೈಗೆ ಬಂದ ವಿಷಯವೇ ಗೊತ್ತಿರಲಿಲ್ಲ. ಆದರೆ ನಮ್ಮ ತಂದೆಯವರು ಈ ವಿಷಯ ನನಗೆ ತಿಳಿಸಿದರು. ನನ್ನ ನಿಖರ ಬೌಲಿಂಗ್ ಬಗ್ಗೆ ಮನೋಜ್ ಪ್ರಭಾಕರ್, ವಾಸಿಂ ಅಕ್ರಮ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗ ಕರ್ಜತ್‌ನ ಕೊಂಕಣ ಜ್ಞಾನಪೀಠ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಲಿಯುತ್ತಿರುವ ನನಗೆ ಕ್ರಿಕೆಟ್‌ನಲ್ಲಿ ಉತ್ತಮ ಅವಕಾ ಶ ಸಿಗಬಹುದೆಂಬ ಆತ್ಮವಿಶ್ವಾಸವಿದೆ ಎಂದಿದ್ದಾರೆ.
ನಮ್ಮದು ಬಡ ಕುಟುಂಬ. ವಡಾಪಾವ್ ಮಾರಿಕೊಂಡೇ ನಮ್ಮ ತಂದೆ ನಮಗೆ ಶಿಕ್ಷಣ ನೀಡಿದ್ದಾರೆ. ಇಬ್ಬರು ಅಕ್ಕಂದಿರಿಗೂ ತಂದೆ ಕಷ್ಟಪಟ್ಟು ಶಿಕ್ಷಣ ನೀಡಿದ್ದಾರೆ. ಮುಂಬೈನಲ್ಲೇ ಇದ್ದ ಕಾರಣ ಕನ್ನಡ ಅಷ್ಟು ಚೆನ್ನಾಗಿ ಬರುತ್ತಿಲ್ಲ. ಆದರೆ ತಂದೆ-ತಾಯಿ ಉತ್ತಮವಾಗಿ ಕನ್ನಡ ಮಾತನಾಡಬಲ್ಲರು ಹಾಗೂ ಬರೆಯಬಲ್ಲರು ಎಂದು ಗುರುದಾಸ್ ಹೇಳಿದ್ದಾರೆ.
-ಗ್ಲೋಬಲ್ ಕ್ರಿಕೆಟ್ ಅಕಾಡೆಮಿ: ಐಸಿಸಿ ಗ್ಲೋಬಲ್ ಕ್ರಿಕೆಟ್ ಅಕಾಡೆಮಿ ಜಗತ್‌ಪ್ರಸಿದ್ಧ ದುಬೈ ಸ್ಟೋರ್ಟ್ಸ್ ಸಿಟಿಯಲ್ಲಿದೆ. ಜಗತ್ತಿನ ೧೦೪ ರಾಷ್ಟ್ರಗಳು ಐಸಿಸಿ ಕ್ರಿಕೆಟ್ ಅಕಾಡೆಮಿಯ ಸದಸ್ಯತ್ವ ಪಡೆದಿವೆ. ಕಳೆದ ವರ್ಷ ಈ ಅಕಾಡೆಮಿ ಉದ್ಘಾಟನೆಗೊಂಡಿತು. ಆಸ್ಟ್ರೇಲಿಯಾದ ರೊಡ್ನಿ ಮಾರ್ಷ್ ಇದರ ಅಧ್ಯಕ್ಷರು. ಇಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ತರಬೇತಿ ನೀಡಲಾಗುತ್ತಿದೆ.
ಅತ್ಯಾಧುನಿಕ ಉಪಕರಣಗಳಿಂದ ಕೂಡಿರುವ ಇಲ್ಲಿ ತರಬೇತಿ ಪಡೆಯುವುದೇ ಕ್ರಿಕೆಟಿಗನ ಪಾಲಿಗೆ ಸೌಭಾಗ್ಯ. ಇಲ್ಲಿ ೧೦ ಟರ್ಫ್ ಪಿಚ್‌ಗಳಿವೆ. ಒಳಾಂಗಣ ಹಾಗೂ ಹೊರಾಂಗಣ ಕ್ರಿಕೆಟ್ ಅಂಗಣ ವಿದೆ. ಹಾಕ್ ಐ ಟೆಕ್ನಾಲಜಿ ವ್ಯವಸ್ಥೆ ಇದೆ. ಕ್ರಿಕೆಟ್ ಜಿಮ್ನೇಶಿಯಂ ಕೂಡ ಇದೆ. ಎರಡೂ ಕ್ರಿಕೆಟ್ ಅಂಗಣದಲ್ಲಿ ಫ್ಲಡ್ ಲೈಟ್ ವ್ಯವಸ್ಥೆ ಇದೆ. ಇಲ್ಲಿ ಕ್ರಿಕೆಟ್‌ಗೆ ಅನ್ವಯವಾಗುವ ಎಲ್ಲ ರೀತಿಯ ತರ ಬೇತಿಗಳನ್ನೂ ನೀಡಲಾಗುತ್ತದೆ.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-14 00:00:00
|
|
|