ಪುತ್ತೂರಿನ ನೂತನ ಬ್ರಹ್ಮರಥ : ಅತಿ ಎತ್ತರದ ನಡೆ ದೇಗುಲ |
ಪ್ರಕಟಿಸಿದ ದಿನಾಂಕ : 2010-03-12
ಬ್ರಹ್ಮರಥದಲ್ಲಿರುವ ಅಪೂರ್ವ ಕೆತ್ತನೆ.
ಪುತ್ತೂರು, ಮಾ. ೧೧: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯವು ಹತ್ತೂರುಗಳಿಗೆ ಪ್ರಸಿದ್ಧಿ ಪಡೆದಂತೆ ಪುತ್ತೂರಿನ ನೂತನ ಬ್ರಹ್ಮರಥವು ದಕ್ಷಿಣ ಭಾರತದಲ್ಲಿಯೇ ಅತಿ ಎತ್ತರವಾದ ಅಪೂರ್ವ ಕೆತ್ತನೆಯ ನಡೆ ದೇಗುಲವೆಂಬ ಪ್ರಸಿದ್ಧಿಗೆ ಪಾತ್ರವಾಗಲಿದೆ.
ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಉದ್ಯಮಿ ಎನ್. ಮುತ್ತಪ್ಪ ರೈ ಈ ಬೃಹತ್ ಬ್ರಹ್ಮರಥವನ್ನು ಮಾ. 22 ರಂದು ಶ್ರೀ ದೇವರಿಗೆ ಸಮರ್ಪಿಸಲಿದ್ದಾರೆ. ಚಕ್ರದಿಂದ ಪೀಠದ ತನಕ ಬ್ರಹ್ಮರಥವು 18.5 ಅಡಿ ಎತ್ತರವಾಗಿದೆ. ಪತಾಕೆ ಅಳವಡಿಕೆ ಮತ್ತು ಕಲಶದ ತುದಿಯಲ್ಲಿನ ಸತ್ತಿಗೆಯ ಸಹಿತ ನೆಲದಿಂದ ಬ್ರಹ್ಮರಥವು 71 ಅಡಿ ಎತ್ತರವನ್ನು ಹೊಂದಲಿದೆ.
ಬ್ರಹ್ಮ ರಥವು 20ಅಡಿ ಅಗಲವಿದ್ದು, 6 ಬೃಹತ್ ಚಕ್ರಗಳನ್ನು ಹೊಂದಿದೆ. ರಥದ ಹೊರ ಭಾಗದ ನಾಲ್ಕು ಚಕ್ರಗಳು 9.1 ಅಡಿ ಎತ್ತರವನ್ನು ಹೊಂದಿವೆ. ಬ್ರಹ್ಮರಥದ ಒಳಭಾಗದಲ್ಲಿ ಎರಡು ಚಕ್ರಗಳನ್ನು ಅಳವಡಿಸಲಾಗಿದೆ. ಬ್ರಹ್ಮರಥದ ಚಕ್ರಗಳು ಒಂದು ಸುತ್ತು ತಿರುಗಿದಾಗ ಬ್ರಹ್ಮರಥವು 27 ಅಡಿ ಮುಂದೆ ಚಲಿಸುತ್ತದೆ. 71ಅಡಿ ಎತ್ತರದ 40 ಟನ್ ತೂಕದ ಬೃಹತ್ ಬ್ರಹ್ಮರಥವು ಈ ಕಾರಣದಿಂದಲೇ ದಕ್ಷಿಣ ಭಾರತದಲ್ಲಿಯೇ ಅತ್ಯಂತ ಎತ್ತರವಾದ ಬ್ರಹ್ಮರಥ ಎಂದು ಗುರುತಿಸಲ್ಪಟ್ಟಿದೆ.
