ಉಡುಪಿ ಎಂ ಜಿ ಎಂ ವಜ್ರಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ..... |
ಪ್ರಕಟಿಸಿದ ದಿನಾಂಕ : 2010-03-13
ಉಡುಪಿ:ಮಾ,13. ಮನೆಯಲ್ಲಿ ತಾಯಿ-ತಂದೆ, ಶಾಲೆಯಲ್ಲಿ ಗುರುಗಳು ದೇವರಿಗೆ ಸಮಾನ ಎಂಬ ಮಾತಿಗೆ ದೇಶ ದೇವರಿಗೆ ಸಮಾನ ಎಂಬ ನುಡಿಯನ್ನೂ ಸೇರಿಸುವುದು ಔಚಿತ್ಯಪೂರ್ಣ ಎಂದು ಪ್ರತಿಪಾದಿಸಿದ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಮಕ್ಕಳು ಬಾಲ್ಯದಿಂದಲೇ ದೇಶಾಭಿಮಾನ ಮೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಇಲ್ಲಿನ ಮಹಾತ್ಮಾ ಗಾಂಧಿ ಸ್ಮಾರಕ ಕಾಲೇಜಿನ ವಜ್ರಮಹೋತ್ಸವ ಕಾರ್ಯಕ್ರಮ ಉದ್ಘಾಟನ ಸಮಾರಂಭದಲ್ಲಿ ಶುಕ್ರವಾರ ಆಶೀರ್ವಚನ ನೀಡಿದರು.
ಶೈಕ್ಷಣಿಕ ಸಂಸ್ಥೆಗಳಲ್ಲಿ ಧರ್ಮ, ದೇವರಿಗೆ ಸ್ಥಾನ ನೀಡದಿರುವ ಶಿಕ್ಷಣ ಸರಿಯಲ್ಲ. ಅಂಥ ಗುರುಕುಲವನ್ನು ಸ್ಥಾಪಿಸಲು ಹಿರಣ್ಯಕಶಿಪು ನಿರ್ಧರಿಸಿ ಶಾಲೆ ಆರಂಭಿಸಿದಾಗ ಅದನ್ನು ತಡೆಯಲು ಆಂದೋಲನ ಆರಂಭಿಸಿದವನು ಪ್ರಹ್ಲಾದ. ಹಾಗಾಗಿ ವಿದ್ಯಾರ್ಥಿ ಚಳುವಳಿಯ ಪ್ರಥಮ ನೇತಾರ ಪ್ರಹ್ಲಾದ ಎಂದರು. ಶಿಕ್ಷಣ ಪಾಲಿಸಿಯನ್ನು ರೂಪಿಸಿದಾತ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಸಂಸ್ಥೆಗಳಿದ್ದು, ಅವರ ಭವಿಷ್ಯ ರೂಪಿಸಲು ಅವು ಸಹಕಾರಿಯಾಗಬೇಕು. ಅವರ ವ್ಯಕ್ತಿತ್ವ ವಿಕಸನದೊಂದಿಗೆ ಗುಣಮಟ್ಟ ರಕ್ಷಣೆ ಶೈಕ್ಷಣಿಕ ಸಂಸ್ಥೆಗಳ ಜವಾಬ್ದಾರಿ ಎಂದರು. ವಿದ್ಯಾರ್ಥಿಗಳು ಪಾಠೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸಬೇಕು. ಇದು ಅವರ ಬುದ್ದಿಮತ್ತೆಯನ್ನು ವೃದ್ಧಿಸುತ್ತದೆ ಎಂಬುದು ಈಚಿನ ವರದಿಗಳು ದೃಢಪಡಿಸಿವೆ. ಶಿಕ್ಷಣದೊಂದಿಗೆ ಜೀವನ ಮೌಲ್ಯ ರೂಢಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಡಾ. ಬಿ. ಎಂ. ಹೆಗ್ಡೆ, ಡಾ. ಕೃಷ್ಣರಾವ್, ಪ್ರಾಚಾರ್ಯರಾದ ಡಾ. ಪದ್ಮನಾಭ ಗೌಡ ಮತ್ತು ಮಾಲತಿ ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಕ್ಯಾ. ಆನಂದ ಶಿರಾಲಿ, ಲೆ. ಸುದರ್ಶನ ಪೈ, ವಿದ್ಯಾರ್ಥಿನಿಯರಾದ ಸುಜಾತಾ, ಅರ್ಚನಾ ಮತ್ತು ಶ್ವೇತಾ ಅವರನ್ನು ಸನ್ಮಾನಿಸಲಾಯಿತು. ಪ್ರೊ. ಎಂ. ಎಲ್. ಸಾಮಗ ನಿರೂಪಿಸಿದರು.
ವರದಿಯ ವಿವರಗಳು |
 |
ವರದಿಗಾರರು : ಜಯಪ್ರಕಾಶ್ ಕಿಣಿ
ಪ್ರಕಟಿಸಿದ ದಿನಾಂಕ : 2010-03-13 00:00:00
|
|
|