ಐಪಿಎಲ್: ವರ್ಣರಂಜಿತ ಉದ್ಘಾಟನೆಗೆ ಕ್ಷಣಗಣನೆ; ಸೌರವ್ ಗಂಗೂಲಿ ಸಾರಥ್ಯದ ಕೋಲ್ಕತ್ತ ನೈಟ್ ರೈಡರ್ಸ್ ಹಾಗು ಹಾಲಿ ಚಾಂಪಿಯನ್ ಡೆಕ್ಕನ್ ಚಾರ್ಜರ್ಸ್ ಉದ್ಘಾಟನಾ ಪಂದ್ಯ |
ಪ್ರಕಟಿಸಿದ ದಿನಾಂಕ : 2010-03-12
ತಂಡಗಳು 8, ಪಂದ್ಯಗಳು 60, ದಿನಗಳು 43, ಓವರ್‌ಗಳು 2400
ಜಾಗತಿಕ ಕ್ರಿಕೆಟ್ ಉತ್ಸವ ಎನಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ.
ಮುಂಬೈ: ಅದಕ್ಕಾಗಿ ಡಿ.ವೈ.ಪಾಟೀಲ್ ಕ್ರೀಡಾಂಗಣದತ್ತ ಎಲ್ಲರ ಚಿತ್ತ ಹರಿದಿದೆ. ಶುಕ್ರವಾರ ಸಂಜೆ ಟೂರ್ನಿಯ ಮೂರನೇ ಅವತರಣಿಕೆಗೆ ಚಾಲನೆ ಸಿಗಲಿದೆ. ಬಣ್ಣ ಬಣ್ಣದ ಲೋಕ ಸೃಷ್ಟಿಸಿ ಕ್ರಿಕೆಟ್ ಪ್ರೇಮಿಗಳ ಹೃದಯ ತಾಕಲು ಎಲ್ಲಾ ಸಿದ್ಧತೆ ನಡೆದಿದೆ.
ಸಂಗೀತದ ನಿನಾದ ಹಾಗೂ ನೃತ್ಯದ ಮೆರುಗಿನ ಮೂಲಕ ಕ್ರಿಕೆಟ್‌ಗೆ ಗ್ಲಾಮರ್ ಸ್ಪರ್ಶ ಸಿಗಲಿದೆ. ಎಂಟು ತಂಡಗಳ ನಾಯಕರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂತರರಾಷ್ಟ್ರೀಯ ಹೆಸರಾಂತ ಕಲಾವಿದರಾದ ಲಿಯೊನೆಲ್ ರಿಚಿ, ‘ಯುವಿ40’ಯ ಅಲಿ ಕ್ಯಾಂಬೆಲ್ ಹಾಗೂ ಬೋರ್ನ್ ಕಾರ್ಯಕ್ರಮಕ್ಕೆ ಹೊಳಪು ನೀಡಲಿದ್ದಾರೆ.
ಕ್ಯಾಂಬೆಲ್ ಅವರು ‘ಕಾಂಟ್ ಹೆಲ್ಪ್ ಫಾಲಿಂಗ್ ಇನ್ ಲವ್’ ಎಂಬ ಹಾಡನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ನಟಿ ದೀಪಿಕಾ ಪಡುಕೋಣೆ ಬಾಲಿವುಡ್ ಹಾಡುಗಳಿಗೆ ಸಹ ಕಲಾವಿದರ ಜೊತೆ ಹೆಜ್ಜೆ ಹಾಕಲಿದ್ದಾರೆ. ಉದ್ಘಾಟನೆ ಕಾರ್ಯಕ್ರಮದ ಬಳಿಕ ಹಾಲಿ ಚಾಂಪಿಯನ್ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ಹಣಾಹಣಿ ನಡೆಸಲಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮೊದಲ ಪಂದ್ಯವನ್ನು ಕೋಲ್ಕತ್ತದಲ್ಲಿ ಭಾನುವಾರ ನೈಟ್ ರೈಡರ್ಸ್ ಎದುರು ಆಡಲಿದೆ. ಚಾಲೆಂಜರ್ಸ್‌ನ 7 ಪಂದ್ಯ ಹಾಗೂ 2 ಸೆಮಿಫೈನಲ್ ಸೇರಿದಂತೆ 9 ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ಮೊದಲ ಪಂದ್ಯ ಜರುಗಲಿದೆ
ಚಾರ್ಜರ್ಸ್ ಗೆಲುವಿನ ‘ಫೇವರಿಟ್’ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಎರಡನೇ ಬಾರಿ ಉದ್ಘಾಟನಾ ಪಂದ್ಯ ಆಡಲು ಅವಕಾಶ ಲಭಿಸಿದೆ. ಆದರೆ ಎರಡನೇ ಅವತರಣಿಕೆಯಲ್ಲಿ ಕೊನೆಯ ಸ್ಥಾನ ಪಡೆದಿದ್ದ ಈ ತಂಡದ ಮುಂದೆ ಈಗ ದೊಡ್ಡ ಸವಾಲೇ ಎದುರಿದೆ.
