| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಪಡಿತರ ಚೀಟಿಯ ಅವ್ಯವಸ್ಥೆ: ಬಾವಿಗಿಳಿದು ಪ್ರತಿಪಕ್ಷ ಶಾಸಕರ ಧರಣಿ |
ಪ್ರಕಟಿಸಿದ ದಿನಾಂಕ : 2010-03-13
ಬೆಂಗಳೂರು, ಮಾ.೧೨: ಪಡಿತರ ಚೀಟಿಯಲ್ಲಿನ ಅವ್ಯವಸ್ಥೆಗಳು ವಿಧಾನಸಭೆಯಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿ ಕೋಲಾಹಲ ಸೃಷ್ಟಿಸಿತಲ್ಲದೆ, ಪ್ರತಿಪಕ್ಷದ ಶಾಸಕರು ಸಭಾಧ್ಯಕ್ಷರ ಮುಂದಿನ ಬಾವಿಗಿಳಿದು ಧರಣಿ ನಡೆಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
ಪಡಿತರ ವ್ಯವಸ್ಥೆಯಲ್ಲಿನ ಆಹಾರ ಪದಾರ್ಥ ಹಂಚಿಕೆ ವಿಷಯವಾಗಿ ಶಾಸಕ ಎನ್.ಎ.ಹಾರಿಸ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಎಚ್.ಹಾಲಪ್ಪ, ಪಡಿತರ ಚೀಟಿಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡುವುದಾಗಿ ಹೇಳಿದರು.
ಇದಕ್ಕೂ ಮೊದಲು ನಡೆದ ಚರ್ಚೆಯಲ್ಲಿ ಶಾಸಕರು ಪಕ್ಷಾತೀತವಾಗಿ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಅವ್ಯವಸ್ಥೆಯಾಗಿರುವುದನ್ನು ಒಪ್ಪಿಕೊಂಡ ಸಚಿವರು, ಪಡಿತರ ಚೀಟಿ ದೊರೆಯದ ಅರ್ಹರಿಗಾಗಿ ೧೨೩ ತಾಲೂಕುಗಳಲ್ಲಿ ಕಚೇರಿಗಳನ್ನು ತೆರೆಯಲಾಗಿದೆ. ಬಡವರನ್ನು ಗುರುತಿಸಿ ಬಿಪಿಎಲ್ ಕಾರ್ಡ್ ನೀಡಲಾಗುತ್ತಿದೆ. ಕೆಲವೆಡೆ ಶ್ರೀಮಂತರು ಕಾರ್ಡ್‌ಗಳನ್ನು ಪಡೆದಿದ್ದಾರೆ. ಎಲ್ಲ ದೋಷಗಳನ್ನು ಸರಿಪಡಿಸಲು ಜಿಲ್ಲಾಧಿಕಾರಿಗೆ ಅಧಿಕಾರ ನೀಡಲಾಗುವುದು ಎಂದರು.
ಅನರ್ಹರನ್ನು ಗುರುತಿಸಿ ಪಡಿತರ ಚೀಟಿಯನ್ನು ರದ್ದು ಪಡಿಸುವ ಕೆಲಸ ಪ್ರಗತಿಯಲ್ಲಿದೆ. ಮುಕ್ತ ಮಾರುಕಟ್ಟೆಯಲ್ಲಿನ ಬೆಲೆಯನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರಕಾರದ ಸೂಚನೆಯಂತೆ ಈಗಾಗಲೇ ಸ್ಥಾಪಿಸಿರುವ ಅಕ್ಕಿ ಸಂತೆಯನ್ನು ಮುಂದು ವರಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಅಂತ್ಯೋದಯ ಅನ್ನ ಯೋಜನೆಯಡಿ ೩ ರೂಪಾಯಿಗೆ ೨೯ ಕೆ.ಜಿ. ಅಕ್ಕಿ, ೨ ರೂ.ಗೆ ೬ ಕೆ.ಜಿ. ಗೋಧಿ, ಬಿಪಿಎಲ್ ಕಾರ್ಡ್‌ಗಳಿಗೆ ೩ ರೂ.ನಂತೆ ೨೦ ಕೆ.ಜಿ.ಅಕ್ಕಿ, ಎಪಿಎಲ್‌ಗೆ ೧೬ ರೂ.ಗೆ ೧೦ ಕೆ.ಜಿ. ಅಕ್ಕಿ, ೧೧ ರೂ.ದರದಲ್ಲಿ ೫ ಕೆ.ಜಿ. ಗೋಧಿ ನೀಡಲಾಗುತ್ತಿದೆ ಎಂದು ಹೇಳಿದರು.
