'ರಾಜಕೀಯ ಪ್ರವೇಶಕ್ಕೆ ಮಹಿಳೆಯರಿಗೆ ತರಬೇತಿ ಬೇಕು.....' : ವಿಶೇಷ ಸ೦ದರ್ಶನದಲ್ಲಿ ಮ೦ಜುಳಾ ನಾಯ್ಡು |
ಪ್ರಕಟಿಸಿದ ದಿನಾಂಕ : 2010-03-13
ಸಂದರ್ಶನ: ಸುಚೇತನಾ ನಾಯ್ಕ
ರಾಜ್ಯ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆಯಾಗಿ ಮಂಜುಳಾ ನಾಯ್ಡು ಅವರು ಅಂತರ ರಾಷ್ಟ್ರೀಯ ಮಹಿಳಾ ದಿನದಂದು (ಮಾರ್ಚ್ 8) ಅಧಿಕಾರ ಸ್ವೀಕರಿಸಿದ್ದಾರೆ. ಬಿ.ಕಾಂ ಪದವಿ ಜೊತೆಗೆ ಕಾನೂನು, ಎಂ.ಬಿ.ಎ ಹಾಗೂ ಅರ್ಥಶಾಸ್ತ್ರದಲ್ಲಿ ಎಂ.ಎ ಪದವಿಗಳನ್ನೂ ಪಡೆದಿರುವ ಮಂಜುಳಾ, ‘ಭೂಮಿಕಾ’ ಜೊತೆ ತಮ್ಮ ಅನುಭವ ಹಂಚಿಕೊಂಡದ್ದು ಹೀಗೆ..
* ಹೊಸ ಹುದ್ದೆಯನ್ನು ಅಲಂಕರಿಸಿದ್ದೀರಿ, ಹೇಗನ್ನಿಸ್ತಾ ಇದೆ..
ತುಂಬಾ ಸಂತಸ ಆಗಿದೆ ಎನ್ನೋದಕ್ಕಿಂತ ಹೆಚ್ಚಾಗಿ, ರಾಜ್ಯದಲ್ಲಿನ ಬಹಳ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ. ಮಾಡಬೇಕಿರುವ ಸುಧಾರಣೆಗಳ ಪಟ್ಟಿ ನನ್ನ ಕಣ್ಣ ಮುಂದಿದೆ ಎನ್ನಬೇಕು. ಈ ಹಿಂದೆ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ, ಆಂಧ್ರಪ್ರದೇಶ, ಪಾಂಡಿಚೇರಿ, ಕೇರಳ, ಛತ್ತೀಸಗಡ್‌ದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಆದಕ್ಕಿಂತ ಹೆಚ್ಚಿನ ಸಂತಸ ಈ ಹುದ್ದೆ ದೊರಕಿಸಿಕೊಟ್ಟಿದೆ.
* ರಾಜಕೀಯ ಕ್ಷೇತ್ರವೆಂದರೆ ಪುರುಷರಿಗೆ ಮೀಸಲು ಎನ್ನುವಂತಹ ಕಾಲದಲ್ಲಿ, ನೀವು ರಾಜಕೀಯ ಪ್ರವೇಶಿಸಿದ್ದು ಹೇಗೆ?
ಅದಕ್ಕೆಲ್ಲ ಕಾರಣ, ನನ್ನ ತಂದೆ ರಂಗಸ್ವಾಮಿ ನಾಯ್ಡು. ದೇವರಾಜು ಅರಸು ಅವರು ಮುಖ್ಯ ಮಂತ್ರಿ ಆಗಿದ್ದ ಕಾಲದಲ್ಲಿ ನನ್ನ ತಂದೆ ಬೆಂಗಳೂರಿನ ಶಾಂತಿನಗರ ಬ್ಲಾಕ್ ಅಧ್ಯಕ್ಷರಾಗಿದ್ದರು. ಆಗಿನ್ನೂ ನನಗೆ 17 ವರ್ಷ ವಯಸ್ಸು. ಕಾಲೇಜಿನ ದಿನಗಳಲ್ಲೇ ವಿದ್ಯಾರ್ಥಿ ಒಕ್ಕೂಟದ ನಾಯಕಿ ಕೂಡ ಆಗಿದ್ದೆ. ನನ್ನ ತಂದೆಗೆ ಮಕ್ಕಳನ್ನು ರಾಜಕೀಯ ಕ್ಷೇತ್ರದಲ್ಲಿಯೇ ಮುಂದುವರಿಸಬೇಕೆನ್ನುವ ಆಸೆ. ಅದಕ್ಕೆ ತಕ್ಕಂತೆ ರಾಜೀವ್‌ಗಾಂಧಿ ಪ್ರಧಾನಿ ಆದಾಗ ಹೆಚ್ಚು ಹೆಚ್ಚು ಹೆಣ್ಣುಮಕ್ಕಳು ರಾಜ ಕೀಯ ಬನ್ನಿ ಅಂತ ಕರೆ ಕೊಟ್ರು. ಇದನ್ನೇ ಉಪಯೋಗಿಸಿಕೊಂಡ ನನ್ನ ತಂದೆ ನನ್ನನ್ನು ಯುವ ಕಾಂಗ್ರೆಸ್‌ಗೆ ಸೇರಿಸಿದ್ರು.
