ಕಾಲೇಜಿಗೆ ಅರ್‍ವತ್ತು, ಅಜ್ಜಿಗೆ ಎಂಬತ್ತು...! |
ಪ್ರಕಟಿಸಿದ ದಿನಾಂಕ : 2010-03-12
{ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ}
*‘ಕಾಲೇಜಿಗೂ ಅಜ್ಜಿಗೂ ಎತ್ತಣ ಸಂಬಂಧವಯ್ಯ’ ಎಂದು ಹುಬ್ಬೇರಿಸ ಬೇಡಿ. ಹಿರಿಯರ ಮುಖದಲ್ಲಿನ ಪ್ರತಿ ನೆರಿಗೆಯ ಹಿಂದೆ ಸಾವಿರ ಸಾವಿರ ಅನುಭವಗಳು ಬರೆದಿರುತ್ತವೆ. ಕೆಲವೊಮ್ಮೆ ವೃದ್ಧರು ಶಿಕ್ಷಣ ಸಂಸ್ಥೆಯೂ ಆಗಬಲ್ಲರು, ಅನುಭವ ಮಾಹಿತಿಗಳ ಕಣಜವೂ ಆಗಬಲ್ಲರು.
ಉಡುಪಿಯ ಮಹಾ ವಿದ್ಯಾಸಂಸ್ಥೆ ಎಂಜಿಎಂ ಕಾಲೇಜು ತನ್ನ ೬೦ರ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದರೆ ಕಾಲೇಜಿನ ನೇರ ಎದುರಿಗಿರುವ ‘ಅಜ್ಜಮ್ಮನ ಹೊಟೇಲ್’ ಖ್ಯಾತಿಯ ‘ಅಜ್ಜಮ್ಮ’ನಿಗೆ ೮೦ ತುಂಬಿತು. ‘ಅಜ್ಜಮ್ಮನ ಹೊಟೇಲ್’ ಹುಡುಗ ವಿದ್ಯಾರ್ಥಿಗಳ ಪಾಲಿಗಂತೂ ಸ್ವಂತ ಮನೆಯ ಪೂರೈಕೆ - ಆರೈಕೆ; ಹಾರೈಕೆ ನೀಡುವ ಗೃಹೋಪಚಾರದ ತಾಣವಾಗಿ ಕಂಡು ಬರುತ್ತಿದೆ. ಎಂಭತ್ತರ ಅಜ್ಜಿ ನಿರಂತರ ೬೦ ವರ್ಷಗಳಿಂದ ವಿದ್ಯಾರ್ಥಿಗಳೆಂಬ ಮೊಮ್ಮಕ್ಕಳಿಗೆ ಅನ್ನ ಬಡಿಸುತ್ತಿರುವ ಪ್ರೀತಿಯ ಕೈ. ಅಜ್ಜಿಯ ಮನೆಯು ದಣಿದ ವಿದ್ಯಾರ್ಥಿಗಳ ಪಾಲಿಗೆ ಅನ್ನಪೂರ್ಣೆ. ಇಂದಿಗೂ ಅಜ್ಜಿಯ ಪ್ರೀತಿಯ ಭವನ ಆರಕ್ಕೂ ಏರದೆ ಮೂರಕ್ಕೂ ಇಳಿಯದೆ ಹಾಗೆಯೇ ಇದೆ. ಪ್ರೀತಿಯ ಉಣಿಸುವ ಕೈಗಳಿಗೆ ವ್ಯಾಪಾರಿ ಮನೋಭಾವ ಅಡ್ಡಿ ಬರಲೇ ಇಲ್ಲ.
ಬೆಂದು -ನೊಂದು ಬೆವರಿ ಬಂದ ವಿದ್ಯಾರ್ಥಿಗಳ ಪಾಲಿಗೆ ನೀರುಣಿಸುವ ಪ್ರೀತಿಯ ವಿಶ್ರಾಂತಿ ಧಾಮ. ವಿದ್ಯಾರ್ಥಿಗಳ ಚರ್ಚೆ - ಸಂವಾದ; ಹೊಸ ಯೋಚನೆಗಳಿಗೆ ಉಪ್ಪಿನ ಪೆಟ್ಟಿಗೆಯೇ ಜ್ಞಾನ ಪೀಠ...!. ಆಮ್ಲೆಟು ತಿನ್ನದ ಕೈಗಳು ಅಜ್ಜಿಯ ಆಮ್ಲೆಟಿಗೆ ಶರಣಾದದ್ದೂ ಉಂಟು. ಅದೆಷ್ಟೊ ವಿದ್ಯಾರ್ಥಿಗಳ ಹೆಗಲ ಭಾರ ಕಡಿಮೆ ಮಾಡುವ ಪುಸ್ತಕದ ತಾಣವೂ ಹೌದು.
