| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಬಿಸಿಲ ಝಳಕ್ಕೆ ತತ್ತರಿಸುತ್ತಿರುವ ಕೇರಳ: ಬೇಗನೆ ಪರೀಕ್ಷೆ ನಡೆಸಲು ಚಿಂತನೆ |
ಪ್ರಕಟಿಸಿದ ದಿನಾಂಕ : 2010-03-13
ಕಾಸರಗೋಡು, ಮಾ.೧೨: ರಾಜ್ಯವು ಬಿಸಿಲ ಝಳದಿಂದ ತತ್ತರಿಸುತ್ತಿದೆ. ರಾಜ್ಯದಲ್ಲಿ ಸರಾಸರಿ ಉಷ್ಣಾಂಶವು ೩೨ರಿಂದ ೪೨ ಡಿಗ್ರಿ ಸೆಲ್ಸಿಯಸ್ ತನಕ ತಲುಪಿದ್ದು, ಜನತೆ ಸೆಕೆಯಿಂದ ನರಳಾಡುವಂತಾಗಿದೆ.
ಹಿಂದೆಂದೂ ಕಾಣದ ಬಿಸಿಲ ಝಳವು ಈ ಬಾರಿ ಕಂಡು ಬಂದಿದ್ದು, ಪಾಲಕ್ಕಾಡ್‌ನಲ್ಲಿ ಆರು ಮಂದಿ ಸೂರ್ಯನ ಪ್ರಖರಕ್ಕೆ ಅಸ್ವಸ್ಥಗೊಂಡ ಬಗ್ಗೆ ವರದಿಯಾಗಿದೆ. ಪಾಲಕ್ಕಾಡ್‌ನಲ್ಲಿ ಉಷ್ಣಾಂಶ ೪೨ ಡಿಗ್ರಿ ದಾಟಿದ್ದು, ಜಾನುವಾರುಗಳು ಸಾವಿಗೀಡಾದ ಘಟನೆಯೂ ಈ ಪ್ರದೇಶದಲ್ಲಿ ನಡೆದಿದೆ. ಉಷ್ಣಾಂಶ ತೀವ್ರ ಗೊಂಡಿರುವುದರಿಂದ ಈ ಕುರಿತ ಅಧ್ಯಯನಕ್ಕೆ ತಜ್ಞ ಸಮಿತಿ ಯನ್ನು ಕಳುಹಿಸಲು ರಾಜ್ಯ ಸರಕಾರ ತೀರ್ಮಾನಿಸಿದ್ದು, ಕೆಲಸದ ಅವಧಿ ಬದಲಾಯಿಸಲು ತೀರ್ಮಾನಿಸಲಾಗಿದೆ.
ಸಾಮಾನ್ಯವಾಗಿ ಮಾರ್ಚ್ ಅಂತ್ಯದ ಬಳಿಕ ಬೇಸಿಗೆಯ ತೀವ್ರತೆ ಕಂಡು ಬರುತ್ತದೆ. ಆದರೆ ಈ ಬಾರಿ ಮಾರ್ಚ್ ಮೊದಲ ವಾರದಿಂದ ಬಿಸಿಲ ಧಗೆ ಹೆಚ್ಚಾಗಿದ್ದು, ಜನರು ತತ್ತರಿಸುವಂತಾ ಗಿದೆ ಹಾಗೂ ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸದಂತಾಗಿದೆ.
ಬಾವಿ, ನದಿ, ಹೊಳೆಗಳಲ್ಲಿ ನೀರಿನ ಮಟ್ಟ ಕುಸಿಯತೊಡಗಿದ್ದು, ಪಾಲಕ್ಕಾಡ್ ಸೇರಿದಂತೆ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಬಿಸಿಲಿನ ತೀವ್ರತೆಯಿಂದಾಗಿ ಭತ್ತ ಹಾಗೂ ಇತರ ಕೃಷಿಗೆ ಭಾರೀ ಹಿನೆಡೆಯಾಗಿದೆ.
ಬೇಗನೆ ಪರೀಕ್ಷೆ ನಡೆಸಲು ಚಿಂತನೆ
ಕಾಸರಗೋಡು: ವರ್ಷದಿಂದ ವರ್ಷಕ್ಕೆ ಬಿಸಿಲ ಝಳ ತೀವ್ರಗೊಳ್ಳುತ್ತಿ ರುವುದರಿಂದ ಮುಂದಿನ ವರ್ಷದಿಂದ ಎಸ್ಸೆಸ್ಸೆಲ್ಸಿ ಸೇರಿದಂತೆ ಪ್ರಮುಖ ಪರೀಕ್ಷೆಗಳನ್ನು ಬೇಗನೆ ನಡೆಸುವ ಬಗ್ಗೆ ಶಿಕ್ಷಣ ಇಲಾಖೆ ಗಂಭೀರ ಚಿಂತನೆ ನಡೆಸಿದೆ.
ಈ ಕುರಿತು ಸಮಾಲೋಚನೆ ನಡೆಯುತ್ತಿದೆ ಎಂದು ಕೇರಳ ರಾಜ್ಯ ಶಿಕ್ಷಣ ಸಚಿವ ಎಂ.ಎ.ಬೇಬಿ ತಿಳಿಸಿದ್ದಾರೆ. ಸಾಮಾನ್ಯವಾಗಿ ಮಾರ್ಚ್ ಮಧ್ಯದಲ್ಲಿ ಎಸ್ಸೆಸ್ಸೆಲ್ಸಿ, ಪ್ಲಸ್ ಟು ಪರೀಕ್ಷೆಗಳು ನಡೆಯುತ್ತದೆ. ಆದರೆ ಈ ಸಮಯದಲ್ಲಿನ ಬೇಸಿಗೆ ಧಗೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ. ಎಸ್ಸೆಸ್ಸೆಲ್ಸಿ ಪರೀಕೆಗಳು ಮಧ್ಯಾಹ್ನದ ಬಳಿಕ ನಡೆಯುವುದರಿಂದ ಸುಡು ಬಿಸಿಲಿನಲ್ಲಿ ಪರೀಕ್ಷಾ ಕೇಂದ್ರಗಳಿಗೆ ತೆರಳಿ ಪರೀಕ್ಷೆ ಬರೆಯುವುದು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿ ಕಾಡುತ್ತಿದೆ. ಈ ಎಲ್ಲಾ ಕಾರಣಗಳಿಗಾಗಿ ಫೆಬ್ರವರಿ ತಿಂಗಳಲ್ಲಿ ಪರೀಕ್ಷೆ ನಡೆಸಿ ಬೇಸಿಗೆ ಝಳದಿಂದ ವಿದ್ಯಾರ್ಥಿಗಳಿಗಾಗುವ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ ಎಂದು ತಿಳಿದುಬಂದಿದೆ.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-13 00:00:00
|
|
|
|
|