ಗೃಹಸಚಿವ ಚಿದಂಬರಂ ಜತೆ ಪಾಕ್ ರಾಯಭಾರಿ ವಾಗ್ವಾದ..! |
ಪ್ರಕಟಿಸಿದ ದಿನಾಂಕ : 2010-03-13
ನವದೆಹಲಿ, ಶುಕ್ರವಾರ, 12 ಮಾರ್ಚ್ 2010( 15:03 IST ) ಗೃಹಸಚಿವ ಪಿ. ಚಿದಂಬರಂ ಅವರು ಭಯೋತ್ಪಾದನೆಯ ಕುರಿತು ಪಾಕಿಸ್ತಾನವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಅದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನಿ ರಾಜತಾಂತ್ರಿಕ ಪ್ರತಿನಿಧಿ ಶಾಹಿದ್ ಮಲಿಕ್ ವಾಗ್ವಾದಕ್ಕಿಳಿದ ಅಪರೂಪದ ಘಟನೆ ವರದಿಯಾಗಿದೆ.
'ದಕ್ಷಿಣ ಏಷಿಯಾದ ಭವಿಷ್ಯದ ರಕ್ಷಣೆ' ಎಂಬ ಕುರಿತು ನಡೆಯುತ್ತಿದ್ದ ವಿಚಾರಗೋಷ್ಠಿಯಲ್ಲಿ ಚಿದಂಬರಂ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗಡಿಯಾಚೆಗಿನ ಎಲ್ಲಾ ಭಯೋತ್ಪಾದಕ ಸಂಘಟನೆಗಳಿಗೆ ಐಎಸ್ಐ ಬೆಂಬಲ ನೀಡುತ್ತಿದೆ ಎಂದರೆ ತಕ್ಷಣವೇ ಪ್ರತಿಕ್ರಿಯೆ ನೀಡಿದ ರಾಯಭಾರಿ ಮಲಿಕ್, ಭಾರತ ವಿರುದ್ಧದ ಭಯೋತ್ಪಾದನಾ ಕೃತ್ಯಗಳನ್ನು ಪಾಕಿಸ್ತಾನ ಬೆಂಬಲಿಸುತ್ತಿಲ್ಲ ಎಂದರು.
ಲಷ್ಕರ್ ಇ ತೋಯ್ಬಾ, ಜೈಶ್ ಇ ಮೊಹಮ್ಮದ್ ಮತ್ತು ಇತರ ಭಯೋತ್ಪಾದಕ ಸಂಘಟನೆಗಳನ್ನು ಉಲ್ಲೇಖಿಸುತ್ತಾ, ಪಾಕಿಸ್ತಾನದ ಪ್ರತಿ ಭಯೋತ್ಪಾದಕ ಸಂಘಟನೆಗಳಿಗೂ ಐಎಸ್ಐ ಬೆಂಬಲ ನೀಡುತ್ತಿದೆ ಎನ್ನುವುದರಲ್ಲಿ ಯಾವುದೇ ರಹಸ್ಯವಿಲ್ಲ; ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆಯ ಬಗ್ಗೆ ನವದೆಹಲಿ ತೀವ್ರ ಕಳವಳ ಹೊಂದಿದೆ ಎಂದು ಪ್ರಶ್ನೋತ್ತರ ಸಂದರ್ಭದಲ್ಲಿ ಚಿದಂಬರಂ ಹೇಳಿದರು.
ಈ ಆರೋಪಕ್ಕೆ ತಿರುಗಿ ಬಿದ್ದ ಪಾಕಿಸ್ತಾನದ ರಾಯಭಾರಿ, ಬಲೂಚಿಸ್ತಾನದಲ್ಲಿ ಭಾರತದ ಕೈವಾಡವಿದೆ ಎಂಬ ಆರೋಪವನ್ನು ಎತ್ತಿ ತೋರಿಸಿದರು. ಅಲ್ಲದೆ ಭಾರತೀಯ ರಾಯಭಾರಿ ಕಚೇರಿಗಳು ಪಾಕಿಸ್ತಾನದಲ್ಲಿ ನಡೆಸುತ್ತಿರುವ ಚಟುವಟಿಕೆಗಳ ಕುರಿತೂ ಆಕ್ಷೇಪ ವ್ಯಕ್ತಪಡಿಸಿದರು.