ಮುಂಬೈ: ಸೌರವ್ ಗಂಗೂಲಿ ಸಾರಥ್ಯದ ನೈಟ್ ರೈಡರ್ಸ್ ನವಿ ಮುಂಬೈನ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ಹಾಲಿ ಚಾಂಪಿಯನ್ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.
ಆ್ಯಡಂ ಗಿಲ್‌ಕ್ರಿಸ್ಟ್ ಸಾರಥ್ಯದ ಡೆಕ್ಕನ್ ಚಾರ್ಜರ್ಸ್ ಮೇಲ್ನೋಟಕ್ಕೆ ಗೆಲುವಿನ ಫೇವರಿಟ್ ಆಗಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ ಕಳೆದ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ಈ ತಂಡ ಈಗ ಅದೇ ಯಶಸ್ಸನ್ನು ಮುಂದುವರಿಸಲು ಕಾತರವಾಗಿದೆ.
ಎರಡನೇ ಅವತರಣಿಕೆಯಲ್ಲಿ ಶಾರೂಖ್ ಖಾನ್ ಒಡೆತನದ ಕೋಲ್ಕತ್ತ ತಂಡ ಹಲವು ವಿವಾದಗಳಿಗೆ ಸಿಲುಕಿತ್ತು. ಆದರೆ ಈ ಬಾರಿ ಬ್ರೆಂಡನ್ ಮೆಕ್ಲಮ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಗಂಗೂಲಿಗೆ ಸಾರಥ್ಯ ನೀಡಲಾಗಿದೆ. ಅಂತರರಾಷ್ಟ್ರೀಯ ಕರ್ತವ್ಯ ಇರುವುದರಿಂದ ಕೆಲ ಪಂದ್ಯಗಳಿಗೆ ಕ್ರಿಸ್ ಗೇಲ್ ಹಾಗೂ ಮೆಕ್ಲಮ್ ಲಭ್ಯರಾಗುತ್ತಿಲ್ಲ. ಅದೇ ರೀತಿ ಹೈದರಾಬಾದ್ ತಂಡ ಡ್ವೇನ್ ಸ್ಮಿತ್, ಕೆಮರ್ ರೋಕ್, ರ್‍ಯಾನ್ ಹ್ಯಾರೀಸ್ ಅವರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಬೇಕಾಗಿದೆ.
ತಂಡಗಳು ಇಂತಿವೆ: ಡೆಕ್ಕನ್ ಚಾರ್ಜರ್ಸ್: ಆ್ಯಡಂ ಗಿಲ್‌ಕ್ರಿಸ್ಟ್ (ನಾಯಕ), ಹರ್ಷೆಲ್ ಗಿಬ್ಸ್, ವಿ.ವಿ.ಎಸ್.ಲಕ್ಷ್ಮಣ್, ರೋಹಿತ್ ಶರ್ಮ, ಆ್ಯಂಡ್ರ್ಯೂ ಸೈಮಂಡ್ಸ್, ಟಿ.ಸುಮನ್, ಡಿವಿ ರವಿ ತೇಜಾ, ವೈ.ವೇಣುಗೋಪಾಲ್ ರಾವ್, ಆರ್.ಪಿ.ಸಿಂಗ್, ಚಮಿಂದಾ ವಾಸ್, ಹರ್ಮಿತ್ ಸಿಂಗ್, ಪ್ರಗ್ಯಾನ್ ಓಜಾ, ಅನಿರುದ್ಧ ಸಿಂಗ್, ರಾಹುಲ್ ಶರ್ಮ, ಅಜರ್ ಬಿಲಾಕಿಯಾ, ಮೋನಿಷ್ ಮಿಶ್ರಾ. ಎ.ಆಶೀಶ್ ರೆಡ್ಡಿ, ಹಾಗೂ ಬಿ.ಸುಮಂತ್.
