| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ವೈಯಕ್ತಿಕ ಪ್ರತಿಷ್ಠೆಗೆ ಕಲಾಪ ಬಲಿ: ಸದನ ಸಮಿತಿಗೆ ಆಗ್ರಹಿಸಿ ವಿಪಕ್ಷ ಸದಸ್ಯರಿಂದ ಸಭಾತ್ಯಾಗ |
ಪ್ರಕಟಿಸಿದ ದಿನಾಂಕ : 2010-03-13
ಬೆಂಗಳೂರು, ಮಾ.೧೨: ವಿರೋಧ ಪಕ್ಷದ ಸದಸ್ಯರು ಹಾಗೂ ಸಚಿವ ಜನಾರ್ಧನರೆಡ್ಡಿ ಅವರ ವೈಯಕ್ತಿಕ ಪ್ರತಿಷ್ಠೆಯಿಂದ ವಿಧಾನಪರಿಷತ್ ಸದನ ಕಲಾಪ ನಡೆಯದೆ ಮಾ.೧೭ಕ್ಕೆ ಮುಂದೂಡಿದ ಪ್ರಸಂಗ ಶುಕ್ರವಾರ ನಡೆಯಿತು.
ಬಳ್ಳಾರಿಯಲ್ಲಿ ಸ್ಥಾಪಿಸಲು ಉದ್ದೇಶಿರುವ ವಿಮಾನ ನಿಲ್ದಾಣಕ್ಕೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಅಲ್ಲಿನ ರೈತರ ಒಪ್ಪಿಗೆ ಇದೆಯೆ ಎಂದು ಶನಿವಾರ ನಡೆದ ಕಲಾಪದಲ್ಲಿ ಕಾಂಗ್ರೆಸ್‌ನ ಸದಸ್ಯ ಕೆ.ಸಿ.ಕೊಂಡಯ್ಯ ಸರಕಾರಕ್ಕೆ ಪ್ರಶ್ನೆ ಕೇಳಿದರು.
ಕೊಂಡಯ್ಯ ಪ್ರಶ್ನೆಗೆ ಉತ್ತರಿಸಿದ ಸಚಿವ ಜನಾರ್ಧನರೆಡ್ಡಿ, ಭೂಮಿ ಸ್ವಾಧೀನಪಡಿಸಿಕೊಳ್ಳಲು ರೈತರು ಒಪ್ಪಿಗೆ ಸೂಚಿಸಿದ್ದಾರೆ. ರೈತರ ಸಮ್ಮತಿ ಇಲ್ಲದಿದ್ದರೆ ಆ ಜಮೀನಿನಲ್ಲಿ ವಿಮಾನ ನಿಲ್ದಾಣ ಸ್ಥಾಪಿಸುವುದಿಲ್ಲ ಎಂದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಜೆಡಿಎಸ್ ಹಾಗೂ ಕಾಂಗ್ರೆಸ್ ಸದಸ್ಯರು, ರೈತರು ಜಮೀನು ಸ್ವಾಧೀನಪಡಿಸಿಕೊಳ್ಳುತ್ತಿರುವ ಸರಕಾರದ ಕ್ರಮವನ್ನು ಖಂಡಿಸಿ ನಿರಂತರವಾಗಿ ಪ್ರತಿಭಟನೆಗಳನ್ನು ನಡೆಸುತ್ತಲೆ ಇದ್ದಾರೆ. ಇದರಿಂದ ಆ ಜಮೀನು ಸ್ವಾಧೀನಕ್ಕೆ ರೈತರ ತೀವ್ರ ವಿರೋಧ ಇದೆ ಎಂದು ತಿಳಿಯುತ್ತಿದೆ. ಅಲ್ಲಿನ ರೈತರ ಭೂಮಿ ಸ್ವಾಧೀನಕ್ಕೆ ಒಪ್ಪಿಗೆ ಇದೆಯೆ ಎಂಬುದನ್ನು ಪರಿಶೀಲಿಸಲು ಸದನ ಸಮಿತಿಯನ್ನು ರಚಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದ್ದರು.
ಮಧ್ಯೆ ಪ್ರವೇಶಿಸಿದ ಸಭಾನಾಯಕ ವಿ.ಎಸ್.ಆಚಾರ್ಯ ಸದನ ಸಮಿತಿ ರಚಿಸುವ ವಿಚಾರ ಇದಲ್ಲ. ಹೀಗಾಗಿ ಸಮಿತಿ ರಚಿಸಲು ಸಾಧ್ಯವಿಲ್ಲ ಎಂದು ಉತ್ತರಿಸಿದ್ದರು.