ಭಾರತ ಹಿತಾಸಕ್ತಿಗೆ ಧಕ್ಕೆಯಾಗುವಂತಹ ಯಾವುದೇ ವಿನಾಶಕಾರಿ ಕೃತ್ಯಗಳಲ್ಲಿ ಪಾಕಿಸ್ತಾನ ತೊಡಗಿಸಿಕೊಂಡಿಲ್ಲ. ಅಂತಹ ಯಾವುದೇ ಕೃತ್ಯಗಳನ್ನು ಪಾಕಿಸ್ತಾನ ಸರಕಾರ ಬೆಂಬಲಿಸುತ್ತಿಲ್ಲ. ದಾಳಿಗಳಲ್ಲಿ ಪಾಕಿಸ್ತಾನ ಪಾಲ್ಗೊಂಡಿಲ್ಲ ಎಂದು ಸಚಿವರಿಗೆ ಮಲಿಕ್ ನೇರವಾಗಿ ಉತ್ತರಿಸಿದರು.
ಭಾರತದ ರಾಯಭಾರ ಕಚೇರಿಗಳು ಅಫಘಾನಿಸ್ತಾನದಲ್ಲಿ ಪಾಕಿಸ್ತಾನಕ್ಕೆ ತೊಂದರೆಯನ್ನುಂಟು ಮಾಡುವ ಕೃತ್ಯಗಳನ್ನು ನಡೆಸುತ್ತಿವೆ ಎಂದು ಪಾಕಿಸ್ತಾನ ಆರೋಪಿಸುತ್ತಾ ಬಂದಿದ್ದರೂ, ಭಾರತ ಈ ಆರೋಪಗಳನ್ನು ನಿರಾಕರಿಸುತ್ತಿದೆ.
ತೃತೀಯ ರಾಷ್ಟ್ರಕ್ಕೆ ಧ್ವನಿ ಮಾದರಿ ನೀಡಿ... ತನ್ನ ಸರಕಾರದ ನಿಲುವನ್ನು ಸಮರ್ಥಿಸಿಕೊಳ್ಳುವ ಅಧಿಕಾರ ಮಾತ್ರ ಹೊಂದಿರುವ ರಾಯಭಾರಿ ಜತೆ ತಾನು ಸಾರ್ವಜನಿಕ ಚರ್ಚೆ ನಡೆಸದೇ ಇರುವ ಭರವಸೆ ಹೊಂದಿದ್ದೆ. ಆದರೂ ಅವರ ಹೇಳಿಕೆಯನ್ನು ಪ್ರಮಾಣೀಕರಿಸಲಿ ಎಂದು ಚಿದಂಬರಂ ಪ್ರತ್ಯುತ್ತರ ನೀಡಿದರು.
ಮುಂಬೈ ದಾಳಿ ನಡೆಸಿದ ಭಯೋತ್ಪಾದಕರ ಮಾತುಕತೆಯ ಧ್ವನಿಮುದ್ರಿಕೆಯೊಂದಿಗೆ ಹೊಂದಾಣಿಕೆ ಮಾಡಲು ಭಾರತವು ಪಾಕಿಸ್ತಾನದೊಂದಿಗೆ ಕೇಳಿರುವ ಧ್ವನಿ ಮಾದರಿಗಳನ್ನು ತಟಸ್ಥ ರಾಷ್ಟ್ರವೊಂದಕ್ಕೆ ನೀಡಲಿ. ಆಗ ದಾಳಿಕೋರರು ಯಾವ ದೇಶಕ್ಕೆ ಸೇರಿದವರು ಎಂಬುದು ಬಹಿರಂಗವಾಗುತ್ತದೆ. ಇದಕ್ಕೆ ಪಾಕಿಸ್ತಾನ ಸಿದ್ಧವಿದೆಯೇ ಎಂದು ಮಲಿಕ್ ಅವರಲ್ಲಿ ಚಿದಂಬರಂ ಪ್ರಶ್ನಿಸಿದ್ದಾರೆ
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-13 00:00:00
|
|
|