* ‘ಮಹಿಳೆ ಮತ್ತು ರಾಜಕೀಯ’ ಅಂದಿನ ಹಾಗೂ ಇಂದಿನ ಪರಿಸ್ಥಿತಿ ಹೇಗಿದೆ..?
ಅಂದು ನೀವೆ ಹೇಳಿದಂತೆ ರಾಜಕೀಯ ಎನ್ನೋದು ಪುರುಷರಿಗೆ ಮೀಸಲು ಎಂಬ ವಾದ ಇತ್ತು. ಆದರೆ ಇಂದಿನ ಪರಿಸ್ಥಿತಿ ನೋಡಿದ್ರೆ ತುಂಬಾ ಅಚ್ಚರಿ ಹಾಗೂ ಖುಷಿ ಆಗುತ್ತೆ. ಬಹಳಷ್ಟು ಮಹಿಳೆ ಯರು ರಾಜಕೀಯಕ್ಕೆ ಧುಮುಕಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಯನ್ನೇ ತೆಗೆದುಕೊಳ್ಳಿ. ಸುಮಾರು 67 ಮಂದಿ ಮಹಿಳೆಯರು ಸ್ಪರ್ಧಿಸಲು ಮುಂದೆ ಬಂದಿದ್ದಾರೆ.
* ಅಧ್ಯಕ್ಷೆಯಾಗಿ ನಿಮ್ಮ ಮುಂದಿರುವ ಗುರಿ...?
ಮಾಡಬೇಕಾಗಿದ್ದು ಸಾಕಷ್ಟು ಇದೆ. ನನ್ನ ಮೊದಲ ಆದ್ಯತೆ ಮಹಿಳೆಯರಿಗೆ ಶಿಕ್ಷಣ. ಸದ್ಯ ಬಿ.ಬಿ. ಎಂ.ಪಿ ಚುನಾವಣೆ ನನ್ನ ಮುಂದಿದೆ. ಅದು ಮುಗಿದ ಮೇಲೆ ರಾಜ್ಯದಾದ್ಯಂತ ಪ್ರಯಾಣ ಬೆಳೆ ಸುತ್ತೇನೆ. ಪ್ರತಿಯೊಂದು ಜಿಲ್ಲೆಗಳಿಗೆ ತೆರಳಿ ಅಲ್ಲಿಯ ಜನರ ಅದರಲ್ಲೂ ಮುಖ್ಯವಾಗಿ ಮಹಿಳೆಯರ ಸಮಸ್ಯೆಗೆ ಸ್ಪಂದಿಸುತ್ತೇನೆ. ಗ್ರಾಮೀಣ ಮಹಿಳೆಯರಿಗೆ ಮೊದಲು ಬೇಕಾದದ್ದು ಆರ್ಥಿಕ ಸ್ವಾವ ಲಂಬನೆ.
ಅದಕ್ಕಾಗಿ ಎಲ್ಲ ವಯೋಮಿತಿ ಹೆಣ್ಣುಮಕ್ಕಳಿಗೆ ಉದ್ಯೋಗ ದೊರಕುವಂತಹ ಕಾರ್ಯಕ್ರಮ ರೂಪಿಸುತ್ತೇನೆ. ಇದರ ಜೊತೆಗೆ ಹೆಚ್ಚು ಹೆಚ್ಚು ಹೆಣ್ಣುಮಕ್ಕಳು ರಾಜಕೀಯಕ್ಕೆ ಪ್ರವೇಶ ಮಾಡುವ ನಿಟ್ಟಿನಲ್ಲಿ ಸಾಕಷ್ಟು ತರಬೇತಿ ನೀಡುವ ಯೋಜನೆ ಹಮ್ಮಿಕೊಳ್ಳುತ್ತೇನೆ. ಗ್ರಾಮೀಣ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ, ಮಕ್ಕಳು ಶಾಲೆಗೆ ಸೇರುವ ಹಾಗೆ ಕಾರ್ಯಕ್ರಮ ರೂಪಿಸಬೇಕಾಗಿದೆ.