ಕೋಲ್ಕತ್ತ ನೈಟ್ ರೈಡರ್ಸ್: ಸೌರವ್ ಗಂಗೂಲಿ (ನಾಯಕ), ಬ್ರಾಡ್ ಹಾಡ್ಜ್, ಓವಾಯಿಸ್ ಷಾ, ಆ್ಯಂಜೆಲೊ ಮ್ಯಾಥ್ಯೂಸ್, ಲಕ್ಷ್ಮಿ ರತನ್ ಶುಕ್ಲಾ, ವೃದ್ಧಿಮಾನ್ ಸಹಾ, ಮುರಳಿ ಕಾರ್ತಿಕ್, ಇಶಾಂತ್ ಶರ್ಮ, ಅಜಂತ ಮೆಂಡೀಸ್, ಇಕ್ಬಾಲ್ ಅಬ್ದುಲ್ಲಾ, ಅರೋನ್ ವರುಣ್, ಅಜಿತ್ ಅಗರ್ಕರ್, ಎಕ್ಲಖಾ ಅಹ್ಮದ್, ಅಶೋಕ್ ದಿಂಡಾ, ಜಿ.ವಿಗ್ನೇಶ್, ಚಾರ್ಲ್ಸ್ ಲಾಂಗ್‌ವೆಲ್ಟ್, ಚಿರಾಗ್ ಪಠಾಕ್, ಮನೋಜ್ ತಿವಾರಿ, ಚೇತೇಶ್ವರ ಪೂಜಾರ, ರೋಹನ್ ಗಾವಸ್ಕರ್, ಹರ್ಷದ್ ಖಡಿವಾಲೆ.
ಪಂದ್ಯದ ಆರಂಭ: ರಾತ್ರಿ ಎಂಟು ಗಂಟೆಗೆ.
ಗಂಗೂಲಿ: ಹಿಂದಿನ ಘಟನೆಗಳ ಬಗ್ಗೆ ನನಗೆ ಅಷ್ಟೊಂದು ಆಸಕ್ತಿ ಇಲ್ಲ. ಈ ಬಾರಿಯ ಟೂರ್ನಿಗೆ ನಾವು ವಿಭಿನ್ನವಾಗಿ ಸಿದ್ಧರಾಗಿ ಬಂದಿದ್ದೇವೆ. ತಂಡದ ಆಟಗಾರರು ತುಂಬಾ ಖುಷಿಯಾಗಿದ್ದಾರೆ. ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ ಎಂದು ಕೋಲ್ಕತ್ತ ನೈಟ್ ರೈಡರ್ಸ್ ತಂಡದ ನಾಯಕ ಸೌರವ್ ಗಂಗೂಲಿ ತಿಳಿಸಿದ್ದಾರೆ.
ಫೋರ್ಸ್ ಒನ್: ಮಹಾರಾಷ್ಟ್ರ ಸರ್ಕಾರ ಹೊಸದಾಗಿ ರಚಿಸಿರುವ ‘ಫೋರ್ಸ್ ಒನ್’ ಭದ್ರತಾ ಪಡೆ ಐಪಿಎಲ್ ಪಂದ್ಯ ನಡೆಯಲಿರುವ ಕ್ರೀಡಾಂಗಣದ ಭದ್ರತೆಯ ಪರಿಶೀಲನೆ ನಡೆಸಿದೆ.
ಮಾಂಗೂಸ್ ಬ್ಯಾಟ್: ಚೆನ್ನೈ ಕಿಂಗ್ಸ್ ಇಲೆವೆನ್ ತಂಡದ ಮ್ಯಾಥ್ಯು ಹೇಡನ್ ಚೆನ್ನೈನಲ್ಲಿ ಮಾಂಗೂಸ್ ಬ್ಯಾಟ್‌ಗಳಿಗೆ ಚಾಲನೆ ನೀಡಿದರು. ಈ ಬ್ಯಾಟ್‌ನ ಹ್ಯಾಂಡಲ್ ಉದ್ದವಾಗಿದ್ದು ಚೆಂಡು ಬಾರಿಸುವ ಸ್ಥಳ ಚಿಕ್ಕದಾಗಿದೆ.
