ಗ್ರಾಮದ ಮೇಲಿನ ಪ್ರೀತಿ ಬಿಟ್ಟುಕೊಡದ ‘ಬೈಸಾ’; ಎಂಬಿಎ ಪದವೀಧರೆ ಈಗ ಪಂಚಾಯ್ತಿ ಅಧ್ಯಕ್ಷೆ |
ಪ್ರಕಟಿಸಿದ ದಿನಾಂಕ : 2010-03-12
ನಿಸ್ಪೃಹ ಆಲೋಚನೆಗಳಿಂದ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಚವ್ವಿ ರಾಜವತ್, ಬೆಂಗಳೂರಿನ ಋಷಿ ವ್ಯಾಲಿ, ದೆಹಲಿಯ ಶ್ರೀರಾಮ್ ಮಹಿಳಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಪುಣೆಯಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.
ಜೈಪುರ (ಐಎಎನ್‌ಎಸ್): ಆಕೆ ಮನಸ್ಸು ಮಾಡಿದ್ದರೆ ಕೈತುಂಬಾ ಸಂಬಳ ಪಡೆಯುತ್ತಾ, ಎ.ಸಿ.ಕಚೇರಿ, ಕಾರು, ಬಂಗಲೆ ಆಳು- ಕಾಳುಗಳ ದೇಖರೇಖಿಯಲ್ಲಿ ಸುಖವಾದ ಜೀವನ ನಡೆಸಬಹುದಿತ್ತು. ಆದರೆ ಹಾಗಾಗಲಿಲ್ಲ. ಆಕೆ ನಗರ ಜೀವನದಿಂದ ಮರಳಿ ಗ್ರಾಮಕ್ಕೆ ಬಂದಳು. ಈ ನೆಲದ ಸಂತ್ರಸ್ತರ ದನಿಗೆ, ನಿರ್ಲಕ್ಷ್ಯಕ್ಕೊಳಗಾದ ಗ್ರಾಮದ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತಳು. ಪರಿಣಾಮ ಒಬ್ಬ ಪ್ರತಿಷ್ಠಿತ ಸಂಸ್ಥೆಯ ಎಂಬಿಎ ಪದವೀಧರೆ ಇಂದು ಗ್ರಾಮದ ಸರಪಂಚ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಳೆ.
ನಿಸ್ಪೃಹ ಆಲೋಚನೆಗಳಿಂದ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಚವ್ವಿ ರಾಜವತ್, ಬೆಂಗಳೂರಿನ ಋಷಿ ವ್ಯಾಲಿ, ದೆಹಲಿಯ ಶ್ರೀರಾಮ್ ಮಹಿಳಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಪುಣೆಯಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.
ಟೊಂಕ್ ಜಿಲ್ಲೆಯ ಪುಟ್ಟ ಗ್ರಾಮ ಸೊಡಾದಲ್ಲಿ ಈಗೊಂದು ತಿಂಗಳ ಹಿಂದೆ ಚವ್ವಿ ಈ ಸರಪಂಚ ಹುದ್ದೆ ಅಲಂಕರಿಸಿದ್ದಾರೆ. ಇವರ ಅಜ್ಜ ಬ್ರಿಗೇಡಿಯರ್ ರಘುಬೀರ್ ಸಿಂಗ್ ಕೂಡಾ ಈ ಹಿಂದೆ ಮೂರು ಬಾರಿ ಈ ಗ್ರಾಮದ ಸರಪಂಚರಾಗಿ ಕಾರ್ಯ ನಿರ್ವಹಿಸಿ ದಾಖಲೆ ನಿರ್ಮಿಸಿದವರು. ಈಗ ಅಜ್ಜನ ಹಾದಿಯಲ್ಲೇ ಚವ್ವಿ ಕೂಡಾ ಮುಂದುವರಿದಿದ್ದಾರೆ. ತನ್ನ ಹುಟ್ಟೂರಿನ ಬಗ್ಗೆ ಅವರಿಗೆ ಇನ್ನಿಲ್ಲದ ಪ್ರೀತಿ. ಅದಕ್ಕಾಗಿಯೇ ಅವರು ತಮ್ಮ ಗ್ರಾಮದ ಅಭಿವೃದ್ಧಿಗಾಗಿ ಪಣತೊಟ್ಟು ಕಾರ್ಪೋರೇಟ್ ಪ್ರಪಂಚವನ್ನು ಧಿಕ್ಕರಿಸಿ ನಿಂತಿದ್ದಾರೆ.
‘ಈ ಮಣ್ಣಿನ ಮಕ್ಕಳೊಂದಿಗೇ ಬೆಳೆದ ನನಗೆ ನನ್ನದೇ ಗ್ರಾಮದಲ್ಲಿ ಕೆಲಸ ಮಾಡುವ ಭಾಗ್ಯ ದೊರೆತಿರುವುದಕ್ಕೆ ಅತ್ಯಂತ ಖುಷಿಯಿದೆ. ನಾನೆಂದೂ ಕಾರ್ಪೋರೇಟ್ ಜಗತ್ತಿನ ವ್ಯಾಮೋಹಕ್ಕೆ ಒಳಗಾಗಿರಲಿಲ್ಲ. ಹಳ್ಳಿಯ ಪರಿಸರದಲ್ಲಿ ಕೆಲಸ ಮಾಡಲು ನನಗ್ಯಾವುದೇ ತೊಂದರೆ ಎನಿಸುತ್ತಿಲ್ಲ’ ಎಂದು ಚವ್ವಿ ನುಡಿಯುತ್ತಾರೆ.