ಯುಪಿಎ ಸರ್ಕಾರ ರೈತ ಮಹಿಳೆಯರು, ಗ್ರಾಮೀಣ ಜನತೆ ಹಾಗೂ ಅಸಂಘಟಿತ ವರ್ಗದವರಿ ಗಾಗಿ ಹಲವಾರು ಯೋಜನೆ ರೂಪಿಸಿದೆ. ಆದರೆ ಇವ್ಯಾವುವೂ ಅವರನ್ನು ತಲುಪುತ್ತಾ ಇಲ್ಲ. ಆ ಬಗ್ಗೆ ಅರಿವು ಮೂಡಿಸುವ ಜವಾಬ್ದಾರಿ ಕೂಡ ನಮ್ಮ ಮೇಲಿದೆ. ಇದಕ್ಕಾಗಿ ರಾಜಕೀಯ ಪ್ರವೇಶಕ್ಕೆ ಮಹಿಳೆಯರಿಗೆ ಮುಕ್ತ ಆಹ್ವಾನ ನೀಡುತ್ತೇನೆ.
* ರಾಜಕಾರಣಿ ಹಾಗೂ ಭರವಸೆ ಎರಡು ಪದಗಳು ಒಟ್ಟಿಗೇ ಇರುತ್ತವೆ ಎಂಬ ಭಾವನೆ ಎಲ್ಲರಲ್ಲೂ ಇದೆ. ನಿಮ್ಮ ಭರವಸೆಗಳು ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತೆ ಎನಿಸುತ್ತೆ..?
ನನ್ನದು ಬರಿಯ ಭರವಸೆ ಅಲ್ಲ. ಇದನ್ನು ನಾನು ಈ ಹಿಂದೆಯೇ ಸಾಬೀತು ಮಾಡಿ ತೋರಿಸಿ ರುವ ಹೆಮ್ಮೆ ಇದೆ. 1992-93ನೇ ಅವಧಿಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಉಪ ಮೇಯರ್ ಆಗಿ ಕೆಲಸ ನಿರ್ವಹಿದ್ದೆ. ಆಗಿನ್ನೂ ಸ್ತ್ರೀಶಕ್ತಿ ಸಂಘಟನೆಗಳು ಅಷ್ಟಾಗಿ ಇರಲಿಲ್ಲ. ಆ ವೇಳೆ ಮಹಿಳಾ ಕಲ್ಯಾಣ ಇಲಾಖೆ ಎಂದು ಸ್ಥಾಪನೆ ಮಾಡಿದ್ವಿ. ಐದು ಕಂಪ್ಯೂಟರ್, ಟೇಲರಿಂಗ್, ಎಲೆ ಕ್ಟ್ರಿಕಲ್ ತರಬೇತಿ, ಆಟೋರಿಕ್ಷಾ ತರಬೇತಿ ಇತ್ಯಾದಿ ತರಬೇತಿ ಕೇಂದ್ರಗಳನ್ನು ಮಹಿಳೆಯರಿಗಾ ಗಿಯೇ ತೆರೆಯಲಾಯಿತು. ಬೆಂಗಳೂರು ಒಂದರಲ್ಲಿಯೇ 400 ಕೇಂದ್ರ ತೆರೆದ ಹೆಗ್ಗಳಿಕೆ ಅದು. ಇಂದು ಈ ಇಲಾಖೆ ಬೃಹದಾಕಾರವಾಗಿ ಬೆಳೆದಿದೆ.