ಪಾಕ್ ಮನವಿ ವಜಾ (ಕರಾಚಿ ವದಿ): ತಮ್ಮ ಆಟಗಾರರನ್ನು ಪರಿಗಣಿಸದ ಐಪಿಎಲ್ ಆಡಳಿತದ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪಾಕ್ ಕ್ರಿಕೆಟ್ ಮಂಡಳಿ ಮಾಡಿದ್ದ ಮನವಿಯನ್ನು ಐಸಿಸಿ ತಿರಸ್ಕರಿಸಿದೆ. ದೇಶಿ ಟೂರ್ನಿಗಳ ಬಗ್ಗೆ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಐಸಿಸಿ ಹೇಳಿದೆ.
ಇಪ್ಪತ್ತು ಓವರ್‌ಗಳ ಗಮ್ಮತ್ತು
ಮುಂಬೈ: ಫುಟ್ಬಾಲ್ ಪ್ರೀಮಿಯರ್ ಲೀಗ್, ಬಾಸ್ಕೆಟ್‌ಬಾಲ್ ಲೀಗ್ ನಂತರ ಜಗತ್ತಿನ ಎಲ್ಲ ಕ್ರೀಡೆಗಳನ್ನು ಬದಿಗೊತ್ತಿ ಮುನ್ನುಗುತ್ತಿರುವ ಕ್ರಿಕೆಟ್‌ನ ಪ್ರತಿಷ್ಠಿತ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮೂರನೇ ವರ್ಷದ ಹಬ್ಬಕ್ಕೆ ಶುಕ್ರವಾರ ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣ ಸಾಕ್ಷಿಯಾಗಲಿದೆ.
೪೩ ದಿನಗಳ ಕಾಲ ೬೦ ಪಂದ್ಯಗಳ ಕ್ರಿಕೆಟ್ ಹಬ್ಬಕ್ಕೆ ಈ ಬಾರಿಗೆ ಮುಂಬೈನಲ್ಲಿ ಮುನ್ನುಡಿ ದೊರೆಯಲಿದೆ. ಅದೇ ರೀತಿ ಫೈನಲ್ ಪಂದ್ಯವೂ ಮುಂಬೈನಲ್ಲೇ ನಡೆಯಲಿದೆ.
ಶುಕ್ರವಾರದ ಆರಂಭೋತ್ಸವದಲ್ಲಿ ಭಾರತ ಹಾಗೂ ಜಾಗತಿಕ ಸಾಂಸ್ಕೃತಿ ಲೋಕ ಎಂದಿನಂತೆ ಕ್ರಿಕೆಟ್ ಪ್ರೇಮಿಗಳ ಮನವನ್ನು ತಣಿಸಲಿದೆ. ಮೊದಲ ಪಂದ್ಯದಲ್ಲೇ ಕಳೆದ ಬಾರಿಯ ಚಾಂಪಿಯನ್ ಡೆಕ್ಕನ್ ಚಾರ್ಜರ್ಸ್ ಹಾಗೂ ಕೊನೆ ಸ್ಥಾನ ಪಡೆದಿದ್ದ ಕೋಲ್ಕತ ನೈಟ್ ರೈಡರ್ಸ್ ತಂಡಗಳು ಸ್ಪರ್ಧಿಸಲಿವೆ.
ಉದ್ಘಾಟನಾ ಸಮಾರಂಭದಲ್ಲಿ ಮನೋರಂಜನ ಕಾರ್ಯಕ್ರಮವನ್ನು ನೀಡಲಿರುವ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ ಪ್ರಕಾರ ಮೈನವಿರೇಳಿಸುವ ಸಾಹಾಸ, ದಿಗ್ಭ್ರಮೆಗೊಳಿಸುವ ಬೆಳಕಿನಾಟ, ಯುಬಿ೪೦ ಮತ್ತು ಬಾರ್ನ್ ಎಗೈನ್‌ನ ಲಿಯೊನೆಲ್ ರಿಚಿ ಮತ್ತು ಆಲಿ ಕ್ಯಾಂಬೆಲ್ ಅವರ ಕಾರ್ಯಕ್ರಮಗಳು ಡಿವೈ ಪಾಟೀಲ್ ಅಂಗಣದಲ್ಲಿ ಅನಾವರಣಗೊಳ್ಳಲಿವೆ.
