ಹೊಸಪೇಟೆ, ಮಾ.೧೨: ಹಂಪಿ ಕನ್ನಡ ವಿಶ್ವವಿದ್ಯಾಲಯದ ೮೦ ಎಕರೆ ಭೂಮಿಯನ್ನು ಟ್ರಸ್ಟ್‌ಗೆ ಪರಭಾರೆ ಮಾಡಿರುವುದನ್ನು ಸರಕಾರ ಕೈ ಬಿಟ್ಟಿರುವುದನ್ನು ಸ್ವಾಗತಿಸಿ, ಕನ್ನಡ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯು ರೋಟರಿ ವೃತ್ತದಲ್ಲಿ ಶುಕ್ರವಾರ ಪಟಾಕಿ ಸಿಡಿಸಿ, ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿತು.
ಈ ಸಂದರ್ಭದಲ್ಲಿ ಸಂಚಾಲಕ ಪರುಶುರಾಮ ಕಲಾಲ್ ಮಾತನಾಡಿ, ಹೋರಾಟಕ್ಕೆ ಸಂದ ಮೊದಲ ಹಂತದ ಜಯ ಇದಾಗಿದೆ. ಹೋರಾಟ ಇಲ್ಲಿಗೆ ನಿಂತಿಲ್ಲ. ಕನ್ನಡ ವಿವಿಗೆ ಹೆಚ್ಚುವರಿ ಯಾಗಿ ೫೦೦ ಎಕರೆ ಭೂಮಿ ನೀಡಬೇಕು, ಟ್ರಸ್ಟ್ ಜನವಿರೋಧಿ ಯಾಗಿದೆ. ಇದು ಈ ಭಾಗದ ಯಾವ ಜನರನ್ನು ಒಳಗೊಂಡಿಲ್ಲ. ಉದ್ಯಮಿ ಗಳು ಹಾಗೂ ರಾಜಕಾರಣಿಗಳೇ ತುಂಬಿರುವ ಟ್ರಸ್ಟ್ ಹಂಪಿಯನ್ನು ಶ್ಮಶಾನ ಮಾಡುವ ಉದ್ದೇಶ ಹೊಂದಿದೆ. ಟ್ರಸ್ಟ್ ವಿಸರ್ಜನೆ ಹೊಂದಬೇಕು. ಅದೇ ರೀತಿ ಫಲವತ್ತಾದ ಭೂಮಿಯನ್ನು ಇದಕ್ಕಾಗಿ ಸ್ವಾಧೀನ ಪಡೆಸಿಕೊಂಡರೆ ಹೋರಾಟ ಸಮಿತಿಯು ಅದರ ವಿರುದ್ಧವೂ ಹೋರಾಟ ನಡೆಸಲಾಗುವುದು ಎಂದರು. ಸಿರಿವಾರ, ಚಾಗನೂರು ರೈತರ ಫಲವತ್ತಾದ ಭೂಮಿಯಲ್ಲಿ ವಿಮಾನ ನಿಲ್ದಾಣ ಯೋಜನೆಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು. ನೂರಾರು ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.