ಮುಂಬೈ, ಮಾ.೧೨: ಮಾಲೆಗಾಂವ್ ಸ್ಫೋಟದ ಶಂಕಿತ ಭಯೋತ್ಪಾದಕಿ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರಳ ಜಾಮೀನು ಮನವಿಯನ್ನು ಬಾಂಬೆ ಹೈಕೋರ್ಟ್ ಇಂದು ತಳ್ಳಿ ಹಾಕಿದೆ.
ಜಾಮೀನು ನೀಡಲು ನಿರಾಕರಿಸಿದ ನ್ಯಾಯಮೂರ್ತಿ ಎಸ್.ಸಿ. ಧರ್ಮಾಧಿಕಾರಿ, ೨೦೦೮ರ ಅ.೨೩ರಂದು ಪ್ರಜ್ಞಾಸಿಂಗ್‌ಳನ್ನು ಅಧಿಕೃತ ಬಂಧನ ಆಕೆಯ ಪರ ವಕೀಲರ ವಾದವನ್ನು ತಿರಸ್ಕರಿಸಿದರು.
ಕಾನೂನು ಬಾಹಿರ ಬಂಧನದ ಆರೋಪ ಹೊರಿಸಲಾಗದೆಂದು ನ್ಯಾಯಾಲಯ ಅಭಿಪ್ರಾಯಿಸಿತು.
ಪ್ರಜ್ಞಾಳನ್ನು ಮಹಾರಾಷ್ಟ್ರದ ಎಟಿಎಸ್ ಅ.೧೦ರಂದೇ ವಶಪಡಿಸಿಕೊಂಡಿತ್ತೆಂದು ಆಕೆಯ ವಕೀಲ ಮಹೇಶ್ ಜೇಠ್ಮಲಾನಿ ವಾದಿಸಿದರು. ಆದರೆ, ಆಕೆ ಅ.೧೦ ಹಾಗೂ ೨೩ರ ನಡುವೆ ಪೊಲೀಸರ ಕಣ್ಗಾವಲಿಲ್ಲದೆ ಮುಕ್ತವಾಗಿ ತಿರುಗಾಡುತ್ತಿದ್ದಳೆಂಬದನ್ನ ನ್ಯಾಯಾಲಯ ಗಮನಿಸಿತು.
ಬಂಧನದ ವೇಳೆ ಹಿಂಸೆ ನೀಡಿರುವ ಕುರಿತು ಮಾನವ ಹಕ್ಕು ಆಯೋಗ ಹಾಗೂ ನ್ಯಾಯಾಲಯದ ಮುಂದೆ ನೀಡಿರುವ ಅಫಿದಾವಿತ್‌ಗಳಲ್ಲಿ ವಿರೋಧಾಭಾಸವಿದೆಯೆಂದೂ ಪೀಠ ಹೇಳಿತು.
ಅಭಿನವ ಭಾರತ್ ಸಂಘಟನೆ ನಡೆಸಿದೆಯೆನ್ನಲಾದ ೨೦೦೮ರ ಸೆ.೨೮ರ ಮಾಲೆಗಾಂವ್ ಸ್ಫೋಟದಲ್ಲಿ ೬ ಮಂದಿ ಹತರಾಗಿದ್ದರು.