ಹೊಸದಿಲ್ಲಿ, ಮಾ.೧೨: ರಾಜಧಾನಿಯಲ್ಲಿಂದು ಬೆಲೆಯೇರಿಕೆಯ ವಿರುದ್ಧ ಎಡಪಕ್ಷಗಳು ನಡೆಸಿದ ರ‍್ಯಾಲಿಯು ಸಂಸತ್ತಿನಲ್ಲಿಯೂ ಪ್ರತಿಧ್ವನಿಸಿತು. ಬೆಲೆಯೇರಿಕೆಯ ಕುರಿತು ಶ್ವೇತಪತ್ರ ಹೊರಡಿಸುವ ತಮ್ಮ ಬೇಡಿಕೆಗೆ ಸರಕಾರ ಸೂಕ್ತ ಪ್ರತಿಕ್ರಿಯೆ ನೀಡಿಲ್ಲವೆಂದು ಆರೋಪಿಸಿ ನಾಲ್ಕು ಎಡಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು.
ಲೋಕಸಭೆಯಲ್ಲಿ ಸಮಾಜವಾದಿ ಪಕ್ಷವೂ ಸಭಾತ್ಯಾಗದಲ್ಲಿ ಸೇರಿಕೊಂಡರೆ, ಬಿಜೆಪಿ, ಆರ್‌ಜೆಡಿ, ಬಿಎಸ್ಪಿ ಹಾಗೂ ಬಿಜೆಡಿಗಳು ಎಡಪಕ್ಷಗಳಿಗೆ ಬೆಂಬಲ ನೀಡಿದವು.
ರಾಜ್ಯಸಭೆಯಲ್ಲಿ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಿಪಿಎಂ ಸದಸ್ಯ ಸೀತಾರಾಮ ಯೆಚೂರಿ, ‘ಭಾರೀ ಬೆಲೆ ಏರಿಕೆ’ಯನ್ನು ಪ್ರತಿಭಟಿಸಲು ಲಕ್ಷಾಂತರ ಜನರು ರಾಜಧಾನಿಗೆ ಬಂದಿದ್ದಾರೆ. ಬೆಲೆ ಏರಿಕೆ ಸಮಸ್ಯೆ ನಿಭಾಯಿಸಲು ತಮ್ಮ ಐದಂಶ ಬೇಡಿಕೆಯನ್ನು ಸರಕಾರ ಒಪ್ಪಿಕೊಳ್ಳಬೇಕೆಂದು ಒತ್ತಾಯಿಸಿದರು.
ಸರಕಾರಿ ಗೋದಾಮುಗಳಲ್ಲಿ ಹೆಚ್ಚುವರಿಯಾಗಿರುವ ೨೭೫ ಲಕ್ಷ ಟನ್ ಆಹಾರ ಧಾನ್ಯಗಳನ್ನು ಬಿಡುಗಡೆಗೊಳಿಸುವಂತೆ ಸರಕಾರವನ್ನು ಒತ್ತಾಯಿಸಿದ ಅವರು, ಅದು ಕಾಪು ದಾಸ್ತಾನು ಮಿತಿಗಿಂತ ೨೦೦ ಲಕ್ಷ ಟನ್ ಜಾಸ್ತಿಯಿದೆ ಎಂದರು.
ಸಾರ್ವಜನಿಕ ವಿತರಣ ವ್ಯವಸ್ಥೆಯ ವೈಶ್ವೀಕರಣ, ಆಹಾರ ಧಾನ್ಯ ಹಾಗೂ ಅಗತ್ಯ ವಸ್ತುಗಳ ಮುಂಗಡ ವ್ಯಾಪಾರಕ್ಕೆ ತಕ್ಷಣ ನಿಷೇಧ, ಪೆಟ್ರೋಲಿಯಂ ಬೆಲೆಯೇರಿಕೆ ಹಿಂದಕ್ಕೆ ಪಡೆಯುವುದು ಹಾಗೂ ಕಳ್ಳ ದಾಸ್ತಾನು ಹಾಗೂ ಕಾಳಸಂತೆ ತಡೆಯಂತಹ ಕ್ರಮ ಕೈಗೊಳ್ಳುವಂತೆ ಯೆಚೂರಿ ಆಗ್ರಹಿಸಿದರು.