ಉದ್ಘಾಟನಾ ಸಮಾರಂಭಕ್ಕೆ ಮುನ್ನ ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿರುವ ೮ ತಂಡಗಳ ನಾಯಕರು ಎಂಸಿಸಿ -ಸ್ಪಿರಿಟ್ ಆಫ್ ಕ್ರಿಕೆಟ್ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಂತರ ಕ್ರಿಕೆಟ್ ಸ್ಫೂರ್ತಿಗಾಗಿ ೮ ನಾಯಕರು ಸಹಿ ಮಾಡಲಿದ್ದಾರೆ.
ಕೈ ಜೋಡಿಸಿದ ಯುನೆಪ್: ಈ ಬಾರಿ ಐಪಿಎಲ್ ಪರಿಸರದ ಬಗ್ಗೆಯೂ ಕಾಳಜಿ ವಹಿಸಿದೆ. ವಿಶ್ವಸಂಸ್ಥೆ ಪರಿಸರ ಕಾರ್ಯಕ್ರಮ (ಯುನೈಟೆಡ್ ನೇಷನ್ಸ್ ಎನ್ವಿರಾನ್‌ಮೆಂಟ್ ಪ್ರೋಗ್ರಾಮ್)ದ ಪ್ರಕಾರ ಪುನಃ ಬಳಸಬಹುದಾದ ವಸ್ತುಗಳಿಂದ ನಿರ್ಮಿಸಿದ ಭೂಪಟದ ಮೇಲೆ ನಾಯಕರು ಸಹಿ ಮಾಡಲಿದ್ದಾರೆ. ಕ್ರಿಕೆಟ್ ಮೂಲಕ ಪರಿಸರ ರಕ್ಷಿಸುವ ಸಂದೇಶ ಸಾರುವುದೇ ಈ ಬಾರಿಯ ಐಪಿಎಲ್‌ನ ಉದ್ದೇಶವಾಗಿದೆ.
ನಂತರ ಆಲಿ ಕ್ಯಾಂಬೆಲ್ ಹಾಗೂ ಸಂಗಡಿಗರು ಜನಪ್ರಿಯ ಪಾಪ್ ಹಾಡು ’ಕಾಂಟ್ ಹೆಲ್ಪ್ ಫಾಲಿಂಗ್ ಇನ್ ಲವ್’ಗೆ ಹೆಜ್ಜೆ ಹಾಕಲಿದ್ದಾರೆ. ಬಾರ್ನ್ ಎಗೈನ್ ಗ್ರೂಪ್‌ನಿಂದ ಅಬ್ಬಾಸ್ ಸೂಪರ್ ಹಿಟ್ ಹಾಡು ’ಡಾನ್ಸಿಂಗ್ ಕ್ವೀನ್’ ನೃತ್ಯ ರೂಪದಲ್ಲಿ ಪ್ರದರ್ಶನಗೊಳ್ಳಲಿದೆ. ಇದರಲ್ಲಿ ೧೬ ಮಂದಿ ನೃತ್ಯಗಾರರು ಪಾಲ್ಗೊಳ್ಳಲಿದ್ದಾರೆ. ನಂತರ ೨೪೦ ಮಂದಿ ಕಲಾವಿದರು ಹೊಳಪಿನ ಉಡುಪು ಧರಿಸಿ ಐಪಿಎಲ್ ಮತ್ತೆ ಭಾರತಕ್ಕೆ ಬಂದಿತು ಎಂಬ ಸಂದೇಶವನ್ನು ಸಾರಲಿದ್ದಾರೆ. ನಂತರ ಅಂಗಣದಲ್ಲಿ ಕತ್ತಲು ಆವರಿಸುತ್ತಿದ್ದಂತೆ ಕಿರಣಗಳ ಹೊಸ ಜಗತ್ತು ಅಲ್ಲಿ ಸೃಷ್ಚಿಯಾಗಲಿದೆ. ಎಂಟು ತಂಡಗಳ ಧ್ವಜ ಬೆಳಕಿನ ನಡುವೆ ರಾರಾಜಿಸಲಿದೆ. ಎರಡು ವರ್ಷಗಳ ಐಪಿಎಲ್‌ನ ಸಾಧನೆ ಬೃಹತ್ ಪರದೆಯ ಮೇಲೆ ಕ್ರಿಕೆಟ್ ಅಭಿಮಾನಿಗಳ ಮನ ತಣಿಸಲಿದೆ.