ಆಚಾರ್ಯ ಅವರ ಹೇಳಿಕೆಯಿಂದ ಆಕ್ರೋಶಗೊಂಡ ವಿರೋಧ ಪಕ್ಷದ ಸದಸ್ಯರು, ಸದನ ಸಮಿತಿ ರಚಿಸಲೆಬೇಕೆಂದು ಪಟ್ಟು ಹಿಡಿದರು. ಅಲ್ಲದೆ ಧರಣಿ ನಡೆಸಿದರು. ಈ ಹಂತದಲ್ಲಿ ಕೊಂಡಯ್ಯ ವಿರುದ್ಧ ಸಚಿವ ಜನಾರ್ಧನರೆಡ್ಡಿ ವಾಗ್ಧಾಳಿ ನಡೆಸಿದರು. ಪರಿಸ್ಥಿತಿಯನ್ನು ನಿಯಂತ್ರಿಸಲಾಗದೆ ಸಭಾಪತಿ ರಣ್ಣ ಮತ್ತೀಕಟ್ಟಿ ಸದನ ಕಲಾಪವನ್ನು ಮುಂದೂಡಿದ್ದರು.
ಶುಕ್ರವಾರ ಸದನ ಕಲಾಪ ಪ್ರಾರಂಭವಾದಾಗಲೂ ವಿರೋಧ ಪಕ್ಷದ ಸದಸ್ಯರು ಧರಣಿಯನ್ನು ಮುಂದುವರೆಸಿದರು. ಅಲ್ಲದೆ ಜನಾರ್ಧನರೆಡ್ಡಿರನ್ನು ಸದನದಲ್ಲಿ ಕ್ಷಮೆಯಾಚಿಸುವಂತೆ ಒತ್ತಾಯಿಸಿದರು. ಧರಣಿ ಹಿಂಪಡೆಯುವಂತೆ ಸಭಾಪತಿ ರಣ್ಣ ಮತ್ತೀಕಟ್ಟಿ ಮನವಿ ಮಾಡಿದರೂ, ಹಿಂಪಡೆಯದ ಕಾರಣ ಸದನವನ್ನು ೧೦ನಿಮಿಷಗಳ ಕಾಲ ಮುಂದೂಡಿದರು.
ಸದನ ಮುಂದೂಡಿದ ನಂತರ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿ, ಸಂಧಾನ ಮಾಡಲು ಪ್ರಯತ್ನಿಸಿದರು. ಆದರೆ ಸಂಧಾನ ವಿಫಲವಾಯಿತು.
ಸದನ ಪ್ರಾರಂಭವಾದ ನಂತರ ಧರಣಿ ಮುಂದುವರೆಸಿದ ವಿಪಕ್ಷ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ರಣ್ಣಮತ್ತೀಕಟ್ಟಿ, ಧರಣಿಯನ್ನು ಹಿಂಪಡೆದು ಮುಂದಿನ ಕಲಾಪಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.
ಸಭಾನಾಯಕ ವಿ.ಎಸ್.ಆಚಾರ್ಯ ಮಾತನಾಡಿ, ಶನಿವಾರ ಪ್ರಾಸಂಗಿಕವಾಗಿ ನಡೆದ ತಪ್ಪಿಗೆ ಎಲ್ಲರಿಗೂ ವಿಷಾಧವಿದೆ. ಈ ಕುರಿತು ಜನಾರ್ಧನರೆಡ್ಡಿ ಮಾತನಾಡುವರು. ಎಲ್ಲ ರೈತರ ಒಪ್ಪಿಗೆ ಇದ್ದರೆ ಮಾತ್ರ ವಿಮಾನ ನಿಲ್ದಾಣ ಸ್ಥಾಪಿಸಲಾಗುವುದು ಎಂದು ಹೇಳಿದರಲ್ಲದೆ ಧರಣಿ ಹಿಂಪಡೆಯಬೇಕೆಂದು ಮನವಿ ಮಾಡಿದರು.
ವಿಧಾನಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ ಮಾತನಾಡಿ, ಜನಾರ್ಧನರೆಡ್ಡಿ ಹದ್ದುಮೀರಿ ವರ್ತಿಸಿದ್ದಾರೆ. ಸದನದ ಗೌರವಕ್ಕೆ ಚ್ಯುತಿ ತಂದಿದ್ದಾರೆ. ಆದ್ದರಿಂದ ಅವರು ಕ್ಷಮೆಯಾಚಿಸಲೆಬೇಕು. ಸದನ ಸಮಿತಿ ರಚಿಸಬೇಕು. ಅದುವರೆಗೂ ಧರಣಿ ಹಿಂಪಡೆಯುವುದಿಲ್ಲ ಎಂದರು.
ಮಧ್ಯೆಪ್ರವೇಶಿಸಿದ ಜನಾರ್ಧನರೆಡ್ಡಿ, ವಿರೋಧ ಪಕ್ಷದ ಸದಸ್ಯರು ಧರಣಿ ಹಿಂಪಡೆದು ಅವರ ಆಸನಗಳಿಗೆ ಹೋಗುವವರೆಗೂ ನಾನು ಮಾತನಾಡುವುದಿಲ್ಲ. ಅವರು ೧೦ದಿನ ಧರಣಿ ನಡೆಸಿದರೂ ಸರಿಯೆ, ನಾನು ಧರಣಿ ಹಿಂಪಡೆಯದ ಹೊರತು ಯಾವುದೆ ಕಾರಣಕ್ಕೂ ಮಾತನಾಡುವುದಿಲ್ಲ ಎಂದು ನುಡಿದರು.