ಅದಾದ ಮೇಲೆ ಬಾಲಭವನದ ಅಧ್ಯಕ್ಷೆಯಾಗಿ (2000-2003) ನನ್ನ ಅಧಿಕಾರಾವಧಿಯಲ್ಲಿ ಸಾಕಷ್ಟು ಬೆಳವಣಿಗೆ ಆಗಿದೆ. ನಾನು ಅಧಿಕಾರ ಸ್ವೀಕರಿಸಿದಾಗ, ಬಾಲಭವನಕ್ಕೆ ಸಿಗುತ್ತಿದ್ದ ಅನುದಾನ 20 ಲಕ್ಷ ರೂಪಾಯಿ ಮಾತ್ರ. ಆದರೆ ಅಲ್ಲಿ ಈಗ ಸುಮಾರು 20ಕೋಟಿ ರೂಪಾಯಿ ಆಸ್ತಿ ಇರಬಹುದು. ಆ ಮಟ್ಟಕ್ಕೆ ಅದನ್ನು ಇತರರ ಸಹಾಯದೊಂದಿಗೆ ಬೆಳೆಸಿದ್ದೇನೆ. 10 ಎಕರೆ ಜಮೀನು ಪಡೆದು ಮಕ್ಕಳಿಗೆ ವಿವಿಧ ತರಬೇತಿ ಕೂಡ ಅದೇ ಪ್ರಥಮ ಬಾರಿಗೆ ನೀಡಲಾಯ್ತು. ತಾಲ್ಲೂಕು ಮಟ್ಟದಲ್ಲಿಯೂ ಸುಮಾರು 38 ಬಾಲಭವನ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದೆ.
* ಮಹಿಳಾ ಮೀಸಲು ಮಸೂದೆ ಅಂಗೀಕಾರಗೊಂಡಿದೆ. ಇದರ ಬಗ್ಗೆ ನಿಮ್ಮ ಅನಿಸಿಕೆ.
ಹೆಣ್ಣನ್ನು ನಾವು ಜ್ಯೋತಿಗೆ ಹೋಲಿಸ್ತೇವೆ. ಇಂದು ಆ ಜ್ಯೋತಿ ಎಲ್ಲ ಕ್ಷೇತ್ರದಲ್ಲಿಯೂ ತನ್ನ ಬೆಳಕನ್ನು ಚೆಲ್ಲಲು ಈ ಮಸೂದೆ ಅವಕಾಶ ಕಲ್ಪಿಸಿದೆ ಎನ್ನಬಹುದು. ಹೆಣ್ಣಿನಲ್ಲಿ ಎಷ್ಟೇ ಪ್ರತಿಭೆ ಇದ್ದರೂ, ಆಕೆ ಎಲ್ಲ ಕ್ಷೇತ್ರದಲ್ಲಿಯೂ ಮುಂದೆ ಬಂದರೂ ಪುರುಷ ಸಮಾಜ ಎನ್ನುವ ದೃಷ್ಟಿಕೋನ ಇನ್ನೂ ಬದಲಾಗಿಲ್ಲ. ಈ ನಿಟ್ಟಿನಲ್ಲಿ ಸೋನಿಯಾಗಾಂಧಿಯ ನೇತೃತ್ವದಲ್ಲಿ ಈ ಮಸೂದೆ ಅಂಗೀಕಾರಗೊಂಡದ್ದು, ಮಹಿಳೆಯರಿಗೆ ಉಸಿರು ತುಂಬಿದಂತಾಗಿದೆ.
* ಇಷ್ಟು ದೊಡ್ಡ ಹುದ್ದೆಯ ಜೊತೆ ಗೃಹಿಣಿ, ತಾಯಿಯ ಪಾತ್ರವನ್ನೂ ನೀವು ನಿಭಾಯಿಸು ವುದು ಹೇಗೆ..?
ಮಹಿಳೆ ಎಂದರೇನೆ ಎಲ್ಲವನ್ನೂ ನಿಭಾಯಿಸುವವಳು ಎಂದು ಅರ್ಥ. ಇದರ ಜೊತೆಗೆ ಸಾಫ್ಟ್ ವೇರ್ ಉದ್ಯೋಗಿಯಾಗಿರುವ ಪತಿ ಕಮಲಾಪತಿ. ಪಿಯುಸಿ ಓದುತ್ತಿರುವ ಮಗ ಹಾಗೂ ನಮ್ಮ ಜೊತೆಗೆ ಇರುವ ಅಮ್ಮ, ತಮ್ಮ ಹೀಗೆ ಎಲ್ಲರ ಸಹಕಾರವೂ ನನಗಿದೆ. ರಾಜ್ಯದ ಜನತೆಯ ಜವಾ ಬ್ದಾರಿ ಹೆಚ್ಚು ಇದೆ. ಸಂಸಾರದ ಜೊತೆಗೆ ರಾಜಕೀಯವನ್ನು ಸಮದೂಗಿಸಿಕೊಂಡು ಹೋಗುವ ಶಕ್ತಿಯೂ ನನಗಿದೆ.
ವರದಿಯ ವಿವರಗಳು |
 |
ಕೃಪೆ : ಪ್ರಜಾವಾಣಿ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-13 00:00:00
|
|
|