ಚವ್ವಿ ಗ್ರಾಮದಲ್ಲೇ ಇದ್ದರೂ ತಮ್ಮ ಜೀನ್ಸ್ ಪ್ಯಾಂಟ್ ಟಿ ಶರ್ಟ್ ಧರಿಸಿ, ಸ್ಥಳೀಯ ದೇಸೀ ಭಾಷೆಯ ಸೊಗಡಿನಲ್ಲೇ ಜನರ ಕಷ್ಟ ಸುಖಗಳನ್ನು ಆಲಿಸುತ್ತಾರೆ. ಗ್ರಾಮಸ್ಥರ ಪಾಲಿಗೆ ಈಕೆ ನೆಚ್ಚಿನ “ಬೈಸಾ” (ಸ್ಥಳೀಯ ಭಾಷೆಯಲ್ಲಿನ ಗೌರವ ಪೂರ್ವಕ ನುಡಿ) ಕೂಡಾ ಹೌದು.
‘ಗ್ರಾಮಸ್ಥರು ನನ್ನ ಬಗ್ಗೆ ಅತೀವ ಗೌರವ ಭಾವನೆ ಹೊಂದಿದ್ದಾರೆ. ಹೀಗಾಗಿ ನಾನು ಎಂದಿಗೂ ಅವರ ಕೈಬಿಡುವುದಿಲ್ಲ’ ಎಂದು ಅವರು ಹೇಳುತ್ತಾರೆ.
‘ನನ್ನ ಹಳ್ಳಿ ತೀವ್ರಗತಿಯಲ್ಲಿ ಪ್ರಗತಿ ಹೊಂದಬೇಕು ಎಂಬುದೇ ನನ್ನಾಸೆ. ಇಲ್ಲಿ ನೀರಿನ ತೀವ್ರ ಸಮಸ್ಯೆಯಿದೆ. ಅಷ್ಟೇ ಅಲ್ಲ ಇಲ್ಲಿ ದೊರೆಯುವ ನೀರಿನಲ್ಲಿ ಫ್ಲೋರೈಡ್ ಅಂಶ ಜಾಸ್ತಿಯಿದೆ. ವಿದ್ಯುತ್, ರಸ್ತೆಯ ಕೊರತೆಯಂತಹ ಸಮಸ್ಯೆಗಳೂ ಇಲ್ಲಿನವರನ್ನು ಕಿತ್ತು ತಿನ್ನುತ್ತಿವೆ. ಇವನ್ನೆಲ್ಲಾ ನನ್ನ ಶಕ್ತಿ ಮೀರಿ ಬಗೆಹರಿಸಲು ಪ್ರಯತ್ನಿಸುತ್ತೇನೆ’ ಎಂದು ಅವರು ನಿರ್ಮಲ ಧ್ವನಿಯಲ್ಲಿ ಹೇಳುತ್ತಾರೆ.
‘ಗ್ರಾಮಸ್ಥರು ತಮ್ಮ ಗ್ರಾಮದ ಅಭಿವೃದ್ಧಿಗಾಗಿ ಅಥವಾ ಸಹಾಯಕ್ಕಾಗಿ ಮತ್ತಿನ್ಯಾರನ್ನೋ ನೆಚ್ಚಿಕೊಂಡು ಕೂರಬಾರದು. ತಾವೇ ಸ್ವತಃ ಬದಲಾವಣೆಗೆ ಸಜ್ಜಾಗಬೇಕು. ನನ್ನ ಈ ಉಮೇದಿಗೆ ಜನ ಸ್ಪಂದಿಸುತ್ತಿದ್ದಾರೆ. ಅದೇ ನನಗೆ ಅತ್ಯಂತ ಸಂತಸದ ಸಂಗತಿ. ನನಗೆ ರಾಜಕೀಯದಲ್ಲಿ ಇರಬೇಕೆಂಬ ಯಾವುದೇ ಇಚ್ಛೆಯಿಲ್ಲ. ಎಲ್ಲಿಯವರೆಗೂ ಈ ಕರ್ತವ್ಯಗಳನ್ನು ನಿಭಾಯಿಸಬಹುದೋ ಅಲ್ಲಿಯ ತನಕ ಪ್ರಾಮಾಣಿಕವಾಗಿ ಇಲ್ಲಿಯೇ ನನ್ನ ಕೈಲಾದಷ್ಟು ಕೆಲಸ ಮಾಡುತ್ತೇನೆ’ ಎಂದು ಚವ್ವಿ ಸ್ಪಷ್ಟಪಡಿಸುತ್ತಾರೆ.
ಗ್ರಾಮಸ್ಥರ ಪಾಲಿಗಂತೂ ಚವ್ವಿ ಪ್ರೀತಿಪಾತ್ರ ಬೈಸಾ. ‘ಆಕೆ ನಮ್ಮನೆಲ್ಲಾ ಎಷ್ಟು ಚೆಂದ ಕಾಳಜಿ ಮಾಡುತ್ತಾಳೆ. ಖಂಡಿತಾ ಇಂಥವರು ರಾಜಕೀಯದಲ್ಲಿ ಇರಬೇಕು’ ಎಂಬುದು ಗ್ರಾಮದ ಹಿರಿಯರೊಬ್ಬರ ಅನಿಸಿಕೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-12
|
|
|