ಜನಾರ್ಧನರೆಡ್ಡಿ ಹೇಳಿಕೆಯಿಂದ ಮತ್ತೊಮ್ಮೆ ವಿರೋಧ ಪಕ್ಷದ ಸದಸ್ಯರು ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸಭಾಪತಿ ರಣ್ಣ ಮತ್ತೀಕಟ್ಟಿ ಮತ್ತೊಮ್ಮೆ ಸದನ ಕಲಾಪವನ್ನು ೧೦ ನಿಮಿಷ ಕಾಲ ಮುಂದೂಡಿ, ವಿ.ಎಸ್.ಆಚಾರ್ಯ ಹಾಗೂ ಪ್ರತಿಪಕ್ಷದ ಸದಸ್ಯರೊಂದಿಗೆ ತಮ್ಮ ಕೊಠಡಿಯಲ್ಲಿ ಸಭೆ ನಡೆಸಿದರು.
ಕಲಾಪ ಪ್ರಾರಂಭಗೊಂಡ ನಂತರ ವಿರೋಧ ಪಕ್ಷದ ಸದಸ್ಯರು ಧರಣಿ ಮುಂದುವರೆಸಿದ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಈ ಹಿಂದೆ ಕಲಾಪದಲ್ಲಿ ಅನೇಕ ಕಹಿ ಘಟನೆಗಳು ನಡೆದುಹೋಗಿವೆ.ಎಲ್ಲ ಕಹಿ ಘಟನೆಗಳು ಸಭಾಪತಿಯ ಕೊಠಡಿಯಲ್ಲಿ ಪರಿಹಾರವಾಗಿವೆ. ನಿನ್ನೆ ನಡೆದ ಘಟನೆಯನ್ನು ಮರೆತು, ಸಭಾಪತಿಯವರ ಕೊಠಡಿಯಲ್ಲಿ ಕೈಗೊಂಡ ನಿರ್ಧಾರದಂತೆ ಜನಾರ್ಧನರೆಡ್ಡಿ ಹಾಗೂ ಕೆ.ಸಿ.ಕೊಂಡಯ್ಯ ಮಾತನಾಡುವರು. ನಂತರ ಜನತೆ ಕೊಟ್ಟ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿಕೊಂಡು ಹೋಗೋಣ ಎಂದು ನುಡಿದರು.
ಜನಾರ್ಧನರೆಡ್ಡಿ ಮಾತನಾಡಿ, ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಜಮೀನು ವಶಪಡಿಸಿಕೊಳ್ಳುವುದನ್ನು ಸಮರ್ಥಿಸಿಕೊಂಡರು. ಅಲ್ಲದೆ ಸದನದಲ್ಲಿ ಭಾವೋದ್ವೇಗದಿಂದ ಕೊಂಡಯ್ಯ ವಿರುದ್ಧ ಮಾತನಾಡಿದ್ದೆ. ನನ್ನ ಮಾತಿನಿಂದ ಅವರಿಗೆ ನೋವಾಗಿದ್ದರೆ, ವಿಷಾಧ ವ್ಯಕ್ತಪಡಿಸುತ್ತೇನೆ ಎಂದರು.
ಕೊಂಡಯ್ಯ ಕೂಡ ಸಭಾಪತಿಯ ಸೂಚನೆಯಂತೆ ಸದನದಲ್ಲಿ ವಿಷಾಧ ವ್ಯಕ್ತಪಡಿಸಿದರು. ನಂತರ ಮೋಟಮ್ಮ ಸೇರಿದಂತೆ ವಿಪಕ್ಷ ಸದಸ್ಯರು ಮಾತನಾಡಿ, ಸದನ ಸಮಿಯನ್ನು ಒಂದು ತಿಂಗಳ ಮಟ್ಟಿಗಾದರೂ ರಚಿಸಬೇಕು ಎಂದು ಒತ್ತಾಯಿಸಿದರು.
ಯಡಿಯೂರಪ್ಪ ಮಧ್ಯೆಪ್ರವೇಶಿಸಿ, ಸದನ ಸಮಿತಿಯ ಅವಶ್ಯಕತೆ ಇಲ್ಲ. ರೈತರಿಗೆ ಒಪ್ಪಿಗೆ ಇದೆಯೆ ಅಥವಾ ಇಲ್ಲವೆ ಎಂಬುದರ ಕುರಿತು ಸರಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆಯ ಕಾರ್ಯದರ್ಶಿಗೆ ವರದಿ ಪಡೆದು ನೀಡುತ್ತೇನೆ. ನೀವು ಪರಿಶೀಲಿಸಿ ಎಂದರು.
ಸದನ ಸಮಿತಿ ರಚಿಸಲು ಒಪ್ಪದ ಯಡಿಯೂರಪ್ಪ ಕ್ರಮ ಖಂಡಿಸಿ ಜೆಡಿಎಸ್ ಹಾಗೂ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು. ಸಭಾಪತಿ ರಣ್ಣ ಮತ್ತೀಕಟ್ಟಿ ಸದನ ಕಲಾಪವನ್ನು ಮಾ.೧೭ಕ್ಕೆ ಮುಂದೂಡಿದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-13 00:00:00
|
|
|
|
|