ಇಂದಿಗೂ ಅಜ್ಜಿಯ ಮೇಲಿನ ಪ್ರೀತಿ ಅದೆಷ್ಟು ಅಗಾಧವೆಂದರೆ ದೇಶ - ಪರದೇಶಗಳಲ್ಲಿ ದುಡಿಯುತ್ತಿರುವ ಪ್ರಾಕ್ತನ ವಿದ್ಯಾರ್ಥಿಗಳಲ್ಲಿ ಕೆಲವರು ಕಾಲೇಜಿಗೆ ಬಂದಾಗಲೆಲ್ಲಾ ಅಜ್ಜಿಯ ಆರೋಗ್ಯ ವಿಚಾರಿಸಿ ಹೋಗುತ್ತಾರೆ. ಅಜ್ಜಿ ಎಂಜಿಎಂ ಕಾಲೇಜನ್ನು ಅತೀ ಹತ್ತಿರದಲ್ಲಿ ನಿತ್ಯವೂ ಕಂಡವರು. ಕಾಲೇಜಿನ ಏಳಿಗೆಯನ್ನು ಕಂಡು ಹೆಮ್ಮೆ ಪಟ್ಟವರು.
‘ಕಾಯಕವೇ ಕೈಲಾಸ’ ಎಂದು ನಂಬಿದ ಅಜ್ಜಿಯಮ್ಮನಿಗೆ ನಮೋ ಎನ್ನೋಣ.
ವರದಿಯ ವಿವರಗಳು |
 |
ಕೃಪೆ : ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-12
|
|
| Imran Manna, Udupi | 2010-03-12 | | ಈ ಅಜ್ಜಮ್ಮ MGM ನಲ್ಲಿ ವಿದ್ಯಾಭಾಸ ಮಾಡಿದ ಎಲ್ಲಾ ಹುಡುಗರ ದ್ರಷ್ಟಿಯಲ್ಲಿ ಸ್ವಂತ ತಾಯಿ ಯಾ ಸಮಾನ ಎಂದು ನಾನು ಹೇಳಬಯಸುತ್ತೇನೆ. ಆ ಕಾಲೇಜಿನ ದಿನ ಗಳನ್ನು ನಾವು ಯಾವತ್ತಿಗೂ ಮರೆಯುವಂತಿಲ್ಲ .ಪ್ರತಿ ದಿನ ಮಧ್ಯಾನ ಊಟ ಅಜ್ಜಮ್ಮ ನ ಮನೆ ( ಹೋಟೆಲ್ ) ಯಲ್ಲಿ . ಒಂದು ದಿನ ಹಣ ಇಲ್ಲ ಅಜ್ಜಮ ಎಂದರೆ ಈ ವನಸ್ ಮಲ್ಪುಲ ಮಗ ಕಾಸ್ ಎಲ್ಲೇ ಕೊರ್ಲೇ .ಎಂದು ನಮ್ಮನು ಸ್ವಂತ ಮಕ್ಕಳಂತೆ ಪೋಷಿಸುತ್ತಿದ್ದರು.ಅಜ್ಜಮ್ಮ ನೀವು ಇವತ್ತಿಗೂ ನಮ್ಮ ಹ್ರದಯದಲ್ಲಿ ವಿಶೇಷ ವಾದ ಸ್ಥಾನ ವನ್ನು ಹೊಂದಿದ್ದೀರಿ .ಅಲ್ಲ್ಹಹು ನಿಮಗೆ ಯಾವಾಗಲು ಸುಖವನ್ನು ದಯಪಾಲಿಸಲಿ ಎಂದು ಪ್ರಾರ್ತಿಸುತ್ತೇನೆ.ನಾಳೆ ಇಂದ ನಡೆಯಲಿರುವ MGM ವಾರ್ಷಿಕೊಸ್ಸವ ಕಾರ್ಯಕ್ರಮ ದಲ್ಲಿ ನಮ್ಮೆಲ್ಲರ ಪ್ರೀತಿಯ ಅಜ್ಜಮ್ಮ ರನ್ನು ಸನ್ಮಾನಿಸ ಬೇಕೆಂದು ಕತರ್ ನಲ್ಲಿ ನೆಲೆಸಿರುವ ಎಲ್ಲಾ MGM ಹಳೆಯ ವಿದ್ಯಾರ್ಥಿ ಗಳ ಪರವಾಗಿ ಕಾಲೇಜಿನ ಆಡಳಿತ ಮಂಡಳಿಯನ್ನು ಕಳಕಳಿಯಿಂದ ಬೇಡಿಕೊಳ್ಳುತ್ತಿದ್ದೇನೆ.ಮಂಜುನಾಥ್ ಶೆಟ್ಟಿ ರವರಿಗೆ ಧನ್ಯವಾದಗಳು Good Work Keep it up & God bless you: Old Students MGM College;
Imran Manna , Sports Secretary, KMCA & EXCOM Tulu Koota Qatar.
M. Iqbal Manna, Social Activist. Doha Qatar
|
|