ಬಂಟ್ವಾಳ ನಗರಕ್ಕೆ ಕುಡಿಯುವ ನೀರು: ಒದಗಿಸಲು ೪೨.೫೦ ಕೋಟಿ ರೂ.: ಸಚಿವ ಸುರೇಶ್ ಕುಮಾರ್
ಪ್ರಕಟಿಸಿದ ದಿನಾಂಕ : 2010-03-13
ಬೆಂಗಳೂರು, ಮಾ.೧೨: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರಕ್ಕೆ ಎರಡನೆ ಹಂತದ ಕುಡಿಯುವ ನೀರು ಒದಗಿಸಲು ೪೨.೫೦ ಕೋಟಿ ರೂ.ಗಳ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಎಸ್.ಸುರೇಶ್‌ಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ಶಾಸಕ ಹಿರಿಯ ರಮಾನಾಥ ರೈ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅವರು, ಪ್ರಸ್ತುತ ಬಂಟ್ವಾಳ ನಗರದಲ್ಲಿ ೪೨ ಸಾವಿರ ಮಂದಿ ವಾಸವಾಗಿದ್ದಾರೆ. ಪ್ರತಿನಿತ್ಯ ೩.೭೫ ಎಲ್‌ಎಂಡಿ ಬೇಡಿಕೆ ಇದ್ದು, ೩.೬೮ ಎಲ್‌ಎಂಡಿ ನೀರು ಪೂರೈಸಲಾಗುತ್ತಿದೆ. ಆದರೆ, ಬೇಸಿಗೆಯ ಹಿನ್ನೆಲೆಯಲ್ಲಿ ತೆರೆದ ಬಾವಿಗಳಲ್ಲಿ ಅಂತರ್ಜಲ ಕುಸಿದಿದ್ದು, ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ ಎಂದು ಹೇಳಿದರು.
ಬಂಟ್ವಾಳ ಪಟ್ಟಣಕ್ಕೆ ಹಾಲಿ ಇರುವ ನೀರು ಸರಬರಾಜು ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ೨೫ ಕೋಟಿ ರೂ. ಅಂದಾಜು ಪಟ್ಟಿಯನ್ನು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಯಾರಿಸಿ ಪುರಸಭೆಗೆ ಅನುಮೋದನೆಗಾಗಿ ಸಲ್ಲಿಸಿದೆ.
ಈ ಯೋಜನೆಯ ಸರ್ವೆ ಕಾರ್ಯಕ್ಕೆ ಖಾಸಗಿ ಸಂಸ್ಥೆಯೊಂದಕ್ಕೆ ವಹಿಸಲಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.