ದೀಪಿಕಾ ದೀಪ: ದೀಪಗಳ ಬಣ್ಣ ಮರೆಯಾಗುತ್ತಿದ್ದಂತೆ ಖ್ಯಾತ ಬಾಲಿವುಡ್ ತಾರೆ, ಕನ್ನಡತಿ ದೀಪಿಕಾ ಪಡುಕೋಣೆ ಐಪಿಎಲ್ ಆರಂಭಕ್ಕೆ ಹೊಸ ರಂಗು ನೀಡಲಿದ್ದಾರೆ. ಕ್ಯಾಲಿಫೋರ್ನಿಯಾದ black eyed peas ತಂಡದ ಜನಪ್ರಿಯ ಹಾಡು ‘ಟು ನೈಟ್ ಈಸ್ ಗೋಯಿಂಗ್ ಟು ಬಿ ಗುಡ್ ನೈಟ್’ ಹಾಡಿಗೆ ದೀಪಿಕಾ ಹೆಜ್ಜೆ ಹಾಕಲಿದ್ದಾರೆ. ಸ್ವತಃ ತಾನೇ ನಟಿಸಿರುವ ’ಕಾರ್ತಿಕ್ ಕಾಲಿಂಗ್ ಕಾರ್ತಿಕ್’ ಚಿತ್ರದ ’ತೇರಿ ಅದಾಯೇಂ’ ಮತ್ತು ‘ಲವ್ ಆಜ್ ಕಲ್’ಚಿತ್ರದ ‘ಟ್ವಿಸ್ಟ್’ಗೆ ಕುಣಿಯಲಿದ್ದಾರೆ.
ಸೊಂಟ ತಿರುಗಿಸುತ್ತ ರೊಮಾಂಚನಗೊಳಿಸುವ ಹೂಲಾ ಹೂಪ್ ಜಗ್ಲಿಂಗ್ ತಂಡ ಐಪಿಎಲ್‌ನ ೮ ತಂಡಗಳ ಲಾಂಛನಗಳನ್ನು ಅಂಗಣದಲ್ಲಿ ಬೆಳಗಲಿದ್ದಾರೆ. ಇದು ಮುಗಿಯುತ್ತಿದ್ದಂತೆ ಅಂಗಣಕ್ಕೆ ಮುತ್ತಿಡಲಿದೆ ಲೇಸರ್ ಕಿರಣ. ಲೇಸರ್ ಕಿರಣಗಳು ಮಿಂಚಿ ಮರೆಯಾಗುತ್ತಿದ್ದಂತೆ ಲಿಯೋನೆಲ್ ರಿಚಿ ’ಡ್ಯಾನ್ಸಿಂಗ್ ಆನ್ ದಿ ಸೀಲಿಂಗ್’ ಹಾಡು ತೇಲಿ ಬರಲಿದೆ.
ಮನರಂಜನಾ ಕಾರ್ಯಕ್ರಮ ಮುಗಿಯುತ್ತಿದ್ದಂತೆ ನಗರದ ಆಗಸದಲ್ಲಿ ಸುಡುಮದ್ದುಗಳ ಬೆಳಕಿನ ಮೆರವಣಿಗೆ ನಡೆಯಲಿದೆ. ನಂತರ ಡೆಕ್ಕನ್ ಚಾರ್ಜ ರ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳ ನಡುವೆ ಹೋರಾಟ ನಡೆಯಲಿದೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-12 00:00:00
|
|
| suresh, udupi | 2010-03-12 | | Mutahlik Where are u now? Why you didn\'t teach your sisters to wear full indian dress instead of showing their figure? may be companies sponsoring them paid You??? |
|