ರಥದ ವೈಶಿಷ್ಟ್ಯಗಳು
ಬ್ರಹ್ಮರಥವು ಧ್ವಜ ಆಯವನ್ನು ಹೊಂದಿದೆ. ಎದುರು ಮತ್ತು ಹಿಂಭಾಗದಲ್ಲಿ ಮೊಸಳೆ ಮೊಗದ ೬ ಜಂತಿಗಳು, ನಂದಿ, ಶಿವಲಿಂಗ ಹೂವಿನ ಕೆತ್ತನೆಯ ಚೌಕ, ಪದ್ಮಾಲಂಕಾರದ ಶೋಡಷ ಚೌಕ, ಅಷ್ಟ ದಿಕ್ಪಾಲಕರು, ಸುತ್ತಲೂ ೧೨ ಸಿಂಹಗಳ ಕೆತ್ತನೆಯ ಚಿತ್ರಗಳು ಹಾಗೂ ಕಡವಿನ ಕಂಬಗಳು, ಕ್ಷೇತ್ರ ಪುರಾಣಕ್ಕೆ ಸಂಬಂಧಿಸಿದ ವಿಗ್ರಹಗಳ ಸಾಲುಗಳು. ರುದ್ರಾಕ್ಷಿ ಮಾಲೆ ಮತ್ತು ಬೋದಿಗೆಯ ಕೆತ್ತನೆಯ ಚತುರ್ದಶ ಅಟ್ಟೆ ಹೀಗೆ ಹತ್ತು ಹಲವು ಅಪೂರ್ವ ಕೆತ್ತನೆಯ ವೈಶಿಷ್ಟ್ಯವನ್ನು ಪುತ್ತೂರು ಬ್ರಹ್ಮರಥವು ಹೊಂದಿದೆ. ಉಡುಪಿ ದೊಡ್ಡಣ ಗುಡ್ಡೆಯ ಶಿಲ್ಪಿಗಳಾದ ಕೃಷ್ಣಮೂರ್ತಿ ಆಚಾರ್ ಮತ್ತು ಸುದರ್ಶನ್ ಆಚಾರ್ ೨೨ ತಿಂಗಳ ನಿರಂತರ ಶ್ರಮದ ಮೂಲಕ ಬ್ರಹ್ಮರಥವನ್ನು ನಿರ್ಮಾಣಗೊಳಿಸಿದ್ದಾರೆ.
ಸುಮಾರು 500 ವರ್ಷಗಳ ಬಾಳ್ವಿಕೆ ಅವಧಿಯ ನಿರೀಕ್ಷೆಯಲ್ಲಿ ಕನಿಷ್ಠ 250 ವರ್ಷಗಳಷ್ಟು ಬೆಳೆದ ಹೆಬ್ಬಲಸು, ಕಿರಾಲು ಬೋಗಿ ಜಾತಿವಾರು ಮರಗಳನ್ನು ಈ ಬ್ರಹ್ಮರಥದ ಕೆತ್ತನೆಗೆ ಬಳಸಿಕೊಳ್ಳಲಾಗಿದೆ.
ನೂತನ ರಥಬೀದಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಬೃಹತ್ ಬ್ರಹ್ಮರಥವನ್ನು ಎಳೆಯಲು ನೂತನ ಕಾಂಕ್ರಿಟೀಕೃತ ರಥಬೀದಿ ಸಿದ್ಧಗೊಳ್ಳುತ್ತಿದೆ. 36 ಅಡಿ ಅಗಲದ 340 ಮೀಟರ್ ಉದ್ದದ ರಥಬೀದಿಯನ್ನು ನಿರ್ಮಿಸಲಾಗುತ್ತಿದ್ದು, ರಥಬೀದಿಯು 100 ಟನ್ ಧಾರಣಾ ಶಕ್ತಿ ಹೊಂದಿದೆ.
ಮಾ. 17-22: ಬ್ರಹ್ಮರಥೋತ್ಸವ
ಮಂಗಳೂರು: ಪುತ್ತೂರು ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮರಥ ಸಮರ್ಪಣೆ ಮತ್ತು ರಥೋತ್ಸವದ ಅಂಗವಾಗಿ ಮಾ. ೧೭ರಿಂದ ೨೨ರ ತನಕ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್‍ಯಕ್ರಮ ನಡೆಯಲಿವೆ.
ಎನ್. ಮುತ್ತಪ್ಪ ರೈ ದೇರ್ಲ ಮತ್ತು ಅವರ ಕುಟುಂಬಸ್ಥರು ಅಂದಾಜು1 ಕೋ. ರೂ. ವೆಚ್ಚದಲ್ಲಿ ಬ್ರಹ್ಮರಥವನ್ನು ನಿರ್ಮಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಸೇರಿದಂತೆ ವಿವಿಧ ಧಾರ್ಮಿಕ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಜಯಕರ್ನಾಟಕ ಜಿಲ್ಲಾ ಕಾರ್ಯದರ್ಶಿ ಶಶಿಧರ ಶೆಟ್ಟಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿ ಹೊರೆಕಾಣಿಕೆ ಸಂಗ್ರಹ ಕಾರ್ಯ ಮಾ. 17 ರಂದು ನಡೆಯಲಿದೆ ಎಂದು ವಿವರಿಸಿದರು.
ಜಯಕರ್ನಾಟಕ ಜಿಲ್ಲಾ ಅಧ್ಯಕ್ಷ ಶ್ರೀಕಾಂತ ಶೆಟ್ಟಿ, ಉಪಾಧ್ಯಕ್ಷ ವಾಸಿಂ, ಪ್ರ. ಕಾರ್ಯದರ್ಶಿ ಹರೀಶ್ ಅವರು ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-12
|
|
|