ಬೆಂಗಳೂರು: ಮಾಹಿತಿ ತಂತ್ರಜ್ಞಾನದ ದಿಗ್ಗಜ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಪತ್ನಿ ಸುಧಾ ಮೂರ್ತಿ ಮೊದಲ ಬಾರಿಗೆ ಚಲನಚಿತ್ರವೊಂದರಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ.
ಅನಂತ್ ನಾಗ್, ಪವಿತ್ರಾ ಲೋಕೇಶ್ ಮತ್ತು ಪ್ರಕಾಶ್ ರೈ ನಟಿಸುತ್ತಿದ್ದು, ಈಗಾಗಲೇ ಚಿತ್ರೀಕರಣ ಗೊಳ್ಳುತ್ತಿರುವ ಕನ್ನಡ ಸಿನಿಮಾ `ಪ್ರಾರ್ಥನೆ'ಯಲ್ಲಿ ಪಾತ್ರವೊಂದನ್ನು ನಿರ್ವಹಿಸಲು ಸುಧಾ ಮೂರ್ತಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಚಿತ್ರವನ್ನು ಹಿರಿಯ ಪತ್ರಕರ್ತ ಕೆ.ಸದಾಶಿವ್ ಶೆಣೈರವರ ಚೊಚ್ಚಲ ನಿರ್ದೇಶನದ ಸಿನಿಮಾ ವಾಗಿದ್ದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವ ಅಗತ್ಯತೆಯ ಕಥೆಯನ್ನಾಧರಿಸಿದೆ.
ಈಗಾಗಲೇ ಕೆಲವು ಧಾರಾವಾಹಿಗಳಲ್ಲಿ ನಟಿಸಿರುವ ಸುಧಾ ಈ ಪಾತ್ರವನ್ನು ನಿಭಾಯಿಸಲು ಹೆಚ್ಚು ಉತ್ಸುಕರಾಗಿರುವುದಾಗಿಯೂ, ಆದರೆ ಯಾವುದೇ ಭಯವಿಲ್ಲ ಎಂದು ತಿಳಿಸಿದ್ದಾರೆ.
`ನನಗೆ ಸಂಗೀತ ಮತ್ತು ಸಿನಿಮಾದಲ್ಲಿ ಹೆಚ್ಚು ಆಸಕ್ತಿಯಿದೆ. ಈ ವಯಸ್ಸಿನಲ್ಲಿ ಸಿನಿಮಾದಲ್ಲಿ ನಟಿಸುವ ಇರಾದೆ ಇರಲಿಲ್ಲ. ಆದ್ದರಿಂದ ಬಣ್ಣ ಹಚ್ಚಿಕೊಳ್ಳದೇ ಅಭಿನಯಿಸುವಂತಹ ಪಾತ್ರವನ್ನು ಕೊಡಲು ಶೆಣೈಗೆ ವಿನಂತಿಸಿಕೊಂಡಿದ್ದೇನೆ', ಎಂದು ಸುದ್ದಿ ಸಂಸ್ಥೆಗೆ ಸುಧಾ ತಿಳಿಸಿದ್ದಾರೆ.