ಚರ್ಚೆಯಲ್ಲಿ ಭಾಗವಹಿಸಿದ ಶಾಸಕರು ಪಡಿತರ ಚೀಟಿಯಲ್ಲಿ ಹೆಸರುಗಳ ಅದಲು-ಬದಲು ಅಪಭ್ರಂಶಕ್ಕೆ ಕಾರಣವಾಗಿದೆ. ಹೆಂಡತಿ ಜಾಗದಲ್ಲಿ, ಮಗಳ ಹೆಸರು ನಮೂದಿಸಲಾಗಿದೆ. ಇಂತಹ ಅವಗಢಗಳಿಂದ ತೀವ್ರ ಗೊಂದಲಗಳಾಗಿವೆ ಎಂದು ಕಿಡಿಕಾರಿದರು. ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಶಾಸಕ ಸಿ.ಟಿ.ರವಿ, ಕಳ್ಳರ ಕೈಗೆ ಬೀಗಕೊಟ್ಟು ವ್ಯವಸ್ಥೆ ಸರಿ ಮಾಡಿ ಎಂದರೆ ಹೇಗೆ. ನ್ಯಾಯಬೆಲೆ ಅಂಗಡಿ ಮಾಲಕರಿಗೆ, ಅನರ್ಹರಿಗೆ ದೊರೆತಿರುವ ಕಾರ್ಡ್ ಪತ್ತೆ ಮಾಡುವ ಅಧಿಕಾರ ನೀಡಲಾಗಿದೆ. ಹೀಗಾದರೆ ಅವ್ಯವಸ್ಥೆ ಸರಿಯಾಗುವುದು ಹೇಗೆ ಎಂದು ಹೇಳಿದರು. ಬಿಜೆಪಿ ಶಾಸಕರಾದ ಅಪ್ಪಚ್ಚು ರಂಜನ್, ಸೀಮಾ ಮಸೂತಿ, ರಘುಪತಿ ಭಟ್, ಕಾಂಗ್ರೆಸ್‌ನ ಶಾಸಕರಾದ ಟಿ.ಬಿ.ಜಯಚಂದ್ರ, ಅಭಯ್‌ಚಂದ್ರ ಜೈನ್, ಎ.ಎಸ್.ಪಾಟೀಲ್, ಜೆಡಿಎಸ್‌ನ ಎಚ್.ಡಿ.ರೇವಣ್ಣ ಮತ್ತಿತರು ಚರ್ಚೆಯಲ್ಲಿ ಭಾಗವಹಿಸಿದ್ದರು.
ವ್ಯಾಪಕ ಚರ್ಚೆಯ ನಂತರವೂ ಸ್ಪಷ್ಟ ಉತ್ತರ ದೊರೆತಿಲ್ಲ ಎಂದು ಕಾಂಗ್ರೆಸ್‌ನ ಶಾಸಕರಾದ ಎ.ಎಸ್.ಪಾಟೀಲ್, ಕಿಮ್ಮನ್ನೆ ರತ್ನಾಕರ್, ಎನ್.ಎ. ಹಾರಿಸ್ ಸಭಾಧ್ಯಕ್ಷರ ಮುಂದಿನ ಭಾವಿಗಿಳಿದು ಧರಣಿ ನಡೆಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಹೆಚ್ಚಿನ ಚರ್ಚೆಗೆ ಅವಕಾಶ ಇಲ್ಲದೆ ಇರುವುದರಿಂದ ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡುವಂತೆ ಸಚಿವ ಸುರೇಶ್ ಕುಮಾರ್ ಸಭಾಧ್ಯಕ್ಷರಿಗೆ ಮನವಿ ಮಾಡಿದರು.
ಅದರಂತೆ ಚರ್ಚೆಗೆ ಅವಕಾಶ ಕಲ್ಪಿಸುವುದಾಗಿ ಸಭಾಧ್ಯಕ್ಷರು ಭರವಸೆ ನೀಡಿದ್ದರಿಂದ ಧರಣಿಯನ್ನು ಶಾಸಕರು ವಾಪಸ್ ಪಡೆದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-13 00:00:00
|
|
|
|
|